ನವದೆಹಲಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಶೃಂಗಸಭೆ(AI Summit)ಯಲ್ಲಿ ಯುವ ಕಾಂಗ್ರೆಸ್ ನಡೆಸಿದ ಅರೆಬೆತ್ತಲೆ ಪ್ರತಿಭಟನೆಯು ಈಗ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ರಾಜಕೀಯ ಮುಜುಗರವಾಗಿ (Albatross) ಪರಿಣಮಿಸಿದೆ. ಮೊದಲಿಗೆ ವಿಪಕ್ಷಗಳ ‘ಇಂಡಿಯಾ’ (INDIA) ಮೈತ್ರಿಕೂಟದ ಮಿತ್ರಪಕ್ಷಗಳು ಈ ಪ್ರತಿಭಟನೆಯಿಂದ ಅಂತರ ಕಾಯ್ದುಕೊಂಡಿದ್ದವು. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಬಹಿರಂಗವಾಗಿ ಟೀಕಿಸಿದ ನಂತರ, ಮಿತ್ರಪಕ್ಷಗಳು ಕೂಡ ಧ್ವನಿ ಎತ್ತುತ್ತಿವೆ. ಇದಕ್ಕಿಂತ ಹೆಚ್ಚಾಗಿ, ಕಾಂಗ್ರೆಸ್‌ನ ಹಿರಿಯ ನಾಯಕರುಗಳೇ ಈಗ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕಿ, ಮಾಜಿ ಕೇಂದ್ರ ಸಚಿವೆ ಮತ್ತು ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವಾ ಅವರು, “ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ವಿರುದ್ಧ ಪ್ರತಿಭಟನೆಗಳ ವಿಷಯಕ್ಕೆ ಬಂದಾಗ ಶಿಸ್ತು ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ” ಎಂದು ಹೇಳಿದ್ದಾರೆ.
ಹೆಸರು ಹೇಳಲಿಚ್ಛಿಸದ ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕರು, “ಪ್ರತಿಭಟನೆ ನಡೆಸುವುದು ವಿಪಕ್ಷದ ಹಕ್ಕು ಹೌದಾದರೂ, ಪ್ರತಿಭಟನೆಗೆ ಆರಿಸಿಕೊಂಡ ಸ್ಥಳ ಸರಿಯಿರಲಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಈಗ ತನ್ನ ನಾಯಕರಿಗೆ ಯುವ ಕಾಂಗ್ರೆಸ್‌ನ ಕ್ರಮವನ್ನು ಸಮರ್ಥಿಸಿಕೊಳ್ಳುವಂತೆ ಸ್ಪಷ್ಟ ಸೂಚನೆ ನೀಡಿದೆ. ಆದರೆ ಮಿತ್ರಪಕ್ಷಗಳನ್ನು ಸಮಾಧಾನಪಡಿಸುವುದು ಅದಕ್ಕೆ ಅಷ್ಟು ಸುಲಭವಲ್ಲ.
ಸಂಸತ್ತಿನಲ್ಲಿ ಸತತವಾಗಿ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಾ ಬಂದಿರುವ ಅಖಿಲೇಶ ಯಾದವ್ ಅವರ ಸಮಾಜವಾದಿ ಪಕ್ಷ ಮತ್ತು ಲಾಲು ಪ್ರಸಾದ ಯಾದವ್ ಅವರ ರಾಷ್ಟ್ರೀಯ ಜನತಾ ದಳ (RJD) ಕೂಡ ಈಗ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡಿವೆ. ಬಿಜೆಪಿ “ಸುಳ್ಳುಗಾರ” ಮತ್ತು ಸರ್ಕಾರವು ತಪ್ಪು ಮಾಹಿತಿಯನ್ನು ಹರಡುತ್ತದೆ ಎಂಬುದು ನಿಜವಾದರೂ, ವಿದೇಶಿ ಪ್ರತಿನಿಧಿಗಳ ಮುಂದೆ ಮತ್ತು ವಿದೇಶಗಳಲ್ಲಿ ಭಾರತಕ್ಕೆ ಅವಮಾನ ತರುವಂತಹ ಇಂತಹ ಪ್ರತಿಭಟನೆಗಳನ್ನು ತಾನು ಬೆಂಬಲಿಸುವುದಿಲ್ಲ ಎಂದು ಅಖಿಲೇಶ್ ಯಾದವ್ ಸ್ಪಷ್ಟವಾಗಿ ಹೇಳಿದ್ದಾರೆ.
ಆರ್‌ಜೆಡಿ ನಾಯಕ ಮನೋಜ್ ಝಾ ಮಾತನಾಡಿ, “ಅನೇಕ ವಿಷಯಗಳ ಬಗ್ಗೆ, ವಿಶೇಷವಾಗಿ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ದೇಶದೊಳಗೆ ಸರ್ಕಾರದ ವಿರುದ್ಧ ಆಕ್ರೋಶವಿದೆ. ಆದರೂ ಎಐ ಶೃಂಗಸಭೆಯಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸುವುದು ಸರಿಯಾದ ನಿರ್ಧಾರವಲ್ಲ. ಪ್ರತಿಭಟನೆಗೆ ಸರಿಯಾದ ಸ್ಥಳವನ್ನು ಆಯ್ಕೆ ಮಾಡುವುದು ಮುಖ್ಯ, ಈ ಸ್ಥಳ ಭಿನ್ನವಾಗಿರಬೇಕಿತ್ತು,” ಎಂದು ಹೇಳಿದ್ದಾರೆ.
ಶಿವಸೇನೆಯ (ಉದ್ಧವ್ ಠಾಕ್ರೆ ಬಣ) ಅರವಿಂದ್ ಸಾವಂತ್ ಮತ್ತು ಆದಿತ್ಯ ಠಾಕ್ರೆ ಅವರು ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಳ್ಳುವ ಹೇಳಿಕೆಗಳನ್ನು ನೀಡಿದ್ದಾರೆ. ರಾಜಕೀಯದಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ, ಆದರೆ ಪ್ರತಿಭಟನೆಯ ಸ್ಥಳದ ಬಗ್ಗೆ ಅರಿವಿರಬೇಕು. ಎಐ ಶೃಂಗಸಭೆಯು ಒಂದು ಅಂತಾರಾಷ್ಟ್ರೀಯ ವೇದಿಕೆಯಾಗಿದ್ದು, ಪ್ರತಿಭಟನೆಯನ್ನು ತಪ್ಪಿಸಬೇಕಿತ್ತು ಎಂದು ಸಾವಂತ್ ಹೇಳಿದ್ದಾರೆ.ಇದಕ್ಕೆ ಧ್ವನಿಗೂಡಿಸಿದ ಆದಿತ್ಯ ಠಾಕ್ರೆ, ಶೃಂಗಸಭೆಯು ಒಂದು ವೃತ್ತಿಪರ ವೇದಿಕೆಯಾಗಿದ್ದು, ಅದು ರಾಜಕೀಯ ಪ್ರತಿಭಟನೆಯ ಸ್ಥಳವಾಗಬಾರದಿತ್ತು ಎಂದಿದ್ದಾರೆ.
ಪಶ್ಚಿಮ ಬಂಗಾಳದ ಐಟಿ ಸಚಿವ ಬಾಬುಲ್ ಸುಪ್ರಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, “ಅಂತಾರಾಷ್ಟ್ರೀಯ ನಾಯಕರು ಮತ್ತು ಜಾಗತಿಕ ಉದ್ಯಮದ ಗಣ್ಯರು ಭಾಗವಹಿಸುವ ವೇದಿಕೆಯಲ್ಲಿ ಪ್ರತಿಭಟನೆ ಮಾಡುವುದು ದೇಶದ ಆದ್ಯತೆಗಳ ಬಗ್ಗೆ ನಕಾರಾತ್ಮಕ ಸಂದೇಶವನ್ನು ರವಾನಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ, ಆದರೆ ಜವಾಬ್ದಾರಿಯನ್ನು ಪ್ರದರ್ಶಿಸುವುದು ಅಷ್ಟೇ ಮುಖ್ಯ. ರಾಜಕೀಯ ಭಿನ್ನಾಭಿಪ್ರಾಯಗಳಿಗಾಗಿ ಹೋರಾಡಬಹುದು, ಆದರೆ ಅದಕ್ಕಾಗಿ ದೇಶದ ಘನತೆ ಮತ್ತು ಗೌರವವನ್ನು ಒತ್ತೆ ಇಡಬಾರದು,” ಎಂದು ಬರೆದುಕೊಂಡಿದ್ದಾರೆ.
ಮಿತ್ರಪಕ್ಷಗಳ ಈ ಒಮ್ಮತದ ಪ್ರತಿಕ್ರಿಯೆಯು ಕಾಂಗ್ರೆಸ್‌ಗೆ ದೊಡ್ಡ ಪಾಠವಾಗುವ ಸಾಧ್ಯತೆಯಿದೆ. ಈ ಹಿಂದೆ ಅನೇಕ ನಾಯಕರು ವೈಯಕ್ತಿಕವಾಗಿ ಕಾಂಗ್ರೆಸ್ ನೀತಿಗಳನ್ನು ಪ್ರಶ್ನಿಸಿದ್ದರೂ, ಈ ಮಟ್ಟದ ಸಾಮೂಹಿಕ ಅಸಮ್ಮತಿ ವ್ಯಕ್ತವಾಗಿರುವುದು ವಿರಳ.


ನಿಮ್ಮ ಕಾಮೆಂಟ್ ಬರೆಯಿರಿ