ವೀಡಿಯೊ | ವಿವಾದಾತ್ಮಕ ರನ್ ಔಟ್: ಸಿಟ್ಟಿನಿಂದ ಹೆಲ್ಮೆಟ್ ಎಸೆದು ಆಕ್ರೋಶ ವ್ಯಕ್ತಪಡಿಸಿದ ಪಾಕ್ ಬ್ಯಾಟರ್ ಸಲ್ಮಾನ್ ಅಘಾ !

ಢಾಕಾದ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಬಾಂಗ್ಲಾದ ಆಲ್ ರೌಂಡರ್ ಮೆಹಿದಿ ಹಸನ್ ಮಿರಾಜ್ ಅವರ ನಡೆ ಪಾಕಿಸ್ತಾನದ ಬ್ಯಾಟರ್ ಸಲ್ಮಾನ್ ಅಘಾ ಅವರ ಕೆಂಗಣ್ಣಿಗೆ ಗುರಿಯಾಗಿದೆ.
ಪಂದ್ಯದ 39ನೇ ಓವರ್‌ನಲ್ಲಿ ಮೊಹಮ್ಮದ್ ರಿಜ್ವಾನ್ ನೇರವಾಗಿ ಹೊಡೆದ ಚೆಂಡು ಮಿರಾಜ್ ಕಾಲಿಗೆ ಬಡಿದು ನಂತಿತು. ಈ ವೇಳೆ ಕ್ರೀಸ್‌ನಿಂದ ಸ್ವಲ್ಪ ಹೊರಗಿದ್ದ ಸಲ್ಮಾನ್ ಅಘಾ, ಸೌಜನ್ಯದ ದೃಷ್ಟಿಯಿಂದ ಚೆಂಡನ್ನು ಎತ್ತಿ ಮಿರಾಜ್ ಕೈಗೆ ನೀಡಲು ಮುಂದಾದರು. ಆದರೆ ಇದನ್ನೇ ಅವಕಾಶವಾಗಿ ಬಳಸಿಕೊಂಡ ಮಿರಾಜ್, ತಕ್ಷಣ ಚೆಂಡನ್ನು ಕಿತ್ತುಕೊಂಡು ಸ್ಟಂಪ್‌ಗೆ ಎಸೆದರು. ಅಘಾ ಕ್ರೀಸ್ ಹೊರಗಿದ್ದ ಕಾರಣ ಮೂರನೇ ಅಂಪೈರ್ ಇದನ್ನು ‘ರನ್ ಔಟ್’ ಎಂದು ಘೋಷಿಸಿದರು.

ಈ ನಡೆಯಿಂದ ಕುಪಿತಗೊಂಡ ಅಘಾ ತಮ್ಮ ಹೆಲ್ಮೆಟ್ ಅನ್ನು ನೆಲಕ್ಕೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಘಟನೆಯ ಬೆನ್ನಲ್ಲೇ ಪಾಕಿಸ್ತಾನದ ಟಿ20 ನಾಯಕ ಮತ್ತು ಬಾಂಗ್ಲಾ ನಾಯಕ ಲಿಟ್ಟನ್ ದಾಸ್ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ 64 ರನ್ ಗಳಿಸಿದ್ದ ಅಘಾ ಅಸಮಾಧಾನದಿಂದಲೇ ಮೈದಾನ ತೊರೆದರು.
ಬಾಂಗ್ಲಾದೇಶ ತಂಡವು ಈ ಹಿಂದೆಯೂ ಇಂತಹ ವಿವಾದಗಳಿಗೆ ಸಿಲುಕಿತ್ತು. 2023ರ ವಿಶ್ವಕಪ್ ನಲ್ಲಿ ಶ್ರೀಲಂಕಾದ ಅನುಜೆಲೋ ಮ್ಯಾಥ್ಯೂಸ್ ವಿರುದ್ಧ ‘ಟೈಮ್ಡ್ ಔಟ್’ ಅಪೀಲ್ ಮಾಡುವ ಮೂಲಕ ಶಕೀಬ್ ಅಲ್ ಹಸನ್ ನೇತೃತ್ವದ ತಂಡ ಟೀಕೆಗೆ ಗುರಿಯಾಗಿತ್ತು.
ಇತ್ತೀಚಿನ ತಿಂಗಳುಗಳಲ್ಲಿ ಭಾರತದ ವಿರುದ್ಧದ ನಿಲುವು ತಳೆದಿದ್ದ ಬಾಂಗ್ಲಾ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸುಧಾರಿಸಿತ್ತು. ಆದರೆ ಶುಕ್ರವಾರ ನಡೆದ ಈ ಘಟನೆ ‘ಕ್ರೀಡಾ ಸ್ಫೂರ್ತಿ’ಯ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement