ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಜೋ ಸೈಮನ್ ನಿಧನ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋ ಸೈಮನ್‌ ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಫಿಲ್ಮ್ ಚೇಂಬರ್ ಸಭೆಯಲ್ಲಿ ಭಾಗಿಯಾಗಿದ್ದ ನಿರ್ದೇಶಕ ಜೋ ಸೈಮನ್ ಅವರಿಗೆ ಸಭೆಯಲ್ಲಿದ್ದಾಗಲೇ ಹೃದಯಾಘಾತವಾಗಿದ್ದು, ತಕ್ಷಣವೇ ಅವರನ್ನು ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಜೋ ಸೈಮನ್‌ ಅಪಾರ ಕೊಡುಗೆ ನೀಡಿದ್ದಾರೆ. ನಟನಾಗಿ, ನಿರ್ದೇಶಕನಾಗಿ, ಗೀತ ಸಾಹಿತಿಯಾಗಿ, ಬರಹಗಾರರಾಗಿ ಜೋ ಸೈಮನ್‌ ಜನಪ್ರಿಯತೆ ಪಡೆದಿದ್ದಾರೆ. ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದ ಜೋ ಸೈಮನ್‌ ಅವರು ಉತ್ತಮ ನಟರೂ ಆಗಿದ್ದರು.

ಮೂಲತಃ ಮಂಡ್ಯದವರಾದ ಜೋ ಸೈಮನ್ ಅವರು, 1946ರಲ್ಲಿ ಜನಿಸಿದ್ದರು. 1967ರಲ್ಲಿ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆರ್‌.ಎನ್‌. ಜಯಗೋಪಾಲ, ಕಣಗಾಲ ಪ್ರಭಾಕರ ಶಾಸ್ತ್ರಿ, ಎಸ್.ವಿ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಅವರು ಅನೇಕ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದರು. ನಂತರ 1977ರಲ್ಲಿ ʼಒಂದು ಪ್ರೇಮದ ಕಥೆʼ ಸಿನೆಮಾ ನಿರ್ದೇಶಿಸುವ ಮೂಲಕ ಮೂಲಕ ಸ್ವತಂತ್ರ ನಿರ್ದೇಶರಾಗಿದ್ದರು. ನಂತರ ಅವರು ಕನ್ನಡದ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.
ಅನೇಕ ಯಶಸ್ವಿ ಸಿನೆಮಾಗಳನ್ನು ನಿರ್ದೇಶಿಸಿದ್ದ ಅವರು ವಿಷ್ಣವರ್ಧನ್‌, ಅಂಬರೀಷ್‌,

ಅರ್ಜುನ್‌ ಸರ್ಜಾ ಮುಂತಾದ ನಾಯಕ ನಟರ ಸಿನೆಮಾಗಳನ್ನು ಜೋ ಸೈಮನ್‌ ನಿರ್ದೇಶನ ಮಾಡಿದ್ದಾರೆ. ಸಾಹಸ ಸಿಂಹ ಡಾ ವಿಷ್ಣುವರ್ಧನ್ ಜೊತೆ ಹೆಚ್ಚು ಸಿನೆಮಾಗಳಲ್ಲಿ ಕೆಲಸ ಮಾಡಿದ್ದರು. 1977 ರಲ್ಲಿ ತೆರೆಗೆ ಬಂದ ‘ಒಂದು ಪ್ರೇಮದ ಕಥೆ’, 1980 ರ ದಶಕದಲ್ಲಿ ಬಂದ ‘ಸಿಂಹ ಜೋಡಿ’ ಹಾಗೂ ‘ನನ್ನ ರೋಷ ನೂರು ವರುಷ’, ‘ಮಹಾ ಪ್ರಚಂಡರು’, ‘ಸಾಹಸ ಸಿಂಹ’, ‘ಊರಿಗೆ ಉಪಕಾರಿ’, ‘ನ್ಯಾಯ ಗೆದ್ದಿತು’, ‘ಸಿಡಿದೆದ್ದ ಸಹೋದರ’, ‘ರೌಡಿ ರಾಜ’, ‘ಪ್ರೇಮ ಜ್ಯೋತಿ’, ‘ಒಡೆದ ಹಾಲು’, ‘ರಕ್ತ ತಿಲಕ’, ‘ಮಹಾ ಪುರುಷ’, ‘ಪ್ರೇಮ ಜಾಲ’, ‘ಭರತ್’, ‘ರಾಜ ಸಿಂಹ’, ‘ಹಾಂಗ್‌ಕಾಂಗ್‌ನಲ್ಲಿ ಏಜೆಂಟ್ ಅಮರ್‌’, ‘ಸ್ನೇಹದ ಕಡಲಲ್ಲಿ’, ‘ಸಮರ ಸಿಂಹ’, ‘ರವಿವರ್ಮ’, ‘ವಾಂಟೆಡ್’, ‘ಟೈಮ್‌ ಬಾಂಬ್’ ಮುಂತಾದ ಚಲನಚಿತ್ರಗಳಿಗೆ ಜೋ ಸೈಮನ್‌ ಆಕ್ಷನ್ ಕಟ್ ಹೇಳಿದ್ದಾರೆ. 2019ರಲ್ಲಿ ತೆರೆಕಂಡ ಪಯಣ, ಜೋ ಸೈಮನ್‌ ನಿರ್ದೇಶನದ ಕೊನೆಯ ಸಿನಿಮಾ ಆಗಿದೆ.

ಪ್ರಮುಖ ಸುದ್ದಿ :-   ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement