ಫಾರೂಕ್ ಅಬ್ದುಲ್ಲಾ ಮೇಲೆ ಗುಂಡು ಹಾರಿಸಲು ಯತ್ನ : ಕೂದಲೆಳೆ ಅಂತರದಲ್ಲಿ ಪಾರು

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಶುಕ್ರವಾರ ರಾತ್ರಿ ಜಮ್ಮುವಿನ ಗ್ರೇಟರ್ ಕೈಲಾಶ್‌ನ ರಾಯಲ್ ಪಾರ್ಕ್ ಪ್ರದೇಶದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ನಡೆದ ಗುಂಡಿನ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಪೊಲೀಸರ ಪ್ರಕಾರ, ರಾತ್ರಿ 10:30ರ ಸುಮಾರಿಗೆ ಅಬ್ದುಲ್ಲಾ ಮತ್ತು ಉಪಮುಖ್ಯಮಂತ್ರಿ ಸುರಿಂದರ್ ಚೌಧರಿ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ.
ಭದ್ರತಾ ಸಿಬ್ಬಂದಿ ಕೂಡಲೇ ಶೂಟರ್‌ನನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಆತನನ್ನು ಕಮಲ್ ಸಿಂಗ್ ಜಮ್ವಾಲ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಯು ಮದ್ಯದ ಅಮಲಿನಲ್ಲಿ ಗುಂಡು ಹಾರಿಸಿದ್ದಾನೆ ಎಂದು ತಿಳಿದುಬಂದಿದೆ. ಆದಾಗ್ಯೂ, ಸಂಶಯಾಸ್ಪದ ವ್ಯಕ್ತಿಯು ಏಕೆ ಗುಂಡು ಹಾರಿಸಿದ ಮತ್ತು ಅವನ ಗುರಿ ಯಾರಾಗಿದ್ದರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.
ವೈರಲ್ ಆದ ಸಿಸಿಟಿವಿ ದೃಶ್ಯಾವಳಿ
ಈ ಘಟನೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಅಬ್ದುಲ್ಲಾ ಅವರು ಚೌಧರಿ ಮತ್ತು ಇತರರೊಂದಿಗೆ ಕಾರ್ಯಕ್ರಮ ಮುಗಿಸಿ ಹೊರಬರುತ್ತಿರುವುದನ್ನು ಕಾಣಬಹುದು. ಆರೋಪಿಯು ಅವರನ್ನು ಹಿಂಬಾಲಿಸಿ ಅಬ್ದುಲ್ಲಾ ಅವರ ಹತ್ತಿರ ಬಂದು ಗುಂಡು ಹಾರಿಸುತ್ತಾನೆ. ತಕ್ಷಣವೇ ಭದ್ರತಾ ಸಿಬ್ಬಂದಿ ದಾಳಿಕೋರನನ್ನು ಹಿಡಿದು ಕೆಳಕ್ಕೆ ಬೀಳಿಸುತ್ತಾರೆ.
ದಾಳಿಕೋರನು  ಫರೂಕ್‌ ಅಬ್ದುಲ್ಲಾ ಅವರಿಗಿಂತ ಕೆಲವು ಹೆಜ್ಜೆಗಳ ಹಿಂದೆ ಇದ್ದ,  ಆತ ಗುಂಡು ಹಾರಿಸಿದಾಗ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಡಿಜಿ) ಕಮಾಂಡೋಗಳು ಅವನನ್ನು ತಳ್ಳಿದರು. ಗುಂಡು ಗುರಿ ತಪ್ಪಿತು ಮತ್ತು ಅಬ್ದುಲ್ಲಾ ಕೂದಲೆಳೆ ಅಂತರದಲ್ಲಿ ಪಾರಾದರು ಎಂದು ವೀಡಿಯೊ ತೋರಿಸಿದೆ.
ದಾಳಿಕೋರ ಕಮಲ್ ಸಿಂಗ್ ಜಮ್ವಾಲ್ ಎಂದು ಗುರುತಿಸಲಾಗಿದ್ದು, ತಕ್ಷಣವೇ ವಶಕ್ಕೆ ಪಡೆಯಲಾಯಿತು. ಅವನನ್ನು ಹಿಡಿದ ತಕ್ಷಣ ಜನರು ಅವನನ್ನು ಥಳಿಸುತ್ತಿರುವುದನ್ನು ದೃಶ್ಯದ ವೀಡಿಯೊಗಳು ತೋರಿಸಿವೆ.
ಬಂಧನದ ನಂತರ, ದಾಳಿಕೋರನು ತಾನು ಜಮ್ಮುವಿನ ಪುರಾಣಸ್ ಮಂಡಿಯ ನಿವಾಸಿ ಎಂದು ಪೊಲೀಸರಿಗೆ ಹೇಳಿದ್ದಾನೆ.  65 ವರ್ಷದ ದಾಳಿಕೋರ ತಾನು ಕಳೆದ 20 ವರ್ಷಗಳಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದೆ ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ.
ಭದ್ರತಾ ಲೋಪದ ಬಗ್ಗೆ ಸುರಿಂದರ ಚೌಧರಿ ಕಿಡಿ
ಉಪಮುಖ್ಯಮಂತ್ರಿ ಚೌಧರಿ, “ನಾವು ಮದುವೆಯ ಕಾರ್ಯಕ್ರಮದಿಂದ ಹೊರಬರುತ್ತಿದ್ದಾಗ ಬಂದೂಕುಧಾರಿ ಅಬ್ದುಲ್ಲಾ ಅವರ ಬೆನ್ನಿನ ಮೇಲೆ ಗುಂಡು ಹಾರಿಸಿದ. ಸ್ಥಳೀಯ ಪೊಲೀಸರ ಭದ್ರತಾ ವ್ಯವಸ್ಥೆಯಲ್ಲಿ ದೊಡ್ಡ ಲೋಪವಾಗಿದೆ, ಅಲ್ಲಿ ಯಾವುದೇ ಭದ್ರತಾ ಕೋಟೆ (Security Cordon) ಇರಲಿಲ್ಲ” ಎಂದು ಟೀಕಿಸಿದ್ದಾರೆ. ಅಲ್ಲದೆ, ಆರೋಪಿಯನ್ನು ತನ್ನದೇ ಭದ್ರತಾ ತಂಡ ಹಿಡಿದು ಪೊಲೀಸರಿಗೆ ಒಪ್ಪಿಸಿದೆ ಎಂದು ಅವರು ತಿಳಿಸಿದ್ದಾರೆ. ಸದ್ಯ ಅಬ್ದುಲ್ಲಾ ಮತ್ತು ಚೌಧರಿ ಇಬ್ಬರೂ ಸುರಕ್ಷಿತವಾಗಿದ್ದಾರೆ.
ಪ್ರಶ್ನೆಗಳನ್ನು ಎತ್ತಿದ ಓಮರ್ ಅಬ್ದುಲ್ಲಾ
ಫಾರೂಕ್ ಅಬ್ದುಲ್ಲಾ ಅವರ ಪುತ್ರ ಹಾಗೂ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಈ ಬಗ್ಗೆ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿದ್ದು, “Z+ ಭದ್ರತೆ ಇರುವ ವ್ಯಕ್ತಿಯ ಇಷ್ಟು ಹತ್ತಿರಕ್ಕೆ ಒಬ್ಬ ವ್ಯಕ್ತಿ ಬರಲು ಹೇಗೆ ಸಾಧ್ಯ?” ಎಂಬ ಪ್ರಶ್ನಿಸಿದ್ದಾರೆ.
ನನ್ನ ತಂದೆ ಅಪಾಯದಿಂದ ಪಾರಾಗಿದ್ದಾರೆ. ಸದ್ಯಕ್ಕೆ ವಿವರಗಳು ಅಸ್ಪಷ್ಟವಾಗಿವೆ, ಆದರೆ ಲೋಡ್ ಆಗಿದ್ದ ಪಿಸ್ತೂಲ್‌ನೊಂದಿಗೆ ವ್ಯಕ್ತಿಯೊಬ್ಬ ಅತ್ಯಂತ ಹತ್ತಿರಕ್ಕೆ ಬಂದು ಗುಂಡು ಹಾರಿಸಲು ಯಶಸ್ವಿಯಾಗಿದ್ದಾನೆ. ಭದ್ರತಾ ತಂಡದ ಸಮಯಪ್ರಜ್ಞೆಯಿಂದಾಗಿ ಗುಂಡು ಹಾದಿ ತಪ್ಪಿತು ಮತ್ತು ಹತ್ಯೆಯ ಯತ್ನ ವಿಫಲವಾಯಿತು. Z+ NSG ಭದ್ರತೆ ಇರುವ ಮಾಜಿ ಮುಖ್ಯಮಂತ್ರಿಯ ಬಳಿಗೆ ಒಬ್ಬ ವ್ಯಕ್ತಿ ಇಷ್ಟು ಹತ್ತಿರ ಬರಲು ಹೇಗೆ ಸಾಧ್ಯ ಎಂಬುದು ಸೇರಿದಂತೆ ಹಲವು ಪ್ರಶ್ನೆಗಳು ಇಲ್ಲಿ ಎದುರಾಗಿವೆ,” ಎಂದು ಓಮರ್ ಅಬ್ದುಲ್ಲಾ ಬರೆದಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement