ಐತಿಹಾಸಿಕ ತೀರ್ಪು: ಗಾಜಿಯಾಬಾದಿನ ಹರೀಶ ರಾಣಾ ದಯಾಮರಣಕ್ಕೆ ಸುಪ್ರೀಂಕೋರ್ಟ್ ಅನುಮತಿ

ನವದೆಹಲಿ: ಕಳೆದ 13 ವರ್ಷಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ (Persistent Vegetative State) ಹಾಸಿಗೆಯಲ್ಲಿದ್ದ 32 ವರ್ಷದ ಯುವಕನಿಗೆ ದಯಾ ಮರಣ(ಗೌರವಯುತ ಸಾವಿನ ಹಕ್ಕು)ಕ್ಕೆ ಅನುಮತಿ ನೀಡುವ ಮೂಲಕ ಸುಪ್ರೀಂ ಕೋರ್ಟ್ ಬುಧವಾರ ಐತಿಹಾಸಿಕ ತೀರ್ಪು ಪ್ರಕಟಿಸಿದೆ. 2018ರ ‘ಕಾಮನ್ ಕಾಸ್’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಮಾರ್ಗಸೂಚಿಗಳ ಅಡಿಯಲ್ಲಿ, ನ್ಯಾಯಾಂಗದ ಮೂಲಕ ದಯಾಮರಣಕ್ಕೆ (Passive Euthanasia) ಅನುಮತಿ ನೀಡಿದ ಭಾರತದ ಮೊದಲ ಪ್ರಕರಣ ಇದಾಗಿದೆ.
ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಹರೀಶ ರಾಣಾ, 13 ವರ್ಷಗಳ ಹಿಂದೆ ತಾನು ತಂಗಿದ್ದ ಕಟ್ಟಡದ ನಾಲ್ಕನೇ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದರು. ಈ ಅಪಘಾತವು ಅವರ ಮೆದುಳಿಗೆ ತೀವ್ರ ಹಾನಿ ಉಂಟುಮಾಡಿತ್ತು. ಅಂದಿನಿಂದ ಹರೀಶ ಅವರು 100% ಪಾರ್ಶ್ವವಾಯು ಪೀಡಿತರಾಗಿ, ಕೇವಲ ಯಂತ್ರಗಳ ಸಹಾಯದಿಂದ ‘ಜೀವಂತ ಶವ’ದಂತೆ ಬದುಕುತ್ತಿದ್ದರು.

ಜಸ್ಟಿಸ್ ಜೆ.ಬಿ. ಪರ್ದಿವಾಲಾ ಮತ್ತು ಜಸ್ಟಿಸ್ ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ಈ ಪ್ರಕರಣವನ್ನು ಆಲಿಸುವಾಗ ಅತ್ಯಂತ ಭಾವುಕ ಮತ್ತು ತಾರ್ಕಿಕ ಅಂಶಗಳನ್ನು ಪ್ರಸ್ತಾಪಿಸಿತು.
ಹರೀಶ ಅವರಿಗೆ ಪೈಪ್ ಮೂಲಕ ನೀಡಲಾಗುತ್ತಿರುವ ಪೌಷ್ಟಿಕಾಂಶವನ್ನು (CAN) ನ್ಯಾಯಾಲಯವು ‘ವೈದ್ಯಕೀಯ ಚಿಕಿತ್ಸೆ’ ಎಂದು ಪರಿಗಣಿಸಿದೆ. ಚೇತರಿಕೆಯ ಸಾಧ್ಯತೆ ಶೂನ್ಯವಾಗಿರುವಾಗ ಇಂತಹ ಚಿಕಿತ್ಸೆಯನ್ನು ಮುಂದುವರಿಸುವುದು ಕೇವಲ ‘ಜೈವಿಕ ಅಸ್ತಿತ್ವ’ವನ್ನು ಎಳೆಯುವುದೇ ಹೊರತು ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತು.
“ಒಬ್ಬರನ್ನು ಪ್ರೀತಿಸುವುದು ಎಂದರೆ ಕತ್ತಲೆಯ ಕಾಲದಲ್ಲೂ ಅವರ ಜೊತೆಗಿರುವುದು” ಎಂದು ಹೇಳಿದ ಜಸ್ಟಿಸ್ ಪರ್ದಿವಾಲಾ ಅವರು, ಕಳೆದ 13 ವರ್ಷಗಳಿಂದ ಮಗನ ಸೇವೆ ಮಾಡಿದ ಪೋಷಕರ ಧೈರ್ಯ ಮತ್ತು ಕಾಳಜಿಯನ್ನು ಶ್ಲಾಘಿಸಿದರು.

ಪ್ರಮುಖ ಸುದ್ದಿ :-   ಟಿಎಂಸಿ ಇಬ್ಭಾಗ ; ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಉಚ್ಚಾಟಿತ ಶಾಸಕ ರಿತಬ್ರತ ಬೆಂಬಲಿಸಿ ಸ್ಪೀಕರ್‌ಗೆ 58 ಶಾಸಕರ ಹಕ್ಕು ಸಲ್ಲಿಕೆ !

ಜೀವ ಬೆಂಬಲ ( life support) ಹಿಂಪಡೆಯಲು ಅನುಮತಿ: ಹರೀಶ ಅವರಿಗೆ ನೀಡಲಾಗುತ್ತಿರುವ ಕೃತಕ ಆಹಾರ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಹಿಂಪಡೆಯಲು ಕೋರ್ಟ್ ಅನುಮತಿ ನೀಡಿದೆ. ಈ ಪ್ರಕ್ರಿಯೆಗೆ ಇದ್ದ 30 ದಿನಗಳ ಕಾಯುವ ಅವಧಿಯನ್ನು ರದ್ದುಗೊಳಿಸಲಾಗಿದೆ.
ಹರೀಶ ಅವರನ್ನು ತಕ್ಷಣವೇ ಏಮ್ಸ್ ಆಸ್ಪತ್ರೆಯ ಪಾಲಿಯೇಟಿವ್ ಕೇರ್ ಸೆಂಟರ್‌ಗೆ ಸ್ಥಳಾಂತರಿಸಬೇಕು. ಅಲ್ಲಿ ವೈದ್ಯರ ಸಮ್ಮುಖದಲ್ಲಿ ಅತ್ಯಂತ ಶಾಂತಿಯುತ ಮತ್ತು ಗೌರವಯುತವಾಗಿ ಲೈಫ್‌ ಸಪೋರ್ಟ್‌ ಅನ್ನು ಸ್ಥಗಿತಗೊಳಿಸಬೇಕು ಎಂದು ಸೂಚಿಸಲಾಗಿದೆ.
ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆಯುತ್ತಿದ್ದ ಹರೀಶ ರಾಣಾ, ಆಗಸ್ಟ್ 20, 2013 ರಂದು ತಮ್ಮ ಪಿಜಿ ವಸತಿಗೃಹದ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಬಿದ್ದು ತಲೆಗೆ ತೀವ್ರ ಗಾಯಗಳಾಗಿ 100% ಪಾರ್ಶ್ವವಾಯು ಪೀಡಿತರಾಗಿ, ಕೇವಲ ‘ಜೀವಂತ ಶವ’ದಂತೆ ಇದ್ದರು. ಅಂದಿನಿಂದ, ಅವರು ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಮತ್ತು ಪೋಷಣೆಗಾಗಿ ಗ್ಯಾಸ್ಟ್ರೋಸ್ಟೊಮಿ ಟ್ಯೂಬ್ ಅನ್ನು ಅವಲಂಬಿಸಿದ್ದಾರೆ.
ಹರೀಶ ಅವರ ತಂದೆ ಮೊದಲು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಅಲ್ಲಿ ಅರ್ಜಿ ತಿರಸ್ಕೃತಗೊಂಡ ಮೇಲೆ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2025ರಲ್ಲಿ ಹರೀಶ ಅವರ ಸ್ಥಿತಿ ಮತ್ತಷ್ಟು ಹದಗೆಟ್ಟು, ಅವರ ದೇಹದ ಮೇಲೆ ತೀವ್ರವಾದ ಬೆಡ್‌ಸೋರ್‌ಗಳು ಉಂಟಾದವು. ವೈದ್ಯಕೀಯ ಮಂಡಳಿಯ ವರದಿಗಳು ಚೇತರಿಕೆ ಅಸಾಧ್ಯವೆಂದು ದೃಢಪಡಿಸಿದ ನಂತರವೇ ಸುಪ್ರೀಂ ಕೋರ್ಟ್ ಈ ಅಂತಿಮ ತೀರ್ಪು ನೀಡಿದೆ.

ಪ್ರಮುಖ ಸುದ್ದಿ :-   ಕೇರಳಕ್ಕೆ ಮುಂಗಾರು ಪ್ರವೇಶ: 8 ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಣೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement