ಇರಾನ್ ಮೇಲೆ ದಾಳಿಗೆ ಅಮೆರಿಕ ಸಿದ್ಧತೆ ? ಮಧ್ಯಪ್ರಾಚ್ಯದಲ್ಲಿ 2003ರ ಬಳಿಕ ಅತಿದೊಡ್ಡ ಸೇನೆ ಜಮಾವಣೆ ಮಾಡಿದ ಟ್ರಂಪ್‌

ತೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಶರವೇಗದಲ್ಲಿ ಏರುತ್ತಿದ್ದು, ಅಮೆರಿಕವು ಯಾವುದೇ ಕ್ಷಣದಲ್ಲಿ ಇರಾನ್ ಮೇಲೆ ದಾಳಿ ನಡೆಸಲು ಸಜ್ಜಾಗಿದೆ. ‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿಯ ಪ್ರಕಾರ, 2003ರ ಇರಾಕ್ ಆಕ್ರಮಣದ ನಂತರ ಅಮೆರಿಕವು ಮಧ್ಯಪ್ರಾಚ್ಯದಲ್ಲಿ ಇಷ್ಟೊಂದು ಬೃಹತ್ ಪ್ರಮಾಣದ ವಾಯುಪಡೆಯನ್ನು ಎಂದಿಗೂ ನಿಯೋಜಿಸಿರಲಿಲ್ಲ.
ಅಮೆರಿಕವು ತನ್ನ ಅತ್ಯಾಧುನಿಕ F-35 ಮತ್ತು F-22 ರೇಪ್ಟರ್ ಸ್ಟೆಲ್ತ್ ಫೈಟರ್ ಜೆಟ್‌ಗಳನ್ನು ಈಗಾಗಲೇ ಮಧ್ಯಪ್ರಾಚ್ಯಕ್ಕೆ ರವಾನಿಸಿದೆ. ಇದರೊಂದಿಗೆ ದಾಳಿ ಮತ್ತು ಎಲೆಕ್ಟ್ರಾನಿಕ್-ವಾರ್‌ಫೇರ್ ವಿಮಾನಗಳನ್ನು ಹೊತ್ತ ಎರಡನೇ ಅಣುಶಕ್ತಿ ಚಾಲಿತ ಯುದ್ಧನೌಕೆ (Aircraft Carrier) ಹೋಗುತ್ತಿದೆ. ಬೃಹತ್ ವೈಮಾನಿಕ ದಾಳಿಗಳನ್ನು ನಿಯಂತ್ರಿಸುವ ‘ಕಮಾಂಡ್-ಅಂಡ್-ಕಂಟ್ರೋಲ್’ ವಿಮಾನಗಳು ತಲುಪಿವೆ.
ಜೋರ್ಡಾನ್‌ನ ಮುವಾಫಕ್ ಸಾಲ್ಟಿ ಮತ್ತು ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆಗಳಲ್ಲಿ ಡಜನ್ಗಟ್ಟಲೆ ಯುದ್ಧ ವಿಮಾನಗಳು ಬೀಡುಬಿಟ್ಟಿವೆ. ನೌಕಾಪಡೆಯ ಸುಮಾರು 13 ಹಡಗುಗಳು ಮತ್ತು ಕ್ಷಿಪಣಿ ನಿರೋಧಕ ವ್ಯವಸ್ಥೆ ಹೊಂದಿರುವ 9 ಡಿಸ್ಟ್ರೋಯರ್‌ಗಳು ಸಮುದ್ರದಲ್ಲಿ ಸನ್ನದ್ಧವಾಗಿವೆ.
ಟ್ರಂಪ್ ನಿರ್ಧಾರಕ್ಕೆ ಕಾಯುತ್ತಿರುವ ಸೇನೆ
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಂತಿಮ ಒಪ್ಪಿಗೆ ಸಿಕ್ಕ ಕೂಡಲೇ ದಾಳಿ ಆರಂಭವಾಗುವ ಸಾಧ್ಯತೆಯಿದೆ. ಆದರೆ, ಈ ದಾಳಿಯ ಸ್ವರೂಪ ಹೇಗಿರಬೇಕು ಎಂಬ ಬಗ್ಗೆ ಟ್ರಂಪ್ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ವರದಿಗಳು ತಿಳಿಸಿವೆ. ಇರಾನ್‌ನ ಪರಮಾಣು ಕೇಂದ್ರಗಳು ಮತ್ತು ಕ್ಷಿಪಣಿ ನೆಲೆಗಳನ್ನು ನಾಶಪಡಿಸುವುದು ಗುರಿಯಾಗಿದೆ ಎಂದು ಹೇಳಲಾಗಿದೆ. ಇರಾನ್‌ನ ಪ್ರಸ್ತುತ ರಾಜಕೀಯ ನಾಯಕತ್ವವನ್ನು ಹತ್ತಿಕ್ಕುವುದು ಅಥವಾ ಪದಚ್ಯುತಗೊಳಿಸುವುದು ಅದರ ಉದ್ದೇಶವಾಗಿದೆ ಎನ್ನಲಾಗಿದೆ.
2003ಕ್ಕೆ ಹೋಲಿಸಿದರೆ ವ್ಯತ್ಯಾಸವೇನು?
1991ರ ಗಲ್ಫ್ ವಾರ್ ಅಥವಾ 2003ರ ಇರಾಕ್ ಯುದ್ಧಕ್ಕೆ ಹೋಲಿಸಿದರೆ ಈಗಿನ ಸೈನ್ಯದ ಸಂಖ್ಯೆ ಕಡಿಮೆಯಿದ್ದರೂ, ತಂತ್ರಜ್ಞಾನ ಅತ್ಯಂತ ಬಲಿಷ್ಠವಾಗಿದೆ. ಈ ಬಾರಿ ಸೌದಿ ಅರೇಬಿಯಾ ಮತ್ತು ಯುಎಇ ತಮ್ಮ ವಾಯುಪ್ರದೇಶವನ್ನು ಬಳಸಲು ಅಮೆರಿಕಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಅಮೆರಿಕದ ಕಾರ್ಯಾಚರಣೆ ಬಹುತೇಕ ಜೋರ್ಡಾನ್‌ನಿಂದ ನಡೆಯಲಿದೆ.
ಒಂದೆಡೆ ಯುದ್ಧದ ಸಿದ್ಧತೆ ನಡೆಯುತ್ತಿದ್ದರೆ, ಮತ್ತೊಂದೆಡೆ ಜಿನೀವಾದಲ್ಲಿ ಉಭಯ ದೇಶಗಳ ನಡುವೆ ಮಾತುಕತೆಗಳು ನಡೆಯುತ್ತಿವೆ. “ಮಾತುಕತೆಯಲ್ಲಿ ಸ್ವಲ್ಪ ಪ್ರಗತಿಯಾಗಿದೆ, ಆದರೆ ಇನ್ನೂ ಅಂತರ ಉಳಿದಿದೆ” ಎಂದು ವೈಟ್ ಹೌಸ್ ತಿಳಿಸಿದೆ. ಇರಾನ್ ಮಾತುಕತೆಯ ಮೂಲಕ ಕಾಲಹರಣ ಮಾಡುತ್ತಿದೆ ಎಂಬ ಅನುಮಾನವೂ ಟ್ರಂಪ್ ತಂಡಕ್ಕಿದೆ. ಒಂದು ವೇಳೆ ಮಾತುಕತೆ ವಿಫಲವಾದರೆ, ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ.
ಇರಾನ್ ತಿರುಗೇಟಿನ ಭೀತಿ
ಇರಾನ್ ಸಹ ಸುಮ್ಮನೆ ಕೂರುವ ಸಾಧ್ಯತೆಯಿಲ್ಲ. ತನ್ನಲ್ಲಿರುವ ಬೃಹತ್ ಕ್ಷಿಪಣಿ ಸಂಗ್ರಹದ ಮೂಲಕ ಅಮೆರಿಕದ ನೆಲೆಗಳ ಮೇಲೆ ದಾಳಿ ಮಾಡಬಹುದು ಅಥವಾ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಬಂದ್ ಮಾಡುವ ಮೂಲಕ ಜಾಗತಿಕ ಆರ್ಥಿಕತೆಗೆ ಪೆಟ್ಟು ನೀಡುವ ಸಾಮರ್ಥ್ಯ ಇರಾನ್ ಹೊಂದಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement