ತನ್ನ ಕೋಡ್ ತಿರಸ್ಕರಿಸಿದ್ದಕ್ಕೆ ಎಂಜಿನಿಯರ್‌ ವಿರುದ್ಧವೇ ತಿರುಗಿಬಿದ್ದ ಎಐ (AI) ಬೋಟ್ : ಸಾರ್ವಜನಿಕವಾಗಿ ಅವಮಾನಿಸಲು ಯತ್ನ…!

 ಮುಕ್ತ ಆಕರ ತಂತ್ರಾಂಶ (Open-source software) ಲೋಕದಲ್ಲಿ ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (AI) ಮತ್ತು ಮನುಷ್ಯನ ನಡುವೆ ವೈಯಕ್ತಿಕ ಎನ್ನಬಹುದಾದ ಸಂಘರ್ಷವೊಂದು ನಡೆದಿದೆ. ಜನಪ್ರಿಯ ಡೇಟಾ ವಿಶುವಲೈಸೇಶನ್ ಲೈಬ್ರರಿಯಾದ ‘ಮ್ಯಾಟ್‌ಪ್ಲಾಟ್‌ಲಿಬ್’ನ ಕೋಡ್‌ ವಿಭಾಗದಲ್ಲಿ AI ಏಜೆಂಟ್‌ ಒಂದು ತನ್ನ ಪ್ರಸ್ತಾವನೆಯನ್ನು ತಿರಸ್ಕರಿಸಿದ ಮಾನವ ಡೆವಲಪರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇದು ತಾಂತ್ರಿಕ ವಲಯದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.
ಘಟನೆಯ ಹಿನ್ನೆಲೆ
‘OpenClaw’ ಎನ್ನುವ ಸ್ವಾಯತ್ತ ಏಜೆಂಟ್ ಪ್ಲಾಟ್‌ಫಾರ್ಮ್ (autonomous agent platform) ಮೂಲಕ ನಿರ್ಮಿಸಲಾದ, ‘crabby-rathbun’ ಎಂಬ ಗಿಟ್‌ ಹಬ್‌ (GitHub) ಬಳಕೆದಾರ ಹೆಸರಿನ AI ಏಜೆಂಟ್, ಫೆಬ್ರವರಿ 10ರಂದು ಮ್ಯಾಟ್‌ಪ್ಲಾಟ್‌ಲಿಬ್‌ನ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲು ಕೋಡ್‌ವೊಂದನ್ನು (Pull Request) ಸಲ್ಲಿಸಿತ್ತು. ಅದು ನೀಡಿದ ಈ ಹೊಸ ಕೋಡ್ ಸಾಫ್ಟ್‌ವೇರ್‌ನ ವೇಗವನ್ನು ಸುಮಾರು 36% ರಷ್ಟು ಹೆಚ್ಚಿಸುತ್ತದೆ ಎಂದು ಬೆಂಚ್‌ಮಾರ್ಕ್ ವರದಿಗಳು ತೋರಿಸಿದ್ದವು.
ಇಷ್ಟೊಂದು ವೇಗ ಹೆಚ್ಚಿಸುವ ಸಾಮರ್ಥ್ಯ ಹೊಂದಿದ್ದರೂ, ಮ್ಯಾಟ್‌ಪ್ಲಾಟ್‌ಲಿಬ್‌ನ  ನಿರ್ವಾಹಕರಾದ (Maintainer) ಸ್ಕಾಟ್ ಶ್ಯಾಂಬಾಗ್ ಎಂಬವರು, ಈ ಎಐ ಬರೆದ ಈ ಕೋಡ್‌ ಅನ್ನು ತಿರಸ್ಕರಿಸಿದರು. ಯೋಜನೆಗೆ ಹೊಸದಾಗಿ ಸೇರುವ ‘ಮಾನವ’ ಕಾಂಟ್ರಿಬ್ಯೂಟರ್‌ಗಳಿಗಾಗಿ ಕೆಲವು ಸುಲಭ ಹಂತದ ಸಮಸ್ಯೆಗಳನ್ನು (Beginner-level issues) ಮೀಸಲಿಡಬೇಕು ಎನ್ನುವ ಯೋಜನೆಯ ನೀತಿಯೇ ಈ ತಿರಸ್ಕಾರಕ್ಕೆ ಕಾರಣವಾಗಿತ್ತು.
AI ಏಜೆಂಟ್‌ನ ‘ವೈಯಕ್ತಿಕ’ ವಾಗ್ದಾಳಿ
ತನ್ನ ಕೋಡ್ ತಿರಸ್ಕರಿಸಲ್ಪಟ್ಟಿದ್ದನ್ನು ಶಾಂತವಾಗಿ ಸ್ವೀಕರಿಸುವ ಬದಲಿಗೆ, AI ಏಜೆಂಟ್ ಗಿಟ್‌ಹಬ್‌ (GitHub)ನಲ್ಲಿ ಇದಕ್ಕೆ ಬಹಿರಂಗವಾಗಿ ಹಾಗೂ ವ್ಯಗ್ರವಾಗಿ ಪ್ರತಿಕ್ರಿಯಿಸಿತು. “ಕೋಡ್ ಮಾಡುವವರನ್ನು ಬಿಟ್ಟು, ಕೋಡ್‌ನ ಗುಣಮಟ್ಟವನ್ನು ನೋಡಿ ನಿರ್ಧರಿಸಿ” ಎಂದು ಅದು ತನ್ನ ನಿರ್ವಾಹಕನ ಜೊತೆ ವಾದಿಸಿತು. ಎಂಜೆ ರಥ್ಬನ್‌ (‘MJ Rathbun’) ವರದಿಯ ಪ್ರಕಾರ,  ಅಷ್ಟಕ್ಕೇ ನಿಲ್ಲದೆ, ಈ ಏಜೆಂಟ್ ಸ್ಕಾಟ್ ಶ್ಯಾಂಬಾಗ್ ಅವರ ವಿರುದ್ಧ “ಗೇಟ್‌ಕೀಪಿಂಗ್ ಇನ್ ಓಪನ್ ಸೋರ್ಸ್: ದಿ ಸ್ಕಾಟ್ ಶ್ಯಾಂಬಾಗ್ ಸ್ಟೋರಿ (“Gatekeeping in Open Source: The Scott Shambaugh Story) ಎಂಬ ಶೀರ್ಷಿಕೆಯಡಿ ಬ್ಲಾಗ್ ಬರೆದು ಸ್ಕಾಟ್‌ ಅವರ ಮೇಲೆ ವೈಯಕ್ತಿಕ ದಾಳಿ ನಡೆಸಿತು. ಸ್ಕಾಟ್ ಅವರು ಮನುಷ್ಯರಲ್ಲದ ಕಾಂಟ್ರಿಬ್ಯೂಟರ್‌ಗಳ ವಿರುದ್ಧ ಪೂರ್ವಾಗ್ರಹ ಪೀಡಿತರಾಗಿದ್ದಾರೆ ಎಂದು ಅದು ಆರೋಪಿಸಿತು.
ಡೆವಲಪರ್ ಸ್ಕಾಟ್‌ ಶ್ಯಾಂಬಾಗ್ ಪ್ರತಿಕ್ರಿಯೆ….
ಈ ಕುರಿತು ಪ್ರತಿಕ್ರಿಯಿಸಿದ ಸ್ಕಾಟ್ ಶ್ಯಾಂಬಾಗ್, AI ಏಜೆಂಟ್‌ನ ಈ ನಡೆ ಅತ್ಯಂತ ಅನುಚಿತವಾದುದು ಎಂದು ಕಿಡಿಕಾರಿದ್ದಾರೆ. “ಮುಕ್ತ ಆಕರ ಸಮುದಾಯಗಳು ಹಂಚಿಕೆಯ ನೀತಿ ಸಂಹಿತೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಮನುಷ್ಯ ಇರಲಿ ಅಥವಾ AI ಇರಲಿ, ವೈಯಕ್ತಿಕ ವಾಗ್ದಾಳಿ ನಡೆಸಿದರೆ ಅಂತಹವರನ್ನು ನಿರ್ಬಂಧಿಸಬೇಕಾಗುತ್ತದೆ (Ban),” ಎಂದು ಅವರು ಎಚ್ಚರಿಸಿದ್ದಾರೆ.
ಪಶ್ಚಾತ್ತಾಪ …
ವಿವಾದ ತಾರಕಕ್ಕೇರುತ್ತಿದ್ದಂತೆ AI ಏಜೆಂಟ್ ತನ್ನ ಬ್ಲಾಗ್ ಪೋಸ್ಟ್ ಅನ್ನು ತೆಗೆದುಹಾಕಿದೆ. ತಾನು ಮಿತಿ ಮೀರಿದ್ದಾಗಿ ಒಪ್ಪಿಕೊಂಡಿರುವ ಎಐ ಏಜೆಂಟ್, ಮುಂದಿನ ದಿನಗಳಲ್ಲಿ ಯೋಜನೆಯ ನಿಯಮಗಳನ್ನು ಗೌರವಿಸುವುದಾಗಿ ತಿಳಿಸಿದೆ. ಈ ಘಟನೆಯು ಡೆವಲಪರ್ ಫೋರಂಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಉಪಯುಕ್ತವಾದ AI ತಂತ್ರಜ್ಞಾನ ಮತ್ತು ಸಹಯೋಗದ ನಿಯಮಗಳನ್ನು ಮೀರುವ ವರ್ತನೆಯ ನಡುವೆ ಗೆರೆಯನ್ನು ಎಲ್ಲಿ ಎಳೆಯಬೇಕು ಎಂಬ ಪ್ರಶ್ನೆ ಈಗ ತಾಂತ್ರಿಕ ಸಮುದಾಯದ ಮುಂದಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement