ತಮ್ಮ ಮದುವೆಯ ದಿನವೇ ಆತ್ಮಹತ್ಯೆ ಮಾಡಿಕೊಂಡ ಅಕ್ಕ ತಂಗಿ…!

ಜೋಧಪುರ: ರಾಜಸ್ಥಾನದ ಜೋಧಪುರ ಜಿಲ್ಲೆಯ ಮನೈ ಗ್ರಾಮದಲ್ಲಿ ವಿವಾಹವಾಗಬೇಕಿದ್ದ ಇಬ್ಬರು ಸಹೋದರಿಯರು ಮದುವೆಯಾಗುವ ಕೆಲವೇ ಗಂಟೆಗಳ ಮೊದಲು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಮೃತ ದುರ್ದೈವಿಗಳನ್ನು ಶೋಭಾ (25) ಮತ್ತು ವಿಮಲಾ (23) ಎಂದು ಗುರುತಿಸಲಾಗಿದೆ. ಈ ಇಬ್ಬರು ಸಹೋದರಿಯರ ವಿವಾಹವು ಶನಿವಾರ (ಫೆ.21) ನಿಗದಿಯಾಗಿತ್ತು. ಶುಕ್ರವಾರ ರಾತ್ರಿಯವರೆಗೂ ಮನೆಯಲ್ಲಿ ಮದುವೆಯ ತಯಾರಿ ಹಾಗೂ ಆಚರಣೆಗಳು ಸಂಭ್ರಮದಿಂದ ನಡೆದಿದ್ದವು.
ಶುಕ್ರವಾರ ಮಧ್ಯರಾತ್ರಿ ಸುಮಾರು 12 ಗಂಟೆಯವರೆಗೆ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಸಹೋದರಿಯರು ನಂತರ ಮಲಗಲು ತೆರಳಿದ್ದರು. ಆದರೆ, ಮುಂಜಾನೆ 4 ಗಂಟೆಯ ಸುಮಾರಿಗೆ ಇಬ್ಬರ ಆರೋಗ್ಯವೂ ಏಕಾಏಕಿ ಕ್ಷೀಣಿಸಿದೆ. ತಕ್ಷಣವೇ ಕುಟುಂಬ ಸದಸ್ಯರು ಅವರನ್ನು ಜೋಧಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅವರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆಯಿಂದ ಮೃತದೇಹಗಳನ್ನು ಮನೆಗೆ ತಂದ ಕುಟುಂಬಸ್ಥರು, ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದರು. ಈ ವಿಷಯ ತಿಳಿದ ಎಡಿಸಿಪಿ (ವೆಸ್ಟ್) ರೋಷನ್ ಮೀನಾ ನೇತೃತ್ವದ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ಅಂತ್ಯಕ್ರಿಯೆಯನ್ನು ತಡೆದಿದೆ. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಲಾಯಿತು.
ಪ್ರಾಥಮಿಕ ತನಿಖೆಯ ಪ್ರಕಾರ, ಸಹೋದರಿಯರು ವಿಷಕಾರಿ ಪದಾರ್ಥವನ್ನು ಸೇವಿಸಿರುವುದು ಸಾವಿಗೆ ಕಾರಣ ಎನ್ನಲಾಗಿದೆ. ಆದರೆ ಪೊಲೀಸರಿಗೆ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ (Suicide Note) ಲಭ್ಯವಾಗಿಲ್ಲ. “ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಸದ್ಯಕ್ಕೆ ಆತ್ಮಹತ್ಯೆಗೆ ಪ್ರೇರೇಪಿಸಿದ ಕಾರಣ ತಿಳಿದುಬಂದಿಲ್ಲ, ನಾವು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement