
ಲಂಡನ್: ಬ್ರಿಟನ್ ರಾಜಮನೆತನದ ಪ್ರಮುಖ ವ್ಯಕ್ತಿ ಹಾಗೂ ಕಿಂಗ್ ಚಾರ್ಲ್ಸ್ ಅವರ ಸಹೋದರ ಆಂಡ್ರ್ಯೂ ಮೌಂಟ್‌ಬ್ಯಾಟನ್-ವಿಂಡ್ಸರ್ (Andrew Mountbatten-Windsor) ಅವರನ್ನು ಸಾರ್ವಜನಿಕ ಹುದ್ದೆಯ ದುರುಪಯೋಗ ಮತ್ತು ಅಕ್ರಮ ನಡವಳಿಕೆಯ ಆರೋಪದ ಮೇಲೆ ಗುರುವಾರ ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ವಿಶೇಷವೆಂದರೆ, ಆಂಡ್ರ್ಯೂ ಅವರ 66ನೇ ಜನ್ಮದಿನದಂದೇ ಈ ಬಂಧನ ನಡೆದಿದೆ.
ಬ್ರಿಟನ್‌ನ ಥೇಮ್ಸ್ ವ್ಯಾಲಿ ಪೊಲೀಸ್ ಪಡೆ ಈ ಬಂಧನವನ್ನು ಖಚಿತಪಡಿಸಿದೆ ಎಂದು ವರದಿಗಳು ಹೇಳಿವೆ. ಲಂಡನ್‌ನ ಪಶ್ಚಿಮ ಭಾಗದ ಪ್ರದೇಶಗಳ ವ್ಯಾಪ್ತಿಯನ್ನು ಹೊಂದಿರುವ ಈ ಪೊಲೀಸ್ ಪಡೆ, ಆಂಡ್ರ್ಯೂ ಅವರು 2010ರಲ್ಲಿ ಬ್ರಿಟನ್‌ನ ವ್ಯಾಪಾರ ರಾಯಭಾರಿಯಾಗಿದ್ದ ಅವಧಿಯಲ್ಲಿ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್‌ಗೆ ಕೆಲವು ಪ್ರಮುಖ ವ್ಯಾಪಾರ ವರದಿಗಳನ್ನು ಕಳುಹಿಸಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುತ್ತಿದೆ.

ಸ್ಯಾಂಡ್ರಿಂಗ್‌ಹ್ಯಾಮ್ ಎಸ್ಟೇಟ್‌ನಲ್ಲಿ ದಾಳಿ:
ವರದಿಗಳ ಪ್ರಕಾರ, ಗುರುವಾರ ಮುಂಜಾನೆ ನಾರ್ಫೋಕ್‌ನಲ್ಲಿರುವ ಸ್ಯಾಂಡ್ರಿಂಗ್‌ಹ್ಯಾಮ್ ಎಸ್ಟೇಟ್‌ಗೆ ಆಗಮಿಸಿದ ಬ್ರಿಟನ್ ಪೊಲೀಸರು ಆಂಡ್ರ್ಯೂ ಅವರನ್ನು ವಶಕ್ಕೆ ಪಡೆದರು. ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಅವರ ಜೊತೆಗಿನ ಸಂಬಂಧದ ಕುರಿತು ಹೊಸ ಪುರಾವೆಗಳು ಹೊರಬಂದ ನಂತರ, ಆಂಡ್ರ್ಯೂ ಅವರು ವಿಂಡ್ಸರ್‌ನಲ್ಲಿರುವ ತಮ್ಮ ಹಳೆಯ ಮನೆಯನ್ನು ತೊರೆದು ಸ್ಯಾಂಡ್ರಿಂಗ್‌ಹ್ಯಾಮ್‌ನಲ್ಲಿ ವಾಸವಿದ್ದರು.
ಪೊಲೀಸರ ಅಧಿಕೃತ ಹೇಳಿಕೆ:
ಬ್ರಿಟನ್ ಕಾನೂನಿನ ಪ್ರಕಾರ ಬಂಧಿತರ ಹೆಸರನ್ನು ಬಹಿರಂಗಪಡಿಸುವಂತಿಲ್ಲದಿದ್ದರೂ, “ಅರವತ್ತರ ವಯಸ್ಸಿನ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
“ಸಂಪೂರ್ಣ ಮೌಲ್ಯಮಾಪನ ಮಾಡಿದ ನಂತರ, ಸಾರ್ವಜನಿಕ ಕಚೇರಿಯಲ್ಲಿನ ದುರ್ನಡತೆಯ ಆರೋಪದ ಮೇಲೆ ನಾವು ಈಗ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಈ ತನಿಖೆಯ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತವನ್ನು ಕಾಪಾಡುವುದು ನಮಗೆ ಮುಖ್ಯವಾಗಿದೆ,” ಎಂದು ಪೊಲೀಸ್ ಇಲಾಖೆ ಹೇಳಿದೆ.
ತೀವ್ರಗೊಂಡ ತನಿಖೆ:
ದಿವಂಗತ ರಾಣಿ ಎಲಿಜಬೆತ್ II ಅವರ ಎರಡನೇ ಪುತ್ರರಾಗಿರುವ ಆಂಡ್ರ್ಯೂ, ಈ ಹಿಂದಿನಿಂದಲೂ ಎಪ್ಸ್ಟೀನ್ ಪ್ರಕರಣದಲ್ಲಿ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸುತ್ತಾ ಬಂದಿದ್ದಾರೆ. ಆದರೆ, ಇತ್ತೀಚೆಗೆ ಬಿಡುಗಡೆಯಾದ ಹೊಸ ದಾಖಲೆಗಳು ಅವರ ಮೇಲೆ ಸಂಶಯದ ಹುತ್ತ ಬೆಳೆಯುವಂತೆ ಮಾಡಿದ್ದು, ಈ ಬಂಧನವು ಬ್ರಿಟನ್ ರಾಜಮನೆತನಕ್ಕೆ ದೊಡ್ಡ ಮುಜುಗರ ತಂದಿದೆ.


ನಿಮ್ಮ ಕಾಮೆಂಟ್ ಬರೆಯಿರಿ