ಇಸ್ಲಾಮಾಬಾದ್: ಕಾನೂನು ಪದವಿಯೇ ಇಲ್ಲದ ವ್ಯಕ್ತಿಯೊಬ್ಬ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಐದು ವರ್ಷಗಳ ಕಾಲ ತೀರ್ಪುಗಳನ್ನು ನೀಡಿದ ಆಘಾತಕಾರಿ ಘಟನೆ ಪಾಕಿಸ್ತಾನದಲ್ಲಿ ಬೆಳಕಿಗೆ ಬಂದಿದೆ ಎಂದು ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ಇಸ್ಲಾಮಾಬಾದ್ ಹೈಕೋರ್ಟ್‌ನ (IHC) ನ್ಯಾಯಮೂರ್ತಿಯಾಗಿದ್ದ ತಾರಿಕ್ ಮಹಮೂದ್ ಜಹಾಂಗೀರಿ ಅವರ ಕಾನೂನು ಪದವಿ ನಕಲಿ ಎಂದು ಸಾಬೀತಾಗಿದ್ದು, ಅವರನ್ನು ಹುದ್ದೆಯಿಂದ ವಜಾಗೊಳಿಸಿ ನ್ಯಾಯಾಲಯ ಆದೇಶಿಸಿದೆ.
ಫೆಬ್ರವರಿ 23, ಸೋಮವಾರದಂದು ಇಸ್ಲಾಮಾಬಾದ್ ಹೈಕೋರ್ಟ್ 116 ಪುಟಗಳ ಸುದೀರ್ಘ ತೀರ್ಪು ಪ್ರಕಟಿಸಿದ್ದು, ಜಹಾಂಗೀರಿ ಅವರ ನೇಮಕಾತಿಯು ಆರಂಭದಿಂದಲೇ ಕಾನೂನುಬಾಹಿರ (Void ab initio) ಎಂದು ಹೇಳಿದೆ.
ಕರಾಚಿ ವಿಶ್ವವಿದ್ಯಾಲಯದ ದಾಖಲೆಗಳ ಪ್ರಕಾರ, ಜಹಾಂಗೀರಿ ಅವರು 1988ರಲ್ಲಿ ಪರೀಕ್ಷೆ ಬರೆಯುವಾಗ ನಕಲಿ ದಾಖಲಾತಿ ಸಂಖ್ಯೆ ಬಳಸಿದ್ದರು. ಅಂದು ನಕಲು ಮಾಡುವಾಗ ಸಿಕ್ಕಿಬಿದ್ದಿದ್ದ ಇವರನ್ನು ವಿಶ್ವವಿದ್ಯಾಲಯವು ಮೂರು ವರ್ಷಗಳ ಕಾಲ ನಿಷೇಧಿಸಿತ್ತು.
ಶಿಕ್ಷೆಯಿಂದ ಪಾರಾಗಲು ಇವರು ಮರು ವರ್ಷವೇ ‘ಇಮ್ತಿಯಾಜ್ ಅಹ್ಮದ್’ ಎಂಬ ಇನ್ನೊಬ್ಬ ವಿದ್ಯಾರ್ಥಿಯ ದಾಖಲಾತಿ ಸಂಖ್ಯೆಯನ್ನು ಬಳಸಿ ‘ತಾರಿಕ್ ಜಹಾಂಗೀರಿ’ ಎಂಬ ಹೆಸರಿನಲ್ಲಿ ಪರೀಕ್ಷೆ ಬರೆದಿದ್ದರು.
“ಸರ್ಕಾರಿ ಇಸ್ಲಾಮಿಯಾ ಲಾ ಕಾಲೇಜ್” ಪ್ರಾಂಶುಪಾಲರು ಕೋರ್ಟ್‌ಗೆ ಮಾಹಿತಿ ನೀಡಿ, ಜಹಾಂಗೀರಿ ಅವರು ತಮ್ಮ ಸಂಸ್ಥೆಯಲ್ಲಿ ಎಂದಿಗೂ ಪ್ರವೇಶ ಪಡೆದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತನ್ನ ಶೈಕ್ಷಣಿಕ ದಾಖಲೆಗಳನ್ನು ಸಲ್ಲಿಸಲು ನ್ಯಾಯಾಲಯವು ಜಹಾಂಗೀರಿ ಅವರಿಗೆ ಹಲವು ಅವಕಾಶಗಳನ್ನು ನೀಡಿತ್ತು. ಆದರೆ ಅವರು ಅಸಲಿ ದಾಖಲೆಗಳನ್ನು ನೀಡುವ ಬದಲು, ವಿಚಾರಣೆಯನ್ನು ಮುಂದೂಡಲು ವಿವಿಧ ತಾಂತ್ರಿಕ ಕಾರಣಗಳನ್ನು ನೀಡುತ್ತಾ ಸಮಯ ವ್ಯರ್ಥ ಮಾಡಿದ್ದರು (Dilatory tactics).
ಅಂತಿಮವಾಗಿ, ಅರ್ಜಿದಾರರು ಪುರಾವೆಗಳನ್ನು ಒದಗಿಸಿದ ಕಾರಣ ಮತ್ತು ಜಹಾಂಗೀರಿ ಅವರು ತಮ್ಮ ಪದವಿಯನ್ನು ಸಾಬೀತುಪಡಿಸಲು ವಿಫಲವಾದ ಕಾರಣ, ಅವರ ಪದವಿ ನಕಲಿ ಎಂದು ನ್ಯಾಯಪೀಠ ತೀರ್ಮಾನಿಸಿತು. ಡಿಸೆಂಬರ್ 2020 ರಲ್ಲಿ ಇವರು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ