ಅಮೆರಿಕದ ಸಹಾಯದೊಂದಿಗೆ ಇಸ್ರೇಲ್ (ಟೆಲ್ ಅವಿವ್), ಇರಾನಿನ ತೆಹ್ರಾನ್ ಮೇಲೆ ಶನಿವಾರ ಬೆಳಿಗ್ಗೆ ಮುನ್ನೆಚ್ಚರಿಕಾ ದಾಳಿ (preemptive attack) ನಡೆಸಿದ ನಂತರಈ ದಾಳಿಗೆ ಪ್ರತಿಯಾಗಿ ಇರಾನ್ ಇಸ್ರೇಲ್ ಕಡೆಗೆ “ಕ್ಷಿಪಣಿಗಳ ಸುರಿಮಳೆ” ಗರೆದಿದೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ. ಅಮೆರಿಕದ ನೇತೃತ್ವದ ದಾಳಿಗಳಿಗೆ “ಪ್ರತ್ಯುತ್ತರವಾಗಿ ಇರಾನ್, ಯುಎಇ, ಬಹ್ರೇನ್, ಕತಾರ್ ಮತ್ತು ಜೋರ್ಡಾನ್‌ನಲ್ಲಿರುವ ಅಮೆರಿಕ ನೆಲೆಗಳ ಮೇಲೆ ದಾಳಿ ಮಾಡಿದೆ.
ಈ ಬೆಳವಣಿಗೆಯು ಮಧ್ಯಪ್ರಾಚ್ಯವನ್ನು ಪುನಃ ಮಿಲಿಟರಿ ಸಂಘರ್ಷಕ್ಕೆ ತಳ್ಳಿದ್ದು, ರಾಜತಾಂತ್ರಿಕ ಪರಿಹಾರದ ಭರವಸೆಗಳನ್ನು ಮತ್ತಷ್ಟು ಕ್ಷೀಣಿಸುವಂತೆ ಮಾಡಿದೆ. ಅಮೆರಿಕವು ಈ ದಾಳಿಯನ್ನು “ಆಪರೇಷನ್ ಎಪಿಕ್ ಫ್ಯೂರಿ” (Operation Epic Fury) ಎಂದು ಕರೆದಿದೆ — ಇದು 2025ರ “ಮಿಡ್‌ನೈಟ್ ಹ್ಯಾಮರ್” ಕಾರ್ಯಾಚರಣೆಯನ್ನು ನೆನಪಿಸುವಂತಿದೆ.
” ಇರಾನ್‌ನಿಂದ ಇಸ್ರೇಲ್ ಕಡೆಗೆ ಉಡಾವಣೆಯಾದ ಕ್ಷಿಪಣಿಗಳ ಹಿನ್ನೆಲೆಯಲ್ಲಿ ದೇಶದಾದ್ಯಂತ ಹಲವು ಪ್ರದೇಶಗಳಲ್ಲಿ ಸೈರನ್ ಮೊಳಗಿಸಲಾಗಿದೆ. ಬೆದರಿಕೆಯನ್ನು ಹೋಗಲಾಡಿಸಲು ಇಸ್ರೇಲ್ ವಾಯುಪಡೆ (IAF) ಕಾರ್ಯಾಚರಣೆ ನಡೆಸುತ್ತಿದೆ,” ಎಂದು ‘X’ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಇರಾನ್‌ನಲ್ಲಿ ನಡೆದ ಇಸ್ರೇಲ್-ಅಮೆರಿಕ ಜಂಟಿ ದಾಳಿಯು ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅವರ ಕಚೇರಿಯ ಸಮೀಪ ನಡೆದಿದೆ ಎಂದು ವರದಿಯಾಗಿದೆ. ರಾಯಿಟರ್ಸ್ ವರದಿಯ ಪ್ರಕಾರ, 86 ವರ್ಷದ ಖಮೇನಿ ಆ ಸಮಯದಲ್ಲಿ ತೆಹ್ರಾನ್‌ನಲ್ಲಿ ಇರಲಿಲ್ಲ ಮತ್ತು ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ತೆಹ್ರಾನ್‌ನಲ್ಲಿ ಕನಿಷ್ಠ ಮೂರರಿಂದ ನಾಲ್ಕು ದಾಳಿಗಳು ಸಂಭವಿಸಿವೆ ಎಂದು ಹೇಳಲಾಗಿದೆ. ದೃಶ್ಯಗಳಲ್ಲಿ ಇರಾನ್‌ನ ಕಟ್ಟಡಗಳಿಂದ ದಟ್ಟವಾದ ಹೊಗೆ ಏಳುತ್ತಿರುವುದು ಕಂಡುಬಂದಿದೆ. ಸಾವುನೋವುಗಳ ಬಗ್ಗೆ ಈವರೆಗೆ ಯಾವುದೇ ಸ್ಪಷ್ಟನೆ ಇಲ್ಲ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು, “ಬೆದರಿಕೆಗಳನ್ನು ತೊಡೆದುಹಾಕಲು” ಈ ದಾಳಿ ನಡೆಸಲಾಗಿದೆ ಎಂದು ಬಣ್ಣಿಸಿದ್ದಾರೆ.
ಇಸ್ರೇಲ್‌ನಲ್ಲಿ ಸೈರನ್ ಮೊಳಗಿದವು
ಕ್ಷಿಪಣಿ ದಾಳಿಯ ಸಾಧ್ಯತೆಯ ಬಗ್ಗೆ ಇಸ್ರೇಲ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಟೆಲ್ ಅವಿವ್‌ನಲ್ಲಿ ಸೈರನ್ ಮೊಳಗಿದವು. ಇಸ್ರೇಲ್ ರಕ್ಷಣಾ ಪಡೆ (IDF) ನಾಗರಿಕರಿಗೆ ಮೊಬೈಲ್ ಮೂಲಕ ಅಲರ್ಟ್ ಕಳುಹಿಸಿದ್ದು, ಸುರಕ್ಷಿತ ಸ್ಥಳಗಳ ಹತ್ತಿರವೇ ಇರುವಂತೆ ಸೂಚಿಸಿದೆ. ದಾಳಿಯ ನಂತರ ಇರಾನ್ ಮತ್ತು ಇಸ್ರೇಲ್ ತಮ್ಮ ವಾಯುಪ್ರದೇಶವನ್ನು ಮುಚ್ಚಿವೆ. ಇಸ್ರೇಲ್ ವಾಯುಪ್ರದೇಶ ಮುಚ್ಚಿದ ಕಾರಣ ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ.
ಬಹ್ರೇನ್ ಮತ್ತು ಅಬುಧಾಬಿಯಲ್ಲಿ ಸ್ಫೋಟದ ಸದ್ದು
ಬಹ್ರೇನ್‌ನಲ್ಲಿರುವ ಅಮೆರಿಕದ ನೌಕಾಪಡೆಯ ಐದನೇ ಫ್ಲೀಟ್ ಕೇಂದ್ರವನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆದಿದ್ದು, ಅಲ್ಲಿ ತುರ್ತು ಸೈರನ್‌ಗಳು ಮೊಳಗಿವೆ. ಯುಎಇ ರಾಜಧಾನಿ ಅಬುಧಾಬಿ, ಕುವೈತ್ ಮತ್ತು ಕತಾರ್‌ನ ದೋಹಾದಲ್ಲೂ ಸ್ಫೋಟದ ಶಬ್ದಗಳು ಕೇಳಿಬಂದಿವೆ ಎಂದು ಎಎಫ್‌ಪಿ ವರದಿ ಮಾಡಿದೆ. ಅಬುಧಾಬಿಯಲ್ಲಿ ಅಲ್ ಧಾಫ್ರಾ ವಾಯುನೆಲೆ ಮತ್ತು ದೋಹಾದಲ್ಲಿ ಅಲ್ ಉದೈದ್ ವಾಯುನೆಲೆಯನ್ನು ಅಮೆರಿಕ ಪಡೆಗಳು ಬಳಸುತ್ತಿವೆ. ದುಬೈನಲ್ಲೂ ಸ್ಫೋಟದ ವರದಿಯಾಗಿದೆ. ಈ ಘಟನೆಗಳ ನಂತರ ಗಲ್ಫ್ ದೇಶಗಳು ತಮ್ಮ ವಾಯುಪ್ರದೇಶವನ್ನು ಮುಚ್ಚಿವೆ.
ಇರಾನ್‌ನಲ್ಲಿ ಇಂಟರ್ನೆಟ್ ಸ್ಥಗಿತ
ನೆಟ್‌ಬ್ಲಾಕ್ಸ್ ವರದಿಯ ಪ್ರಕಾರ, ಇರಾನ್‌ನಲ್ಲಿ ಇಂಟರ್ನೆಟ್ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿದೆ. ಇದು ಕಳೆದ ವರ್ಷ ಇಸ್ರೇಲ್ ಜೊತೆ ನಡೆದ ಯುದ್ಧದ ಸಮಯದಲ್ಲಿ ಅನುಸರಿಸಿದ ಕ್ರಮದಂತೆಯೇ ಇದೆ ಎಂದು ಅದು ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನಲ್ಲಿ “ಬೃಹತ್ ಯುದ್ಧ ಕಾರ್ಯಾಚರಣೆ” (Major combat operations) ಘೋಷಿಸಿದ್ದಾರೆ. “ಅಮೆರಿಕದ ಜನರ ರಕ್ಷಣೆಗಾಗಿ ಮತ್ತು ಇರಾನ್‌ನಿಂದ ಎದುರಾಗುವ ಬೆದರಿಕೆಯನ್ನು ಹೋಗಲಾಡಿಸಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಅವರು ಹೇಳಿದ್ದಾರೆ. ಇರಾನ್ ಅನ್ನು “ಜಗತ್ತಿನ ಮೊದಲ ಕ್ರಮಾಂಕದ ಭಯೋತ್ಪಾದಕ ಪ್ರಾಯೋಜಕ ರಾಷ್ಟ್ರ” ಎಂದು ಕರೆದ ಟ್ರಂಪ್, ಹಮಾಸ್ ನಡೆಸಿದ ಅಕ್ಟೋಬರ್ 7ರ ದಾಳಿಯ ಹಿಂದೆ ಇರಾನ್ ಕೈವಾಡವಿದೆ ಎಂದು ಆರೋಪಿಸಿದರು.
ಇರಾನ್ ಜನತೆಗೆ ಸಂದೇಶ ನೀಡಿದ ಟ್ರಂಪ್, “ಬಾಂಬ್‌ಗಳು ಬೀಳುತ್ತಿರುವುದರಿಂದ ಮನೆಯಿಂದ ಹೊರಬರಬೇಡಿ. ನಾವು ಈ ಕಾರ್ಯ ಮುಗಿಸಿದ ನಂತರ ನಿಮ್ಮ ಸರ್ಕಾರವನ್ನು ನೀವೇ ವಶಪಡಿಸಿಕೊಳ್ಳಿ. ಇದು ನಿಮಗೆ ಸಿಕ್ಕಿರುವ ಅಪರೂಪದ ಅವಕಾಶ,” ಎಂದು ಹೇಳಿದ್ದಾರೆ. “ಯಾವ ಅಧ್ಯಕ್ಷರೂ ಮಾಡದ ಕೆಲಸವನ್ನು ನಾನು ಮಾಡುತ್ತಿದ್ದೇನೆ, ಅಮೆರಿಕ ನಿಮ್ಮ ಬೆನ್ನಿಗಿದೆ” ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮೊದಲು, ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ತಾವು ಬಿಡುವುದಿಲ್ಲ ಎಂದು ಟ್ರಂಪ್ ಎಚ್ಚರಿಸಿದ್ದರು. ಇಸ್ರೇಲ್ ಪ್ರಧಾನಿ ನೆತನ್ಯಾಹು ಕೂಡ ಈ ಜಂಟಿ ದಾಳಿಯು ಇರಾನ್ ಜನತೆಗೆ ತಮ್ಮ ಹಣೆಬರಹವನ್ನು ತಾವೇ ನಿರ್ಧರಿಸುವ ಅವಕಾಶ ನೀಡಲಿದೆ ಎಂದಿದ್ದಾರೆ.
ಪರಮಾಣು ಕಾರ್ಯಕ್ರಮದ ವಿಚಾರವಾಗಿ ಇರಾನ್ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚಿರುವಾಗಲೇ ಈ ಸ್ಫೋಟಗಳು ಸಂಭವಿಸಿವೆ. ಇಸ್ರೇಲ್‌ನ ಹಲವು ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ರೋಗಿಗಳನ್ನು ಮತ್ತು ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಭೂಗತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಪ್ರಜೆಗಳಿಗೆ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಲು ಮತ್ತು ಸುರಕ್ಷಿತ ಸ್ಥಳಗಳ ಬಳಿಯೇ ಇರುವಂತೆ ಸೂಚಿಸಿದೆ. ಅನಗತ್ಯ ಪ್ರಯಾಣವನ್ನು ತಪ್ಪಿಸಲು ಮತ್ತು ಸ್ಥಳೀಯ ಸುದ್ದಿಗಳ ಮೇಲೆ ನಿಗಾ ಇಡಲು ಹೇಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ