ನವದೆಹಲಿ: ಇರಾನ್ ರಾಜಧಾನಿ ತೆಹ್ರಾನ್‌ನ ಹೃದಯಭಾಗದಲ್ಲಿರುವ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ನಿವಾಸದ ಅಡಿಯಲ್ಲಿ ನಿರ್ಮಿಸಲಾಗಿದ್ದ ಬೃಹತ್ ಭೂಗತ ಬಂಕರ್ ಮೇಲೆ ಶುಕ್ರವಾರ ಮುಂಜಾನೆ ಇಸ್ರೇಲ್ ಯುದ್ಧ ವಿಮಾನಗಳು ಭೀಕರ ದಾಳಿ ನಡೆಸಿವೆ. ಇಸ್ರೇಲ್ ವಾಯುಪಡೆಯ ಸುಮಾರು 50 ಯುದ್ಧ ವಿಮಾನಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಮೊಸಾದ್ ಮತ್ತು ಮಿಲಿಟರಿ ಗುಪ್ತಚರ ಇಲಾಖೆಯ ನಿಖರ ಮಾಹಿತಿಯ ಮೇರೆಗೆ ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ತಿಳಿಸಿದೆ.
ಆಯತೊಲ್ಲಾ ಅಲಿ ಖಮೇನಿ ಅವರಿಗಾಗಿ ನಿರ್ಮಿಸಲಾಗಿದ್ದ ಅತ್ಯಾಧುನಿಕ ಸುರಕ್ಷಿತ ಬಂಕರ್ ಅನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ‘ಆಪರೇಷನ್ ರೋರಿಂಗ್ ಲಯನ್’ ಅಡಿಯಲ್ಲಿ ನಡೆದ ಹಿಂದಿನ ದಾಳಿಗಳಲ್ಲಿ ಖಮೇನಿ ಹತರಾಗಿದ್ದಾರೆ. ಈಗಿನ ದಾಳಿಯಲ್ಲಿ ಆಯತೊಲ್ಲಾ ಅಲಿ ಖಮೇನಿ ಅವರ ಆಡಳಿತದ ಇತರ ಹಿರಿಯ ಅಧಿಕಾರಿಗಳು ಬಳಸುತ್ತಿದ್ದ ಕೇಂದ್ರ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ ಎಂದು ಹೇಳಿದೆ.
ಇಸ್ರೇಲ್ ವಾಯುಪಡೆಯ ಪ್ರಕಾರ, ಇರಾನ್ ಸರ್ಕಾರವು ವರ್ಷಗಳಿಂದ ಈ ಭೂಗತ ತಾಣವನ್ನು ತನ್ನ ಮಿಲಿಟರಿ ಯೋಜನೆಗಳಿಗಾಗಿ ಮತ್ತು ಪಶ್ಚಿಮ ದೇಶಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಬಳಸುತ್ತಿತ್ತು. ಈ ಬಂಕರ್ ತೆಹ್ರಾನ್ ನಗರದ ರಸ್ತೆಗಳ ಅಡಿಯಲ್ಲಿ ನಿರ್ಮಿಸಲಾಗಿದ್ದು, ಅನೇಕ ಪ್ರವೇಶ ದ್ವಾರಗಳನ್ನು ಹೊಂದಿತ್ತು. ಈ ದಾಳಿಯಿಂದ ಇರಾನ್‌ನ ಕಮಾಂಡ್ ಮತ್ತು ಕಂಟ್ರೋಲ್ ವ್ಯವಸ್ಥೆಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಹೇಳಲಾಗಿದೆ.
ಸುಮಾರು ಮೂರು ದಶಕಗಳ ಕಾಲ ಇರಾನ್ ಅನ್ನು ಆಳಿದ 86 ವರ್ಷದ ಅಲಿ ಖಮೇನಿ, ಇಸ್ರೇಲ್ ಮತ್ತು ಅಮೆರಿಕಾದ ಜಂಟಿ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಅವರ ಜೊತೆಗೆ ಅವರ ಪುತ್ರಿ, ಅಳಿಯ ಮತ್ತು ಮೊಮ್ಮಗ ಕೂಡ ಸಾವಿಗೀಡಾಗಿದ್ದಾರೆ. ಇರಾನ್ ಸರ್ಕಾರವು ದೇಶದಲ್ಲಿ 40 ದಿನಗಳ ಶೋಕಾಚರಣೆ ಮತ್ತು 7 ದಿನಗಳ ರಜೆಯನ್ನು ಘೋಷಿಸಿದೆ.
ಇರಾನ್ ಮಾತ್ರವಲ್ಲದೆ ಲೆಬನಾನ್‌ನ ಬೈರುತ್ ಮೇಲೂ ಇಸ್ರೇಲ್ ವಾಯುದಾಳಿ ಮುಂದುವರಿಸಿದೆ. ಇರಾನ್ ಪ್ರತಿಯಾಗಿ ಕುವೈತ್, ಕತಾರ್, ಸೌದಿ ಅರೇಬಿಯಾ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕಾ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ.
ಈ ಸಂಘರ್ಷದಲ್ಲಿ ಇರಾನ್‌ನಲ್ಲಿ 1,230, ಲೆಬನಾನ್‌ನಲ್ಲಿ 120, ಇಸ್ರೇಲ್‌ನಲ್ಲಿ 12 ಮತ್ತು 6 ಅಮೆರಿಕಾ ಸೈನಿಕರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ನೌಕಾಪಡೆಯ ಮೇಲೆ ದಾಳಿ:
ಅಮೆರಿಕಾ ಮಿಲಿಟರಿಯು ಇರಾನ್‌ನ ಡ್ರೋನ್ ವಾಹಕ ನೌಕೆ ‘ಐಆರ್‌ಐಎಸ್ ಶಾಹಿದ್ ಬಘೇರಿ’ ಮೇಲೆ ದಾಳಿ ಮಾಡಿದ್ದು, ಅದು ಬೆಂಕಿಗಾಹುತಿಯಾಗಿದೆ. ಅಲ್ಲದೆ, ಶ್ರೀಲಂಕಾ ಸಮುದ್ರ ತೀರದಲ್ಲಿ ಅಮೆರಿಕಾ ಜಲಾಂರ್ಗಾಮಿ ನೌಕೆಯು ಇರಾನ್‌ನ ಫ್ರಿಗೇಟ್ ಅನ್ನು ಮುಳುಗಿಸಿದೆ.
ಅಮೆರಿಕಾದ ಬಿ-2 ಸ್ಟೆಲ್ತ್ ಬಾಂಬರ್‌ಗಳು ಇರಾನ್‌ನ ಭೂಗತ ಕ್ಷಿಪಣಿ ಉಡಾವಣಾ ಕೇಂದ್ರಗಳ ಮೇಲೆ 2,000 ಪೌಂಡ್ ತೂಕದ ಬಾಂಬ್‌ಗಳನ್ನು ಹಾಕಿ ನಾಶಪಡಿಸಿವೆ.
ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ತೀರಾ ಉದ್ವಿಗ್ನಗೊಂಡಿದ್ದು, ಜಾಗತಿಕ ತೈಲ ಪೂರೈಕೆ ಮತ್ತು ವಿಮಾನಯಾನದ ಮೇಲೆ ತೀವ್ರ ಪರಿಣಾಮ ಬೀರಿದೆ.


ನಿಮ್ಮ ಕಾಮೆಂಟ್ ಬರೆಯಿರಿ