ಜಗತ್ತನ್ನೇ ಗೆಲ್ಲ ಹೊರಟಿದ್ದ ಗ್ರೀಕ್ ಚಕ್ರವರ್ತಿ ಅಲೆಕ್ಸಾಂಡರ್ ದಿ ಗ್ರೇಟ್ ಸ್ಥಾಪಿಸಿದನೆನ್ನಲಾದ, ಶತಮಾನಗಳಿಂದ ಮಣ್ಣಿನಡಿಯಲ್ಲಿ ಹೂತುಹೋಗಿದ್ದ ಐತಿಹಾಸಿಕ ನಗರವೊಂದನ್ನು ಪುರಾತತ್ವ ಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ. ದಕ್ಷಿಣ ಇರಾಕ್‌ನ ಟೈಗ್ರಿಸ್ ನದಿಯ ದಡದಲ್ಲಿರುವ ಈ ನಗರವನ್ನು ‘ಅಲೆಕ್ಸಾಂಡ್ರಿಯಾ’ ಎಂದು ಗುರುತಿಸಲಾಗಿದೆ.
ಸುಮಾರು ಕ್ರಿ.ಪೂ. 4ನೇ ಶತಮಾನದಲ್ಲಿ ನಿರ್ಮಾಣವಾಗಿದ್ದ ಈ ನಗರವು ಕಾಲಕ್ರಮೇಣ ಇತಿಹಾಸದ ಪುಟಗಳಿಂದ ಮರೆಯಾಗಿತ್ತು. ಕಳೆದ ದಶಕದಿಂದಲೂ ಸಂಶೋಧಕರು ಇದರ ಹುಡುಕಾಟದಲ್ಲಿದ್ದರು. ಇತ್ತೀಚೆಗೆ ಡ್ರೋನ್ ಚಿತ್ರಣಗಳು ಮತ್ತು ಅತ್ಯಾಧುನಿಕ ‘ಜಿಯೋಫಿಸಿಕಲ್ ಸ್ಕ್ಯಾನ್’ ತಂತ್ರಜ್ಞಾನವನ್ನು ಬಳಸಿ ಈ ನಗರದ ಕೋಟೆಗಳು, ರಸ್ತೆಗಳು ಮತ್ತು ಬೃಹತ್ ಕಟ್ಟಡಗಳನ್ನು ನಕ್ಷೆ ಮಾಡಲಾಗಿದೆ.
ಈ ನಗರದ ವಿಶೇಷತೆಗಳೇನು?
ಜರ್ಮನಿಯ ಕಾನ್ಸ್ಟಾನ್ಸ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ, ಈ ನಗರವು ಅಂದು ಭಾರತ, ಮೆಸೊಪಟೇಮಿಯ ಮತ್ತು ಮೆಡಿಟರೇನಿಯನ್ ದೇಶಗಳ ನಡುವೆ ವ್ಯಾಪಾರ ಸಂಪರ್ಕ ಕಲ್ಪಿಸುವ ಪ್ರಮುಖ ಬಂದರು ನಗರವಾಗಿತ್ತು.
ಈ ನಗರವು ಸುಮಾರು 2.5 ಚದರ ಮೈಲಿಗಳಷ್ಟು ವಿಸ್ತಾರವಾಗಿದೆ. ಇದು ಅಂದಿನ ಕಾಲದ ಪ್ರಖ್ಯಾತ ನಗರಗಳಾದ ಈಜಿಪ್ಟ್‌ನ ಅಲೆಕ್ಸಾಂಡ್ರಿಯಾ ಅಥವಾ ಸೆಲ್ಯೂಸಿಯಾಕ್ಕಿಂತಲೂ ದೊಡ್ಡದಾಗಿತ್ತು ಎಂಬುದು ಸಂಶೋಧಕರನ್ನು ಬೆರಗುಗೊಳಿಸಿದೆ.
ಉತ್ಖನನದ ವೇಳೆ ದೇವಸ್ಥಾನದ ಸಂಕೀರ್ಣಗಳು, ಕುಲುಮೆಗಳನ್ನೊಳಗೊಂಡ ಕಾರ್ಯಾಗಾರಗಳು ಮತ್ತು ಸುಸಜ್ಜಿತ ಕಾಲುವೆ ವ್ಯವಸ್ಥೆಗಳು ಪತ್ತೆಯಾಗಿವೆ. ರೋಮನ್ ಬರಹಗಾರ ‘ಪ್ಲಿನಿ ದಿ ಎಲ್ಡರ್’ ಅವರ ದಾಖಲೆಗಳ ಪ್ರಕಾರ, 324 BC ಯಲ್ಲಿ ಅಲೆಕ್ಸಾಂಡರ್ ಸ್ವತಃ ಈ ಆಯಕಟ್ಟಿನ ಸ್ಥಳವನ್ನು ಆಯ್ಕೆ ಮಾಡಿದ್ದ.
ನಗರದ ಅವನತಿಗೆ ಕಾರಣವೇನು?
ಕ್ರಿ.ಶ. 3ನೇ ಶತಮಾನದ ನಂತರ ಈ ನಗರದ ಪ್ರಾಮುಖ್ಯತೆ ಕುಸಿಯತೊಡಗಿತು. ಟೈಗ್ರಿಸ್ ನದಿಯು ತನ್ನ ಹರಿಯುವ ಹಾದಿಯನ್ನು ಬದಲಿಸಿದ್ದರಿಂದ, ಬಂದರು ನಗರವಾಗಿದ್ದ ಇದಕ್ಕೆ ವ್ಯಾಪಾರ ವಹಿವಾಟು ನಡೆಸಲು ಅಸಾಧ್ಯವಾಯಿತು. ಅಲ್ಲದೆ, ಹಲವಾರು ಬಾರಿ ಸಂಭವಿಸಿದ ಪ್ರವಾಹಗಳು ನಗರದ ಅವನತಿಗೆ ಕಾರಣವಾದವು. ಆದರೂ, ಭೂಮಿಯ ಅಡಿಯಲ್ಲಿ ಈ ನಗರದ ರಚನೆಗಳು ಇಂದಿಗೂ ಸುಸ್ಥಿತಿಯಲ್ಲಿರುವುದು ವಿಶೇಷವಾಗಿದೆ.
ಸವಾಲುಗಳ ನಡುವೆ ಸಂಶೋಧನೆ
ಜರ್ಮನಿಯ ಕಾನ್‌ಸ್ಟಾಂಜ್ ವಿಶ್ವವಿದ್ಯಾಲಯವು ಜನವರಿ 28 ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಸಂಶೋಧಕರಿಗೆ ಸ್ಥಳದ ಮೇಲ್ನೋಟದ ಸಮೀಕ್ಷೆಯನ್ನು ಮಾತ್ರ ನಡೆಸಲು ಅನುಮತಿ ನೀಡಲಾಗಿತ್ತು ಮತ್ತು ಈ ಕೆಲಸವನ್ನು ಸೈನಿಕರು ಅಥವಾ ಪೊಲೀಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಡೆಸಲಾಯಿತು. ಈ ಸಂಶೋಧನಾ ಕಾರ್ಯ ಅಷ್ಟು ಸುಲಭವಾಗಿರಲಿಲ್ಲ 2016 ರಲ್ಲಿ ಬ್ರಿಟಿಷ್ ಪುರಾತತ್ವ ಶಾಸ್ತ್ರಜ್ಞರಾದ ಜೇನ್ ಮೂನ್, ರಾಬರ್ಟ್ ಕಿಲ್ಲಿಕ್ ಮತ್ತು ಸ್ಟುವರ್ಟ್ ಕ್ಯಾಂಪ್ಬೆಲ್ ಈ ಯೋಜನೆಯ ಅಡಿಪಾಯ ಹಾಕಿದ್ದರು.
ಐಸಿಸ್ (ISIS) ಭಯೋತ್ಪಾದಕ ಸಂಘಟನೆಯ ಭೀತಿಯ ನಡುವೆಯೂ ಸೈನಿಕರ ಕಾವಲಿನಲ್ಲಿ ಸಂಶೋಧಕರು ಈ ಕಾರ್ಯ ಕೈಗೊಂಡಿದ್ದರು.
ಇಲ್ಲಿ ಬೇಸಿಗೆಯಲ್ಲಿ ತಾಪಮಾನವು 120 ಡಿಗ್ರಿ ಫ್ಯಾರನ್ಹೀಟ್ (ಸುಮಾರು 48.8°C) ದಾಟುತ್ತದೆ. ಇಂತಹ ಸುಡುವ ಬಿಸಿಲು ಮತ್ತು ವಾಯುಮಾಲಿನ್ಯದ ನಡುವೆ ಸಂಶೋಧನೆ ನಡೆಸಲಾಗಿದೆ. ಈ ಮಹತ್ವದ ಶೋಧನೆಯು ಪ್ರಾಚೀನ ಜಗತ್ತಿನ ವ್ಯಾಪಾರ ಮತ್ತು ಅಲೆಕ್ಸಾಂಡರ್‌ನ ಸಾಮ್ರಾಜ್ಯಶಾಹಿ ಯೋಜನೆಯ ಬಗ್ಗೆ ಹೊಸ ಬೆಳಕು ಚೆಲ್ಲಲಿದೆ ಎಂದು ಪ್ರೊಫೆಸರ್ ಸ್ಟೀಫನ್ ಆರ್ ಹೌಸರ್ ಅಭಿಪ್ರಾಯಪಟ್ಟಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ