ವಾಷಿಂಗ್ಟನ್/ಗಾಲೆ: ಹಿಂದೂ ಮಹಾಸಾಗರದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದೆ. ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಸಂಚರಿಸುತ್ತಿದ್ದ ಇರಾನ್ನ ಯುದ್ಧನೌಕೆಯನ್ನು ಅಮೆರಿಕದ ಜಲಾಂತರ್ಗಾಮಿ ನೌಕೆಯು ಟಾರ್ಪಿಡೊ (Torpedo) ಬಳಸಿ ಹೊಡೆದುರುಳಿಸಿದೆ.
ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, “ಎರಡನೇ ಮಹಾಯುದ್ಧದ ನಂತರ ಶತ್ರು ದೇಶದ ಹಡಗನ್ನು ಟಾರ್ಪಿಡೊ ಮೂಲಕ ಮುಳುಗಿಸಿದ ಮೊದಲ ಘಟನೆ ಇದಾಗಿದೆ” ಎಂದು ಹೇಳಿದ್ದಾರೆ.
ಪೆಂಟಗನ್ ಅಧಿಕೃತ ಹೇಳಿಕೆ ಮತ್ತು ವೀಡಿಯೊ ಬಿಡುಗಡೆ
ಸುದ್ದಿಗೋಷ್ಠಿಯಲ್ಲಿ ದಾಳಿಯ ವೀಡಿಯೊ ತುಣುಕುಗಳನ್ನು ಪ್ರದರ್ಶಿಸಿದ ಹೆಗ್ಸೆತ್,” ಹಿಂದೂ ಮಹಾಸಾಗರದಲ್ಲಿ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ತಾನು ಸುರಕ್ಷಿತವಾಗಿದ್ದೇನೆ ಎಂದು ಭಾವಿಸಿದ್ದ ಇರಾನ್ ಯುದ್ಧನೌಕೆಯನ್ನು ಅಮೆರಿಕದ ಜಲಾಂತರ್ಗಾಮಿ ಮುಳುಗಿಸಿದೆ,” ಎಂದು ಹೇಳಿದರು.
ಅಷ್ಟೇ ಅಲ್ಲದೆ, “ಅಧ್ಯಕ್ಷ ಟ್ರಂಪ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ ಘಟಕದ ನಾಯಕನನ್ನು ಹುಡುಕಿ ಕೊಲ್ಲಲಾಗಿದೆ. ಇರಾನ್ ಟ್ರಂಪ್ ಅವರನ್ನು ಕೊಲ್ಲಲು ಯತ್ನಿಸಿತು, ಆದರೆ ಈಗ ಅಂತಿಮವಾಗಿ ಟ್ರಂಪ್ ಅವರೇ ಗೆದ್ದಿದ್ದಾರೆ (Last Laugh),” ಎಂದು ಮಾರ್ಮಿಕವಾಗಿ ಹೇಳಿದರು.
ಶ್ರೀಲಂಕಾ ಕರಾವಳಿಯಲ್ಲಿ ಸಂಭವಿಸಿದ್ದೇನು?
ಈ ಭೀಕರ ದಾಳಿಯು ಶ್ರೀಲಂಕಾದ ನಗರವಾದ ಗಾಲೆಯ ಬಂದರಿನಿಂದ ಸುಮಾರು 40 ನಾಟಿಕಲ್ ಮೈಲಿ ದೂರದಲ್ಲಿ ಸಂಭವಿಸಿದೆ. ಇರಾನ್ನ ‘ಐರಿಸ್ ದೆನಾ’ (IRIS Dena) ಎಂಬ ಹೆಸರಿನ ಮೌಡ್ಜ್-ಕ್ಲಾಸ್ (Moudge-class) ಫ್ರಿಗೇಟ್ ಯುದ್ಧ ನೌಕೆಯು ಮುಳುಗಡೆಯಾಗಿದೆ. ಹಡಗಿನಲ್ಲಿದ್ದ 180 ಸಿಬ್ಬಂದಿಗಳ ಪೈಕಿ ಕನಿಷ್ಠ 87 ಮಂದಿ ಮೃತಪಟ್ಟಿದ್ದಾರೆ ಮತ್ತು 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ಇರಾನಿನ ಯುದ್ಧನೌಕೆಗೆ ಪೆರಿಸ್ಕೋಪ್ ಆಳದಲ್ಲಿಯೂ ಸಹ ಅಮೆರಿಕನ್ ಜಲಾಂತರ್ಗಾಮಿಯನ್ನು ಪತ್ತೆಹಚ್ಚಲು ಸಾಧ್ಯವಾಗದಿರಬಹುದು. ಇದು ಅಮೆರಿಕದ ಜಲಾಂತರ್ಗಾಮಿ ನೌಕೆಯ ತಂತ್ರಗಳ ಸಾಮರ್ಥ್ಯಗಳ ಬಗ್ಗೆ ಹೇಳುತ್ತದೆ. ಮೌಡ್ಜ್ ಕ್ಲಾಸ್ ಫ್ರಿಗೇಟ್ ಆಗಿರುವ ಐರಿಸ್ ದೇನಾ ನೌಕಾ ಸಮರಾಭ್ಯಾಸ ಮಾಡಲು ʼಮಿಲನ್ʼನಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿತ್ತು. ಇದು ಭಾರತದಿಂದ ಇರಾನ್ಗೆ ಪ್ರಯಾಣಿಸುವಾಗ ಅಮೆರಿಕದ ಜಲಾಂತರ್ಗಾಮಿ ಈ ನೌಕೆಯ ಮೇಲೆ ಹಿಂದೂ ಮಹಾಸಾಗರದಲ್ಲಿ ದಾಳಿ ಮಾಡಿದೆ.
ಇರಾನ್ ನೌಕೆಯಿಂದ ತುರ್ತು ಕರೆ (Distress Call) ಬಂದ ಕೂಡಲೇ ಶ್ರೀಲಂಕಾ ನೌಕಾಪಡೆ ಮತ್ತು ವಾಯುಪಡೆ ಜಂಟಿ ಕಾರ್ಯಾಚರಣೆ ಆರಂಭಿಸಿವೆ. ಸುಮಾರು 30 ಗಾಯಾಳುಗಳನ್ನು ಗಾಲೆಯ ಮುಖ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಡೀ ಆಸ್ಪತ್ರೆಯನ್ನು ಹೈ ಅಲರ್ಟ್ನಲ್ಲಿ ಇರಿಸಲಾಗಿದೆ ಎಂದು ಶ್ರೀಲಂಕಾ ವಿದೇಶಾಂಗ ಸಚಿವ ವಿಜಿತ ಹೇರತ್ ತಿಳಿಸಿದ್ದಾರೆ.
ಶ್ರೀಲಂಕಾ ನೌಕಾಪಡೆಯ ವಕ್ತಾರ ಬುದ್ಧಿಕ ಸಂಪತ್ ಮಾತನಾಡಿ, “ಅಂತಾರಾಷ್ಟ್ರೀಯ ಹುಡುಕಾಟ ಮತ್ತು ರಕ್ಷಣಾ ವಲಯದ (Search and Rescue Area) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದರಿಂದ, ಜಾಗತಿಕ ನಿಯಮಗಳ ಅಡಿಯಲ್ಲಿ ನಾವು ಸಹಾಯಕ್ಕೆ ಧಾವಿಸಿದ್ದೇವೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಸಂಘರ್ಷದ ಹಿನ್ನೆಲೆ: ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ನಿಯಂತ್ರಣ
ಈ ದಾಳಿಯು ಇರಾನ್ನ ಕ್ರಾಂತಿಕಾರಿ ಪಡೆಗಳು (Revolutionary Guards) ಜಗತ್ತಿನ ಪ್ರಮುಖ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೇಲೆ ಪೂರ್ಣ ನಿಯಂತ್ರಣ ಸಾಧಿಸಿರುವುದಾಗಿ ಘೋಷಿಸಿದ ಬೆನ್ನಲ್ಲೇ ನಡೆದಿದೆ. ಅಲ್ಲಿ ಸಂಚರಿಸುವ ಹಡಗುಗಳ ಮೇಲೆ ಕ್ಷಿಪಣಿ ಅಥವಾ ಡ್ರೋನ್ ದಾಳಿ ನಡೆಸುವುದಾಗಿ ಇರಾನ್ ಬೆದರಿಕೆ ಹಾಕಿತ್ತು. ಇದಕ್ಕೆ ಪ್ರತಿಯಾಗಿ, ತೈಲ ಟ್ಯಾಂಕರ್ಗಳಿಗೆ ರಕ್ಷಣೆ ನೀಡಲು ಅಮೆರಿಕ ಸನ್ನದ್ಧವಾಗಿದೆ ಎಂದು ಟ್ರಂಪ್ ಸರ್ಕಾರ ಎಚ್ಚರಿಕೆ ನೀಡಿತ್ತು. ಮಧ್ಯಪ್ರಾಚ್ಯದ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ