ದೆಹಲಿಗೆ ಹಾರುತ್ತಿದ್ದ ಏರ್ ಆಂಬ್ಯುಲೆನ್ಸ್ ಪತನ : ರೋಗಿ ಸೇರಿ ಏಳು ಮಂದಿ ದುರ್ಮರಣ

ಚಾತ್ರ (ಜಾರ್ಖಂಡ್): ಜಾರ್ಖಂಡದ ಚಾತ್ರ ಜಿಲ್ಲೆಯ ಸಿಮಾರಿಯಾ ಸಮೀಪದ ದಟ್ಟ ಅರಣ್ಯ ಪ್ರದೇಶದಲ್ಲಿ ಏರ್ ಆಂಬ್ಯುಲೆನ್ಸ್ ಪತನಗೊಂಡಿದ್ದು, ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಸೇರಿದಂತೆ ಎಲ್ಲಾ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ (ಫೆಬ್ರವರಿ 24) ತಿಳಿಸಿದ್ದಾರೆ.
ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ಬೀಚ್‌ಕ್ರಾಫ್ಟ್ C90 (Beechcraft C90) ವಿಮಾನವು ಸೋಮವಾರ (ಫೆಬ್ರವರಿ 23) ಸಂಜೆ ರಾಂಚಿಯಿಂದ ದೆಹಲಿಗೆ ತೆರಳುತ್ತಿತ್ತು. ರಾಂಚಿ ವಿಮಾನ ನಿಲ್ದಾಣದಿಂದ ಸಂಜೆ 7:11ಕ್ಕೆ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ, ಅಂದರೆ ಸುಮಾರು 7:30ರ ಸುಮಾರಿಗೆ ವಿಮಾನವು ಸಂಪರ್ಕ ಕಳೆದುಕೊಂಡು ಸಿಮಾರಿಯಾದ ಬರಿಯಾತು ಪಂಚಾಯತ ವ್ಯಾಪ್ತಿಯ ಅರಣ್ಯದಲ್ಲಿ ಪತನಗೊಂಡಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ಪೈಲಟ್‌ಗಳಾದ ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್ ಮತ್ತು ಕ್ಯಾಪ್ಟನ್ ಸವ್ರಾಜದೀಪ್ ಸಿಂಗ್ ಹಾಗೂ ರೋಗಿ ಸಂಜಯಕುಮಾರ (41), ಡಾ. ವಿಕಾಸಕುಮಾರ ಗುಪ್ತಾ, ಪ್ಯಾರಾಮೆಡಿಕ್ ಸಚಿನ್ ಕುಮಾರ ಮಿಶ್ರಾ, ಅರ್ಚನಾ ದೇವಿ ಮತ್ತು ಧುರು ಕುಮಾರ ಎಂದು ಗುರುತಿಸಲಾಗಿದೆ.
ಲತೇಹರ್ ಜಿಲ್ಲೆಯ ಚಾಂದ್ವಾ ನಿವಾಸಿ ಸಂಜಯಕುಮಾರ ಅವರು ಶೇ. 65 ರಷ್ಟು ಸುಟ್ಟ ಗಾಯಗಳಿಂದ ರಾಂಚಿಯ ದೇವಕಮಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರ ಕುಟುಂಬದವರು ಖಾಸಗಿ ಏರ್ ಆಂಬ್ಯುಲೆನ್ಸ್ ಮೂಲಕ ದೆಹಲಿಗೆ ಕರೆದೊಯ್ಯುತ್ತಿದ್ದಾಗ ಈ ದುರಂತ ಸಂಭವಿಸಿದೆ.
“ಎಲ್ಲಾ ಏಳು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಚಾತ್ರದ ಸದರ್ ಆಸ್ಪತ್ರೆಗೆ ತರಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ,” ಎಂದು ಚಾತ್ರ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement