
ನವದೆಹಲಿ : ದೆಹಲಿಯ ವಿವಾದಿತ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪದಿಂದ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ ಸಿಸೋಡಿಯಾ ಸೇರಿ ಸೇರಿ ಎಲ್ಲಾ 23 ಆರೋಪಿಗಳನ್ನು ದೆಹಲಿ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.
“ಅಬಕಾರಿ ನೀತಿಯಲ್ಲಿ ಯಾವುದೇ ರೀತಿಯ ಪಿತೂರಿ ಅಥವಾ ಕ್ರಿಮಿನಲ್ ಉದ್ದೇಶ ಕಂಡುಬಂದಿಲ್ಲ” ಎಂದು ನ್ಯಾಯಾಲಯವು ತನ್ನ ಇಂದು, ಶುಕ್ರವಾರ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. 23 ಆರೋಪಿಗಳ ವಿರುದ್ಧ ಯಾವುದೇ ಮೇಲ್ನೋಟದ ಪ್ರಕರಣ ಕೂಡ ಸಾಬೀತಾಗಿಲ್ಲ ಎಂದು ನ್ಯಾಯಾಲಯ ಹೇಳಿತು. ಅಲ್ಲದೆ ತನಿಖೆಯ ಲೋಪ ಸರಿದೂಗಿಸಲು ಹಾಗೂ ಇನ್ನಷ್ಟು ಮಂದಿಯನ್ನು ಆರೋಪಿಯನ್ನಾಗಿ ಮಾಡುವುದಕ್ಕಾಗಿ ಆರೋಪಿಗಳಲ್ಲಿ ಒಬ್ಬರಿಗೆ ಕ್ಷಮಾದಾನ ನೀಡಿ ಅವರನ್ನು ಮಾಫಿ ಸಾಕ್ಷಿಯಾಗಿಸಿದ್ದಕ್ಕೆ ಸಿಬಿಐಯನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.
ಕೇಜ್ರಿವಾಲ್ ಮತ್ತು ಸಿಸೋಡಿಯಾ ವಿರುದ್ಧ ಮಾಡಲಾಗಿದ್ದ ಪಿತೂರಿಯ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಈ ಆರೋಪಗಳು “ನ್ಯಾಯಾಂಗ ಪರಿಶೀಲನೆ”ಯಲ್ಲಿ ವಿಫಲವಾಗಿವೆ ಎಂದು ನ್ಯಾಯಾಧೀಶರು ತಿಳಿಸಿದರು.

2021-22ರಲ್ಲಿ ಆಮ್ ಆದ್ಮಿ ಪಕ್ಷದ (AAP) ಸರ್ಕಾರ ಜಾರಿಗೆ ತಂದಿದ್ದ ಹೊಸ ಮದ್ಯ ಮಾರಾಟ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿತ್ತು. ನಂತರ ಸರ್ಕಾರ ಈ ನೀತಿಯನ್ನು ಕೈಬಿಟ್ಟಿತ್ತು.
ರಾಜಕಾರಣಿಗಳು ಮತ್ತು ಮದ್ಯದ ಉದ್ಯಮಿಗಳ ಗುಂಪೊಂದು ಅಬಕಾರಿ ನೀತಿಯ ಬಾಹ್ಯರೇಖೆಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಆರೋಪಿಸಲಾದ ಪ್ರಕರಣದಲ್ಲಿ ತನಿಖಾಧಿಕಾರಿಗಳು “ದಕ್ಷಿಣ ಗುಂಪು” (South Group) ಎಂಬ ಪದಗಳನ್ನು ಬಳಸಿದ್ದಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.”ದಕ್ಷಿಣ ಗುಂಪು” ಎಂಬ ಪದಗಳನ್ನು ಅವರನ್ನು ಉಲ್ಲೇಖಿಸಲು ಬಳಸುವ ಹಿಂದಿನ ಉದ್ದೇಶವೇನು ಮತ್ತು ಆ ಪದವನ್ನು ಯಾರು ಸೃಷ್ಟಿಸಿದರು ಎಂದು ನ್ಯಾಯಾಲಯ ಪ್ರಶ್ನಿಸಿತು.
ನ್ಯಾಯಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ ಕೇಜ್ರಿವಾಲ್ ಅತ್ಯಂತ ಭಾವುಕರಾಗಿ ಕಣ್ಣೀರು ಹಾಕಿದರು. ಈ ತೀರ್ಪನ್ನು ಸತ್ಯ ಮತ್ತು ನ್ಯಾಯದ ವಿಜಯ ಎಂದು ಬಣ್ಣಿಸಿದರು”ಸತ್ಯಕ್ಕೆ ಕೊನೆಗೂ ಜಯ ಸಿಗುತ್ತದೆ ಎಂದು ನಾವು ಯಾವಾಗಲೂ ಹೇಳುತ್ತಿದ್ದೆವು. ಅಧಿಕಾರದಲ್ಲಿದ್ದ ಒಬ್ಬ ಮುಖ್ಯಮಂತ್ರಿಯನ್ನು ಮನೆಯಿಂದ ಹೊರಗೆ ಎಳೆದು ಜೈಲಿಗೆ ಹಾಕಲಾಯಿತು. ನಮ್ಮ ಮೇಲೆ ಕೆಸರೆರಚಾಟ ನಡೆಸಲಾಯಿತು. ಇಂದು ನಮಗೆ ನ್ಯಾಯ ಸಿಕ್ಕಿದೆ,” ಎಂದು ಅವರು ಹೇಳಿದರು. ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕತ್ವವು ತನ್ನ ವಿರುದ್ಧ ದುರುದ್ದೇಶಪೂರಿತ ಪಿತೂರಿಯನ್ನು ರೂಪಿಸುತ್ತಿದೆ ಎಂದು ಆರೋಪಿಸಿದರು.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಇತರ ಆರೋಪಿಗಳಿಗೆ ರೌಸ್ ಅವೆನ್ಯೂ ನ್ಯಾಯಾಲಯವು ನೀಡಿದ ಕ್ಲೀನ್ ಚಿಟ್ ಅನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಲು ಕೇಂದ್ರ ತನಿಖಾ ದಳ (ಸಿಬಿಐ) ಸಜ್ಜಾಗಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.
ಹಿಂದಿನ-ಎಎಪಿ ಸರ್ಕಾರವು ಈಗ ರದ್ದುಗೊಳಿಸಿದ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾದ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ