ವೀಡಿಯೊ | ಕರ್ನಾಟಕದ ಸುಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಆರಂಭ : ಗದ್ದುಗೆಯಲ್ಲಿ ದೇವಿ ವಿರಾಜಮಾನ

ಶಿರಸಿ: ಕರ್ನಾಟಕದ ಅತಿದೊಡ್ಡ ಜಾತ್ರೆಯಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು ರಥೋತ್ಸವ ಬುಧವಾರ ಅತ್ಯಂತ ಸಡಗಡ ಸಂಭ್ರಮದಿಂದ ಚಾಲನೆಗೊಂಡಿತು. ರಥದಲ್ಲಿ ಆಗಮಿಸಿದ ಭಕ್ತರ ಆರಾಧ್ಯ ದೈವ ಮಾರಿಕಾಂಬಾ ದೇವಿಯು  ಜಾತ್ರಾ  ಗದ್ದುಗೆಗೆ ಆಗಮಿಸಿ ಬುಧವಾರ ಪ್ರತಿಷ್ಠಾಪನೆಗೊಂಡಿದ್ದಾಳೆ..
 ಶ್ರೀ ಮಾರಿಕಾಂಬೆಯ ದರ್ಶನಕ್ಕಾಗಿ ಆಗಮಿಸಿದ ಲಕ್ಷಾಂತರ ಭಕ್ತರು ಈ ರಥೋತ್ಸವಕ್ಕೆ ಸಾಕ್ಷಿಯಾಗುವ ಮೂಲಕ ದೇವಿಯನ್ನು ಕಣ್ತುಂಬಿಕೊಂಡು ಕೃತಾರ್ಥರಾದರು.
ಮಂಗಳವಾರ ಮಧ್ಯರಾತ್ರಿ ದೇವಿಯ ಕಲ್ಯಾಣೋತ್ಸವ ಆರಂಭವಾಯಿತು. ಜಾತ್ರಾ ಮಹೋತ್ಸವದ ಪ್ರಮುಖ ಘಟ್ಟವಾದ ದೇವಿಯ ಈ ‘ಕಲ್ಯಾಣೋತ್ಸವ’ ಮಂಗಳವಾರ ತಡರಾತ್ರಿ ಅತ್ಯಂತ ಸಂಪ್ರದಾಯಬದ್ಧವಾಗಿ ನಡೆಯಿತು. ಮಾರಿಕಾಂಬಾ ದೇವಿಯನ್ನು ಮಧುವಣಗಿತ್ತಿಯಂತೆ ಅಲಂಕರಿಸಲಾಗಿತ್ತು. ಸಾವಿರಾರು ಭಕ್ತರು ಈ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಂಡರು.
ಬುಧವಾರ ಮುಂಜಾನೆ ದೇವಿ ರಥಾರೂಢರಾಗುವುದನ್ನು ಭಕ್ತಾದಿಗಳು ಕಾತರದಿಂದ ಕಾಯುತ್ತಿದ್ದರು. ಬೆಳಗ್ಗೆ ೭ ಗಂಟೆಯಿಂದ ಆರಂಭಗೊಂಡ ರಥೋತ್ಸವದ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಜಾತ್ರೆಯ ಪರಂಪರೆಯಂತೆ ಮಂಗಳವಾರ ರಾತ್ರಿಯಿಂದ ವಿವಿಧ ಬಾಬುದಾರರು ದೇವಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ಸೇವೆಗಳನ್ನು ಸಲ್ಲಿಸಿದರು.  ಇಂದು, ಬುಧವಾರ ಬೆಳಗ್ಗೆ ದೇವಿಯು ಸರ್ವಾಲಂಕೃತ ಭೂಷಿತಳಾಗಿ ರಥವನ್ನೇರಿದಳು. ದೇವಿಯ ದಿವ್ಯ ದರ್ಶನ ಪಡೆಯಲು ಭಕ್ತಸಾಗರವೇ ಹರಿದುಬಂದಿತ್ತು.
ದೇವಿಯನ್ನು ಅಲಂಕೃತ ರಥದಲ್ಲಿ ಜಾತ್ರಾ ಗದ್ದುಗೆಯತ್ತ ಕರೆದೊಯ್ಯುವ ವಿಧಿ ವಿಧಾನಗಳು ವಿಧ್ಯುಕ್ತವಾಗಿ ಆರಂಭಗೊಂಡಿತು.  ಶ್ರೀ ದೇವಿ ರಥಾರೂಢವಾಗುತ್ತಿದ್ದಂತೆಯೇ ನೆರೆದ ಲಕ್ಷಾಂತರ ಭಕ್ತರು ಜಯಘೋಷ ಮೊಳಗಿಸಿದರು. ವಾದ್ಯ, ಡೊಳ್ಳುಕುಣಿತ, ಚಂಡೆ ವಾದನ, ಹಲವಾರ ಜಾನಪದ ಕಲೆಗಳ ವೇಷಭೂಷಣಗಳೊಂದಿಗೆ ಅದ್ಧೂರಿಯಾಗಿ ರಥೋತ್ಸವ ನಡೆಯಿತು. ಈ ವೇಳೆ  ಹರಕೆಹೊತ್ತವರು ಭಾವಪರವಶವಾಗಿ ಹರಕೆ ತೀರಿಸಿದರು.
https://x.com/Me_Mohit11_/status/2026660216859959330
 ಮಾರಿ ದೇವಿಯಯನ್ನು ಜಾತ್ರಾ ಚಪ್ಪರಕ್ಕೆ ರಥದ ಮೂಲಕ ಕರೆತರುವ ವೇಳೆ  ಲಕ್ಷಾಂತರ ಭಕ್ತರು ಆಗಮಿಸಿ ತಮ್ಮ ವಿಶೇಷ ಹರಕೆಯನ್ನು ಸಲ್ಲಿಸಿದರು. ಶ್ರೀ ಮಾರಿಕಾಂಬಾ ದೇವಿಯ ರಥ ಬೀದಿಯಲ್ಲಿ ಸಾಗುತ್ತಿದ್ದಾಗ  ಭಕ್ತರಿಂದ ಕಿಕ್ಕಿರಿದು ತುಂಬಿದ್ದ  ರಸ್ತೆಯ ಇಕ್ಕೆಲಗಳಲ್ಲಿ ಜಯಘೋಷಗಳು ಮೊಳಗಿದವು. ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ಅರ್ಧ ಕಿಲೋಮೀಟರಿಗಿಂತ ಹೆಚ್ಚು ದೂರದ  ಜಾತ್ರಾ ಗದ್ದುಗೆ ರಥವನ್ನು ಭಕ್ತಾದಿಗಳು ರಥವನ್ನು ಎಳೆದರು. ದೇವಾಲಯದ ಧರ್ಮದರ್ಶಿ ಮಂಡಳ ಸದಸ್ಯರು, ಬಾಬುದಾರರು ಉಪಸ್ಥಿತರಿದ್ದರು. ಈ ವೇಳೆ ತಮ್ಮ ಹರಕೆಯಂತೆ ಬಾಳೆಹಣ್ಣು, ಕಡಲೆ, ಅಕ್ಕಿ, ಕೋಳಿಗಳನ್ನು ರಥಕ್ಕೆ ಎಸೆದು ಕೃತಾರ್ಥರಾದರು.
ಜಾತ್ರಾ ಚಪ್ಪರದ ಗದ್ದುಗೆ ಬಳಿ ಆಗಮಿಸಿದ ರಥದಲ್ಲಿ ಬಂದ ಮಾರಿಕಾಂಬೆಯು ಸಕಲ ವಿಧಿ ವಿಧಾನಗಳ ನಂತರ ಮಧ್ಯಾಹ್ನ ೧-೧೦ರ ವೇಳೆಗೆ  ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಂಡಳು.  ಫೆ.೨೬ರಿಂದ ಬೆಳಗ್ಗೆ ೫ರಿಂದ ಇನ್ನು ಏಳು ದಿನಗಳ ಕಾಲ ನಿತ್ಯವೂ ಲಕ್ಷ ಲಕ್ಷ ಭಕ್ತರು ನಾಡಿನ ಎಲ್ಲ ಕಡೆಯಿದ ಬಂದು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆಯಲಿದ್ದಾರೆ.
ಶಕ್ತಿ ದೇವತೆ ಶಿರಸಿಯ ಮಾರಿಕಾಂಬೆ ದೇವಿಯ ಜಾತ್ರೆ ನೂರಾರು ವರ್ಷದ ಇತಿಹಾಸ ಹೊಂದಿದ್ದು, ಎರಡು ವರ್ಷಕ್ಕೊಮ್ಮೆ 9 ದಿನಗಳ ಕಾಲ ನಡೆಯುವ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ , ರಾಜ್ಯ ಅತಿದೊಡ್ಡ ಜಾತ್ರೆ ಎನ್ನುವ ಹೆಗ್ಗಳಿಕೆ ಪಡೆದಿದೆ.
ರಾಜ್ಯದ ಎಲ್ಲೆಡೆಯಿಂದ ಹಾಗೂ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಜಾತ್ರೆಯ ಹಿನ್ನೆಲೆಯಲ್ಲಿ ಶಿರಸಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಹಾಗೂ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement