ತೆಹ್ರಾನ್: ಇರಾನ್‌ನ ದಿವಂಗತ ಸರ್ವೋಚ್ಚ ನಾಯಕ ಅಲಿ ಹೊಸೇನಿ ಖಮೇನಿ ಅವರ ವಿಮಾನವನ್ನು ತೆಹ್ರಾನ್‌ನ ಮೆಹ್ರಾಬಾದ್ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಧ್ವಂಸಗೊಳಿಸಿರುವುದಾಗಿ ಇಸ್ರೇಲ್ ತಿಳಿಸಿದೆ. ಈ ದಾಳಿಯು ಇರಾನ್‌ನ ಪ್ರಾದೇಶಿಕ ಸಮನ್ವಯ ಸಾಮರ್ಥ್ಯಕ್ಕೆ ಬಿದ್ದ ದೊಡ್ಡ ಹೊಡೆತ ಎಂದು ಇಸ್ರೇಲ್ ಬಣ್ಣಿಸಿದೆ.
ಇಸ್ರೇಲ್ ರಕ್ಷಣಾ ಪಡೆ (IDF) ಪ್ರಕಾರ, ಈ ವಿಮಾನವನ್ನು ಖಮೇನಿ ಮತ್ತು ಇತರ ಹಿರಿಯ ಅಧಿಕಾರಿಗಳು ಮಿಲಿಟರಿ ಉಪಕರಣಗಳ ಸಂಗ್ರಹಣೆ ಹಾಗೂ ಮಿತ್ರ ರಾಷ್ಟ್ರಗಳೊಂದಿಗೆ ಸಂಬಂಧ ವೃದ್ಧಿಸಲು ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಬಳಸುತ್ತಿದ್ದರು. “ಇರಾನ್ ಭಯೋತ್ಪಾದಕ ಆಡಳಿತದ ನಾಯಕನ ವಿಮಾನವನ್ನು ಮೆಹ್ರಾಬಾದ್ ವಿಮಾನ ನಿಲ್ದಾಣದಲ್ಲಿ ಧ್ವಂಸಗೊಳಿಸಲಾಗಿದೆ. ಈ ವಿಮಾನವು ಸೇನಾ ಶಕ್ತಿ ಹೆಚ್ಚಿಸಲು ಮತ್ತು ಇತರ ರಾಷ್ಟ್ರಗಳೊಂದಿಗೆ (Axis countries) ಸಂಪರ್ಕ ಸಾಧಿಸಲು ಬಳಕೆಯಾಗುತ್ತಿತ್ತು,” ಎಂದು ಇಸ್ರೇಲ್ ವಾಯುಪಡೆ (IAF) ಹೇಳಿಕೆಯಲ್ಲಿ ತಿಳಿಸಿದೆ.
16 ವಿಮಾನಗಳ ನಾಶ
‘ದಿ ಟೈಮ್ಸ್ ಆಫ್ ಇಸ್ರೇಲ್’ ವರದಿಯ ಪ್ರಕಾರ, ಈ ತಿಂಗಳ ಆರಂಭದಲ್ಲಿ ಮೆಹ್ರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಒಟ್ಟು 16 ವಿಮಾನಗಳನ್ನು ನಾಶಪಡಿಸಲಾಗಿದೆ. ಈ ವಿಮಾನಗಳನ್ನು ಇರಾನ್‌ನ ‘ಕುಡ್ಸ್ ಫೋರ್ಸ್’ ಲೆಬನಾನ್‌ನ ಹಿಜ್ಬುಲ್ಲಾ ಸೇರಿದಂತೆ ವಿವಿಧ ಗುಂಪುಗಳಿಗೆ ಶಸ್ತ್ರಾಸ್ತ್ರ ಮತ್ತು ಹಣವನ್ನು ಸಾಗಿಸಲು ಬಳಸುತ್ತಿತ್ತು ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. ಇಸ್ರೇಲಿ ಪಡೆಗಳ ಕಣ್ಣು ತಪ್ಪಿಸಲು ಇರಾನ್ ಈ ವಿಮಾನಗಳನ್ನು ಹಳೆಯ ಅಥವಾ ಬಳಕೆಯಲ್ಲಿಲ್ಲದ ವಿಮಾನಗಳ ಸಂಗ್ರಹಣಾ ಪ್ರದೇಶದಲ್ಲಿ ಬಚ್ಚಿಡಲು ಪ್ರಯತ್ನಿಸಿತ್ತು ಎನ್ನಲಾಗಿದೆ.
ಇರಾನ್ ಸಂಘರ್ಷ
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ 86 ವರ್ಷದ ಇರಾನ್ ಸರ್ವೋಚ್ಚ ನಾಯಕ ಅಲಿ ಖಮೇನಿ ಹತರಾದ ನಂತರ ಈ ಪ್ರಾದೇಶಿಕ ಸಂಘರ್ಷ ತೀವ್ರಗೊಂಡಿದೆ. ಇದಕ್ಕೆ ಪ್ರತಿಯಾಗಿ ಇರಾನ್, ಗಲ್ಫ್ ರಾಷ್ಟ್ರಗಳಲ್ಲಿರುವ ಇಸ್ರೇಲ್ ಮತ್ತು ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿದೆ.
ಈ ಉದ್ವಿಗ್ನತೆಯಿಂದಾಗಿ ಜಗತ್ತಿನ ಪ್ರಮುಖ ಇಂಧನ ಕಾರಿಡಾರ್ ಆದ ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಸಾಗುವ
ಹಡಗು ಸಂಚಾರಕ್ಕೆ ಅಡ್ಡಿಯಾಗಿದೆ. ವಿಶ್ವದ ಒಟ್ಟು ತೈಲ ಪೂರೈಕೆಯ ಐದನೇ ಒಂದು ಭಾಗ ಈ ಮಾರ್ಗದ ಮೂಲಕವೇ ಸಾಗುವುದರಿಂದ, ಜಾಗತಿಕ ತೈಲ ಮಾರುಕಟ್ಟೆ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ಇದು ಗಂಭೀರ ಪರಿಣಾಮ ಬೀರಿದೆ.


ನಿಮ್ಮ ಕಾಮೆಂಟ್ ಬರೆಯಿರಿ