ಕೊಲಂಬೊ: ಭಾನುವಾರ ಶ್ರೀಲಂಕಾದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಇಶಾನ್ ಕಿಶನ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಭಾರತದ ಬೌಲರ್‌ಗಳ ಮಾರಕ ಬೌಲಿಂಗ್ ದಾಳಿಗೆ ಪಾಕಿಸ್ತಾನ ಮಣಿದಿದೆ. ಪಾಕ್ ವಿರುದ್ಧ 61 ರನ್‌ಗಳ ಬೃಹತ್ ಜಯ ದಾಖಲಿಸಿದ ಭಾರತ, ಟಿ20 ವಿಶ್ವಕಪ್‌ನ ಸೂಪರ್-8 ಹಂತವನ್ನು ಅಧಿಕೃತವಾಗಿ ಖಚಿತಪಡಿಸಿಕೊಂಡಿದೆ. ಈ ಗೆಲುವಿನ ಮೂಲಕ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ ಭಾರತ 8-1 ಅಂತರದ ಮೇಲುಗೈ ಸಾಧಿಸಿದಂತಾಗಿದೆ.
ಕಿಶನ್ ಅಬ್ಬರ: ಭಾರತದ ಸವಾಲಿನ ಮೊತ್ತ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ನಾಯಕ ಅಘಾ ಸಲ್ಮಾನ್ ಬೌಲಿಂಗ್‌ನಲ್ಲಿ ಅಭಿಷೇಕ್ ಶರ್ಮಾ ಬೇಗನೆ ನಿರ್ಗಮಿಸಿದರು. ಆದರೆ, ನಂತರ ಇಶಾನ್ ಕಿಶನ್ (77 ರನ್, 40 ಎಸೆತ) ಪಾಕ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಕಿಶನ್ ಅವರ ಇನ್ನಿಂಗ್ಸ್‌ನಲ್ಲಿ 6 ಫೋರ್ ಹಾಗೂ ಮೂರು ಆಕರ್ಷಕ ಸಿಕ್ಸರ್‌ಗಳಿದ್ದವು. ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ತಿಲಕ್ ವರ್ಮಾ (11) ಅವರೊಂದಿಗೆ ಸೇರಿ 87 ರನ್‌ಗಳ ಜೊತೆಯಾಟವಾಡಿದರು. ಕಠಿಣ ಪಿಚ್‌ನಲ್ಲಿ ಕಿಶನ್ ಆಡಿದ 77 ರನ್‌ಗಳ ಇನ್ನಿಂಗ್ಸ್ ಪಂದ್ಯದ ಗತಿಯನ್ನೇ ಬದಲಿಸಿತು.
ಕೊನೆಯಲ್ಲಿ ಸೂರ್ಯಕುಮಾರ್ ಯಾದವ್ (32) ಮತ್ತು ಶಿವಂ ದುಬೆ (27) ಉಪಯುಕ್ತ ರನ್ ಸೇರಿಸಿದರು. ಅಂತಿಮ ಓವರ್‌ನಲ್ಲಿ ಶಾಹೀನ್ ಅಫ್ರಿದಿ ಬೌಲಿಂಗ್‌ನಲ್ಲಿ 15 ರನ್ ಚಚ್ಚಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿತು. ಪಾಕಿಸ್ತಾನದ ಪರ ಸೈಮ್ ಅಯೂಬ್ 25 ರನ್ ನೀಡಿ 3 ವಿಕೆಟ್ ಪಡೆದರು.
ಭಾರತದ ಬೌಲಿಂಗ್ ದಾಳಿಗೆ ಪಾಕ್ ತತ್ತರ
176 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಭಾರತದ ವೇಗಿಗಳು ಮೊದಲ ಓವರ್‌ನಿಂದಲೇ ಸಿಂಹಸ್ವಪ್ನವಾದರು. ಹಾರ್ದಿಕ್ ಪಾಂಡ್ಯ ಮೊದಲ ಓವರ್‌ನಲ್ಲೇ ಸಾಹಿಬ್‌ಜಾದಾ ಫರ್ಹಾನ್ ವಿಕೆಟ್ ಪಡೆದು ಪೆವಿಲಿಯನ್ ಹಾದಿ ತೋರಿಸಿದರು. ನಂತರ ಬಂದ ಜಸ್ಪ್ರೀತ್ ಬುಮ್ರಾ (2/17) ತಮ್ಮ ಮೊದಲ ಓವರ್‌ನಲ್ಲೇ ಸೈಮ್ ಅಯೂಬ್ ಮತ್ತು ಸಲ್ಮಾನ್ ಅಲಿ ಅಘಾ ಅವರನ್ನು ಔಟ್ ಮಾಡುವ ಮೂಲಕ ಪಾಕ್ ಬೆನ್ನೆಲುಬು ಮುರಿದರು.
ಕೇವಲ 13 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಪಾಕಿಸ್ತಾನ ಚೇತರಿಸಿಕೊಳ್ಳಲೇ ಇಲ್ಲ. ಬಾಬರ್ ಅಜಮ್ (13) ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಮಧ್ಯಮ ಓವರ್‌ಗಳಲ್ಲಿ ಕುಲದೀಪ್ ಯಾದವ್, ಅಕ್ಷರ್ ಪಟೇಲ್, ತಿಲಕ್ ವರ್ಮಾ ಮತ್ತು ವರುಣ್ ಚಕ್ರವರ್ತಿ ಎದುರಾಳಿಗಳನ್ನು ಸಂಪೂರ್ಣವಾಗಿ ಕಟ್ಟಿಹಾಕಿದರು. ಭಾರತದ ನಾಲ್ವರು ಸ್ಪಿನ್ನರ್‌ಗಳು ಪಾಕ್ ಬ್ಯಾಟರ್‌ಗಳಿಗೆ ರನ್ ಗಳಿಸಲು ಅವಕಾಶವೇ ನೀಡಲಿಲ್ಲ. ಅಂತಿಮವಾಗಿ ಪಾಕಿಸ್ತಾನ 114 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಶರಣಾಯಿತು.ಹಾರ್ದಿಕ್, ಬುಮ್ರಾ, ಚಕ್ರವರ್ತಿ ಹಾಗೂ ಅಕ್ಷರ ಪಟೇಲ್ ತಲಾ ಎರಡು ವಿಕೆಟ್ ಪಡೆದರೆ, ತಿಲಕ ವರ್ಮಾ ಹಾಗೂ ಕುಲದೀಪ ಯಾದವ್ ತಲಾ ಒಂದು ವಿಕೆಟ್ ಪಡೆದರು. ರನ್ ವಿಚಾರದಲ್ಲಿ ಪಾಕಿಸ್ತಾನ ವಿರುದ್ಧ ಟಿ20 ಮಾದರಿಯಲ್ಲಿ ಭಾರತಕ್ಕೆ ಸಿಕ್ಕ ಅತಿ ದೊಡ್ಡ ಜಯವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ