ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಹತ್ಯೆಗೀಡಾಗಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ನೀಡುವ ಸಂದರ್ಭದಲ್ಲಿ ಇರಾನ್ ದೂರದರ್ಶನದ ಸುದ್ದಿ ವಾಚಕ ಕಣ್ಣೀರಿಡುತ್ತ ಸುದ್ದಿಯನ್ನು ಪ್ರಕಟಿಸಿದ್ದಾರೆ. ನೇರ ಪ್ರಸಾರದಲ್ಲಿ ಈ ಸುದ್ದಿ ಹೇಳುತ್ತಿದ್ದಾಗ ವಾಚಕರು ಭಾವುಕರಾಗಿ ಅಕ್ಷರಶಃ ಗಳಗಳನೆ ಅತ್ತಿದ್ದಾರೆ.
ಒಂದು ವೈರಲ್ ಕ್ಲಿಪ್‌ನಲ್ಲಿ, ಸುದ್ದಿ ವಾಚಕರೊಬ್ಬರು ತೀವ್ರವಾಗಿ ನಡುಗುತ್ತಾ, ಪದೇ ಪದೇ “ದೇವರು ಶ್ರೇಷ್ಠ” (God is great) ಎಂದು ಉಚ್ಚರಿಸುತ್ತಿರುವುದು ಕಂಡುಬಂದಿದೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಖಮೇನಿ “ಹುತಾತ್ಮರಾಗಿದ್ದಾರೆ” ಎಂಬ ಮಾಹಿತಿಯನ್ನು ಅವರು ವೀಕ್ಷಕರಿಗೆ ನೀಡಿದರು.
“ದೇವರು ದೊಡ್ಡವನು. ಅತ್ಯಂತ ತೀವ್ರವಾದ ದುಃಖದೊಂದಿಗೆ ಇರಾನ್ ರಾಷ್ಟ್ರಕ್ಕೆ ತಿಳಿಸುವುದೇನೆಂದರೆ, ಇಸ್ಲಾಮಿಕ್ ಕ್ರಾಂತಿಯ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಇಂದು ಅಮೆರಿಕ ಮತ್ತು ಸಿಯೋನಿಸ್ಟ್ ಆಡಳಿತದ ಜಂಟಿ ಕ್ರಿಮಿನಲ್ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ,” ಎಂದು ನಿರೂಪಕರು ಖಮೇನಿ ಅವರ ನಿಧನದ ಸುದ್ದಿಯನ್ನು ಪ್ರಕಟಿಸುವಾಗ ಕಣ್ಣೀರಿಡುತ್ತ ತಿಳಿಸಿದರು. ಅವರು ಮಾತನಾಡಲು ಕಷ್ಟಪಡುತ್ತಿದ್ದಾಗ ಸ್ಟುಡಿಯೋದ ಒಳಗಿದ್ದ ಇತರ ಸಿಬ್ಬಂದಿಯ ಬಿಕ್ಕಳಿಕೆಯ ಶಬ್ದಗಳು ಕೇಳಿಬಂದವು. ಇದು ಇಡೀ ರಾಷ್ಟ್ರಕ್ಕೆ ಪ್ರಸಾರವಾಗುತ್ತಿದ್ದ ಆ ಕ್ಷಣದ ಪರಿಸ್ಥಿತಿಯನ್ನು ಎತ್ತಿ ತೋರಿಸಿತು.
ಪ್ರೆಸ್ ಟಿವಿ ನಿರೂಪಕಿ ಮರ್ಯಮ್ ಅಜರ್ಚೆಹರ್ ಭಾವುಕ ನುಡಿ: ‘ಸೇಡು ಶೀಘ್ರದಲ್ಲೇ ಬರಲಿದೆ’
ಖಮೇನಿ ಅವರ ಕುರಿತಾದ ನೇರ ಪ್ರಸಾರದ ವೇಳೆ ಪ್ರೆಸ್ ಟಿವಿ ನಿರೂಪಕಿ ಮರ್ಯಮ್ ಅಜರ್ಚೆಹರ್ ಕೂಡ ಭಾವುಕರಾದರು. ‘ಆಪರೇಷನ್ ಎಪಿಕ್ ಫ್ಯೂರಿ’ (Operation Epic Fury) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಜರ್ಚೆಹರ್, ಟ್ರಂಪ್ ಆಡಳಿತದ ವಿರುದ್ಧ ಕಿಡಿಕಾರಿದರು. “ಇದು ಇಲ್ಲಿಗೆ ಮುಗಿದಿಲ್ಲ. ಟ್ರಂಪ್ ಇದಕ್ಕೆ ಭಾರಿ ಬೆಲೆ ತೆರಲಿದ್ದಾರೆ—ಇತಿಹಾಸದಲ್ಲಿ ಯಾವುದೇ ಅಮೆರಿಕನ್ ಅಧ್ಯಕ್ಷರು, ಯಾವುದೇ ಸಿಯೋನಿಸ್ಟ್ ಅಥವಾ ಯಾವುದೇ ಅಪರಾಧಿಯೂ ತೆರದಷ್ಟು ದೊಡ್ಡ ಬೆಲೆಯನ್ನು ಅವರು ತೆರಲಿದ್ದಾರೆ,” ಎಂದು ಎಚ್ಚರಿಸಿದರು.
“ಸೇಡು ಬರಲಿದೆ. ಸೇಡು ಶೀಘ್ರದಲ್ಲೇ ಬರಲಿದೆ. ಈ ಹತ್ಯೆಗೆ ಕಾರಣರಾದ ಟ್ರಂಪ್ ಮತ್ತು ಅದಕ್ಕೆ ಸಹಕರಿಸಿದ ಪ್ರತಿಯೊಬ್ಬರನ್ನೂ ಅದು ಬೆನ್ನಟ್ಟಲಿದೆ. ಅವರು ಅಂತಿಮ ಶಿಕ್ಷೆಯನ್ನು ಅನುಭವಿಸಲಿದ್ದಾರೆ,” ಎಂದು ಅವರು ಮುಂದುವರಿಸಿದರು. ಈ ಪ್ರತಿಕಾರವು ಕೇವಲ ಲಕ್ಷಾಂತರ ಇರಾನಿಯನ್ನರಿಂದ ಅಥವಾ ಪ್ರತಿರೋಧದ ದೇಶಗಳಿಂದ (Resistance countries) ಮಾತ್ರವಲ್ಲದೆ, ಸಿಯೋನಿಸಂ ವಿರುದ್ಧ ಇಮಾಮ್ ಖೊಮೇನಿ ಅವರ ಪರಂಪರೆಯನ್ನು ಕಂಡು ಹೊಸದಾಗಿ ಪ್ರತಿರೋಧಕ್ಕೆ ಸೇರಿಕೊಂಡಿರುವ ಅಮೆರಿಕನ್ನರು ಮತ್ತು ಯುರೋಪಿಯನ್ನರಿಂದಲೂ ಬರಲಿದೆ ಎಂದು ಅವರು ಹೇಳಿದರು.
ಇರಾನ್‌ನಲ್ಲಿ 40 ದಿನಗಳ ಶೋಕಾಚರಣೆ ಘೋಷಣೆ
ಇಸ್ರೇಲ್ ಮತ್ತು ಅಮೆರಿಕ ಇತ್ತೀಚೆಗೆ ನಡೆಸಿದ ದಾಳಿಯಲ್ಲಿ ಖಮೇನಿ ಹತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇರಾನ್ ಸರ್ಕಾರವು ದೇಶಾದ್ಯಂತ 40 ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಖಮೇನಿ ಅವರು ಶನಿವಾರ ಮುಂಜಾನೆ ತಮ್ಮ ಕಚೇರಿಯಲ್ಲಿದ್ದಾಗಲೇ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸರ್ಕಾರಿ ಟಿವಿ ಹೇಳಿದೆ. “ಜಾಗತಿಕ ಅಹಂಕಾರದ” ವಿರುದ್ಧ ನಿಂತು, ತಮ್ಮ ಜವಾಬ್ದಾರಿಗಳ ಮುಂಚೂಣಿಯಲ್ಲಿದ್ದಾಗಲೇ ಅವರು ಪ್ರಾಣತ್ಯಾಗ ಮಾಡಿದ್ದಾರೆ ಎಂದು ಅವರ ಸಾವನ್ನು ಬಗ್ಗೆ ಅದು ಹೇಳಿದೆ. ಖಮೇನಿ ಅವರ ಹತ್ಯೆಯ ನಂತರ ಪ್ರತಿಕ್ರಿಯಿಸಿದ ಇರಾನ್ ರಾಷ್ಟ್ರೀಯ ಭದ್ರತಾ ಮಂಡಳಿ, ಈ ಕೃತ್ಯವು ದಬ್ಬಾಳಿಕೆಗಾರರ ವಿರುದ್ಧದ ಬೃಹತ್ ದಂಗೆಗೆ ಪ್ರೇರಕಶಕ್ತಿಯಾಗಲಿದೆ ಎಂದು ಹೇಳಿದೆ.
ಇಸ್ರೇಲ್‌ನ ಚಾನೆಲ್ 12 ವರದಿ ಮಾಡಿದಂತೆ, ಖಮೇನಿ ಅವರ ಮೃತದೇಹದ ಛಾಯಾಚಿತ್ರವನ್ನು ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ತೋರಿಸಲಾಗಿದೆ.
ದಾಳಿಯಲ್ಲಿ ಕುಟುಂಬಸ್ಥರು ಮತ್ತು ಉನ್ನತ ಅಧಿಕಾರಿಗಳ ಸಾವು
ಶನಿವಾರ ಬೆಳಿಗ್ಗೆ ಆರಂಭವಾದ ಈ ದಾಳಿಗೆ ಖಮೇನಿ ಅವರ ಕುಟುಂಬ ಸದಸ್ಯರು ಕೂಡ ಬಲಿಯಾಗಿದ್ದಾರೆ. ಅವರ ಮಗಳು, ಮೊಮ್ಮಗು, ಸೊಸೆ ಮತ್ತು ಅಳಿಯ ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಹೆಚ್ಚುವರಿಯಾಗಿ, ಇರಾನ್ ರಕ್ಷಣಾ ಸಚಿವ ಅಜೀಜ್ ನಾಸಿರ್ಜಾದೆ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್ ಮೊಹಮ್ಮದ್ ಪಾಕ್‌ಪೂರ್ ಕೂಡ ಈ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ