ಸಂಕಷ್ಟದಲ್ಲಿರುವ ಭಾರತೀಯರಿಗೆ ಆಸರೆಯಾದ ದುಬೈ ಉದ್ಯಮಿಗಳು : 64 ಮನೆಗಳ ಅಪಾರ್ಟ್‌ಮೆಂಟ್‌, ಫಾರ್ಮ್‌ಹೌಸ್‌ನಲ್ಲಿ ಆಶ್ರಯ

ನವದೆಹಲಿ:ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಉಂಟಾದ ಪ್ರಯಾಣದ ತೊಂದರೆಯ ನಡುವೆ, ದುಬೈನಲ್ಲಿರುವ ಭಾರತೀಯ ಉದ್ಯಮಿಯೊಬ್ಬರು ಸಂಕಷ್ಟದಲ್ಲಿರುವ ಭಾರತೀಯ ಪ್ರಜೆಗಳಿಗೆ ವಸತಿ ಕಲ್ಪಿಸಲು ತಮ್ಮ 64 ಮನೆಗಳ ಅಪಾರ್ಟ್‌ಮೆಂಟ್ ಸಂಕೀರ್ಣವನ್ನು ನೀಡಿದ್ದಾರೆ. ಯುಎಇಯಲ್ಲಿರುವ ಅನೇಕ ಭಾರತೀಯರು ವಿಮಾನ ರದ್ದತಿ ಮತ್ತು ವಿಳಂಬದಿಂದಾಗಿ ಮನೆಗೆ ಮರಳಲು ತೊಂದರೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಉಪಕ್ರಮವನ್ನು ಕೈಗೊಂಡಿದ್ದಾರೆ.
ಅಲ್ ಮಿಜಾನ್ ಗ್ರೂಪ್‌ನ ಅಧ್ಯಕ್ಷ ಯೋಗೇಶ ದೋಷಿ ಅವರು ದುಬೈನಲ್ಲಿ ಸಿಲುಕಿರುವ ಭಾರತೀಯರಿಗಾಗಿ ತಮ್ಮ ಸಂಪೂರ್ಣ 64-ಅಪಾರ್ಟ್‌ಮೆಂಟ್‌ಗಳ ವಸತಿ ಕಟ್ಟಡವನ್ನು ನೀಡಿದ್ದಾರೆ. ಈ ಅಪಾರ್ಟ್‌ಮೆಂಟ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಊಟ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ದುಬೈನಲ್ಲಿರುವ ಇಂಡಿಯನ್ ಪೀಪಲ್ಸ್ ಫೋರಂ ಯುಎಇ ಮತ್ತು ಭಾರತದ ಕಾನ್ಸುಲೇಟ್ ಜನರಲ್ ಸಹಯೋಗದೊಂದಿಗೆ ಆಯೋಜಿಸಲಾದ ಈ ಉಪಕ್ರಮವು, ಈ ಸವಾಲಿನ ಅವಧಿಯಲ್ಲಿ ಮಕ್ಕಳು ಮತ್ತು ಕುಟುಂಬಗಳು ಸೇರಿದಂತೆ 125 ಕ್ಕೂ ಹೆಚ್ಚು ಭಾರತೀಯರಿಗೆ ತಾತ್ಕಾಲಿಕ ಆಶ್ರಯ ನೀಡಿದೆ ಎಂದು ದೋಷಿ ತಿಳಿಸಿದ್ದಾರೆ.
ಸಂಕಷ್ಟದಲ್ಲಿರುವ ಹಲವಾರು ಕುಟುಂಬಗಳು ಎನ್‌ಡಿಟಿವಿಗೆ (NDTV) ಪ್ರತಿಕ್ರಿಯಿಸಿ, ಈ ಬೆಂಬಲವು ಅತ್ಯಂತ ನಿರ್ಣಾಯಕ ಸಮಯದಲ್ಲಿ ಲಭಿಸಿದೆ ಎಂದು ಹೇಳಿದ್ದಾರೆ. ಹಲವರ ಹೋಟೆಲ್ ಬುಕಿಂಗ್ ಮುಗಿದಿದ್ದು, ಅದನ್ನು ವಿಸ್ತರಿಸಲು ಸಾಧ್ಯವಾಗದ ಕಾರಣ ತಾವು ಕಷ್ಟಪಡುತ್ತಿದ್ದೆವು, ಇದರಿಂದ ತಮಗೆ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.
ಸಿಲುಕಿಕೊಂಡಿರುವ ಭಾರತೀಯ ಪ್ರಯಾಣಿಕರು ದುಬೈನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಅಜ್ಮಾನ್‌ನಲ್ಲಿರುವ ೀ ಅಪಾರ್ಟ್‌ಮೆಂಟ್‌ ಸಂಕೀರ್ಣದಲ್ಲಿ ಆಶ್ರಯ ಪಡೆದಿದ್ದಾರೆ.

ಪ್ರಮುಖ ಸುದ್ದಿ :-   ಸೋನಂ ವಾಂಗ್ಚುಕ್ ಉಪವಾಸ ಅಂತ್ಯಗೊಳಿಸಲು ಸಿದ್ಧ ಎಂದ ಪತ್ನಿ ; ಆದರೆ ಅದಕ್ಕೆ ಎರಡು ಷರತ್ತುಗಳು...

ಯುಎಇ ಮೂಲದ ಉದ್ಯಮಿ ಧೀರಜ್ ಜೈನ್ ಅವರು ತಕ್ಷಣ ಮನೆಗೆ ಮರಳಲು ಸಾಧ್ಯವಾಗದವರಿಗಾಗಿ ತಮ್ಮ ದೊಡ್ಡ ಫಾರ್ಮ್‌ಹೌಸ್ ಅನ್ನು ತಾತ್ಕಾಲಿಕ ವಸತಿಯಾಗಿ ಪರಿವರ್ತಿಸಿದ್ದಾರೆ. ಹಣ ಅಥವಾ ಉಳಿದುಕೊಳ್ಳಲು ಸ್ಥಳವಿಲ್ಲದೆ ಉಳಿದಿರುವ ಪ್ರಯಾಣಿಕರಿಗೆ ಈ ಆಶ್ರಯ ತಾಣವು ಉಚಿತ ವಸತಿ ಮತ್ತು ಊಟವನ್ನು ಒದಗಿಸುತ್ತದೆ.
ಇದರ ಜೊತೆಗೆ, ಹೋಟೆಲ್‌ಗಳು ಮತ್ತು ಇತರ ಸ್ಥಳಗಳಿಂದ ಪ್ರಯಾಣಿಕರನ್ನು ಪಿಕಪ್ ಮಾಡಿ ಫಾರ್ಮ್‌ಹೌಸ್‌ಗೆ ಕರೆತರಲು ಜೈನ್ ಅವರು 6 ರೋಲ್ಸ್-ರಾಯ್ಸ್ ಸೇರಿದಂತೆ 11 ಕಾರುಗಳನ್ನು ವ್ಯವಸ್ಥೆ ಮಾಡಿದ್ದಾರೆ. ಈ ಉಪಕ್ರಮವು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೆಯಾದ ನಂತರ ಎಲ್ಲರ ಗಮನ ಸೆಳೆಯಿತು.
ಇತ್ತೀಚಿನ ವಿಮಾನ ನಿಲ್ದಾಣಗಳ ಮುಚ್ಚುವಿಕೆ ಮತ್ತು ವಿಮಾನ ರದ್ದತಿಯ ಸಮಯದಲ್ಲಿ ಸಿಲುಕಿಕೊಂಡ ವ್ಯಕ್ತಿಗಳಿಗೆ ಅಸಾಧಾರಣ ಬೆಂಬಲ ನೀಡಿದ್ದಕ್ಕಾಗಿ ಜೈನ್ ಮತ್ತು ಅವರ ಕುಟುಂಬವನ್ನು ಶ್ಲಾಘಿಸಲಾಗಿದೆ. ಜೈನ್ ಕುಟುಂಬದವರು ಸಿಲುಕಿಕೊಂಡ ಅತಿಥಿಗಳೊಂದಿಗೆ ಇದ್ದು, ಅವರ ಆಶ್ರಯ ಪಡೆದವರ ಜೊತೆ ಊಟ ಮಾಡುತ್ತ ಅವರ ಜೊತೆಯೇ ಇದ್ದಾರೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಸಿಜೆಪಿ ‘ಚಲೋ ಸಂಸತ್’ ಮೆರವಣಿಗೆಗೆ ತಡೆ: ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗ, ಲಾಠಿ ಚಾರ್ಜ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement