ಸೌದಿ ಅರೇಬಿಯಾದ ಅತಿದೊಡ್ಡ ತೈಲ ಸಂಸ್ಕರಣಾ ಕೇಂದ್ರಗಳಲ್ಲಿ ಒಂದಾದ ರಾಸ್ ತನುರಾ (Ras Tanura) ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ, ಸೌದಿ ಅರಾಮ್ಕೊ ಸಂಸ್ಥೆಯು ತನ್ನ ಘಟಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ದಾಳಿಯು ಮಧ್ಯಪ್ರಾಚ್ಯದ ಇಂಧನ ಮೂಲಸೌಕರ್ಯಗಳ ಮೇಲೆ ಆತಂಕವನ್ನು ಹೆಚ್ಚಿಸಿದೆ.
ದಾಳಿಯ ಕುರಿತು ಅರಾಮ್ಕೊ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಸೌದಿ ರಕ್ಷಣಾ ಸಚಿವಾಲಯವು ಅಲ್ ಅರೇಬಿಯಾ ಟಿವಿಯೊಂದಿಗೆ ಮಾತನಾಡಿ, ರಾಸ್ ತನುರಾ ಗುರಿಯಾಗಿಸಿಕೊಂಡು ಬಂದಿದ್ದ ಎರಡು ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿಸಿದೆ. ವಿಶ್ವದ ತೈಲ ಮಾರುಕಟ್ಟೆ ಈಗಾಗಲೇ ತೀವ್ರ ಒತ್ತಡದಲ್ಲಿದ್ದು, ಈ ದಾಳಿಯು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹಾರ್ಮುಜ್ ಜಲಸಂಧಿ ಮಾರ್ಗ ಬಂದ್
ವಿಶ್ವದ ಶೇ. 20ರಷ್ಟು ತೈಲ ಸಾಗಣೆಯಾಗುವ ಹಾರ್ಮುಜ್ ಜಲಸಂಧಿಯ ಮೂಲಕ ಹಡಗು ಸಂಚಾರ ಸ್ಥಗಿತಗೊಂಡಿದೆ. ಇರಾನ್ ಅಧಿಕೃತವಾಗಿ ಈ ಮಾರ್ಗವನ್ನು ಮುಚ್ಚದಿದ್ದರೂ, ಸುರಕ್ಷತೆಯ ದೃಷ್ಟಿಯಿಂದ ಹಡಗು ಮಾಲೀಕರು ಸಂಚಾರ ನಿಲ್ಲಿಸಿದ್ದಾರೆ.
ಕಚ್ಚಾ ತೈಲ ಬೆಲೆಯು ಕಳೆದ ನಾಲ್ಕು ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಆರಂಭಿಕ ವಹಿವಾಟಿನಲ್ಲಿ ಬ್ರೆಂಟ್ ಕ್ರೂಡ್ ಬೆಲೆಯು ಪ್ರತಿ ಬ್ಯಾರೆಲ್ಗೆ 80 ಡಾಲರ್ಗೆ ಏರಿಕೆಯಾಗಿದೆ. ಪೂರೈಕೆಯಲ್ಲಿನ ಈ ವ್ಯತ್ಯಯವು ಜಾಗತಿಕವಾಗಿ ಹಣದುಬ್ಬರ (Inflation) ಹೆಚ್ಚಾಗಲು ಕಾರಣವಾಗಬಹುದು ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ.
ಉದ್ವಿಗ್ನಗೊಂಡ ಇರಾನ್ ಸಂಘರ್ಷ
ಕಳೆದ ಶನಿವಾರ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲಿನ ಗುರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಸಹ, ಇಸ್ರೇಲ್ ಮತ್ತು ಅಮೆರಿಕದ ಸೇನಾ ನೆಲೆಗಳ ಮೇಲೆ ಮಾತ್ರವಲ್ಲದೆ ಸೌದಿ ಅರೇಬಿಯಾ, ಕತಾರ್, ಯುಎಇ, ಕುವೈತ್ ಮತ್ತು ಬಹ್ರೇನ್ ದೇಶಗಳ ಮೇಲೂ ದಾಳಿ ನಡೆಸಿದೆ.
ತನ್ನ ರಾಜಧಾನಿ ರಿಯಾದ್ ಮತ್ತು ಪೂರ್ವ ಪ್ರಾಂತ್ಯದ ಮೇಲೆ ಇರಾನ್ ನಡೆಸಿದ ದಾಳಿಯನ್ನು ಸೌದಿ ಅರೇಬಿಯಾ ತೀವ್ರವಾಗಿ ಖಂಡಿಸಿದೆ.
“ಇರಾನ್ ವಿರುದ್ಧದ ದಾಳಿಗೆ ಸೌದಿ ಅರೇಬಿಯಾದ ವಾಯುಪ್ರದೇಶ ಅಥವಾ ಭೂಪ್ರದೇಶವನ್ನು ಬಳಸಲು ನಾವು ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ ನಂತರವೂ ಇರಾನ್ ಈ ಹೇಡಿತನದ ದಾಳಿ ನಡೆಸಿರುವುದು ಖಂಡನೀಯ. ಇದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ,” ಎಂದು ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ