19 ವರ್ಷದ ಖ್ಯಾತ ಕುಸ್ತಿಪಟು ಸೇರಿ ಮೂವರು ಪ್ರತಿಭಟನಾಕಾರರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ಇರಾನ್‌

ಇರಾನ್ ಸರ್ಕಾರವು ಪ್ರತಿಭಟನಾಕಾರರ ವಿರುದ್ಧ ತನ್ನ ದಮನಕಾರಿ ನೀತಿಯನ್ನು ತೀವ್ರಗೊಳಿಸಿದ್ದು, ಸರ್ಕಾರಿ ಮಾಧ್ಯಮಗಳು ಮತ್ತು ಮಾನವ ಹಕ್ಕುಗಳ ಸಂಘಟನೆಗಳ ವರದಿಯ ಪ್ರಕಾರ, ಕ್ಯೂಮ್ (Qom) ನಗರದಲ್ಲಿ 19 ವರ್ಷದ ಚಾಂಪಿಯನ್ ಕುಸ್ತಿಪಟು ಮತ್ತು ಇತರ ಇಬ್ಬರು ಪ್ರತಿಭಟನಾಕಾರರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ.
ವರದಿ ಪ್ರಕಾರ, ಉದಯೋನ್ಮುಖ ಕುಸ್ತಿ ಪ್ರತಿಭೆ ಸಲೇಹ್ ಮೊಹಮ್ಮದಿ (Saleh Mohammadi), ಸಯೀದ್ ದಾವೋದಿ ಮತ್ತು ಮೆಹದಿ ಘಾಸೆಮಿ ಎಂಬುವವರನ್ನು ಗುರುವಾರ ಗಲ್ಲಿಗೇರಿಸಲಾಯಿತು. ಜನವರಿ 8, 2026 ರಂದು ನಡೆದ ಪ್ರತಿಭಟನೆಯಲ್ಲಿ ಇಬ್ಬರು ಪೊಲೀಸರ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಇವರ ಮೇಲಿತ್ತು.
ಕ್ಯೂಮ್ ನಗರದ ಸಾರ್ವಜನಿಕರ ಸಮ್ಮುಖದಲ್ಲೇ ಈ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. 2025ರ ಡಿಸೆಂಬರ್‌ನಿಂದ ಆರಂಭವಾದ ರಾಷ್ಟ್ರವ್ಯಾಪಿ ಅಶಾಂತಿಗೆ ಸಂಬಂಧಿಸಿದಂತೆ ಗಲ್ಲಿಗೇರಿಸಲಾದ ಮೊದಲ ಖ್ಯಾತನಾಮ ಪ್ರತಿಭಟನಾಕಾರರು ಇವರಾಗಿದ್ದಾರೆ.

ಮಾನವ ಹಕ್ಕುಗಳ ಸಂಘಟನೆಗಳ ಕಳವಳ:
ಇರಾನ್ ಹ್ಯೂಮನ್ ರೈಟ್ಸ್ (IHRNGO) ಸಂಘಟನೆಯ ನಿರ್ದೇಶಕ ಮಹಮೂದ್ ಅಮಿರಿ-ಮೊಘದ್ದಮ್ ಅವರು, “ಈ ಪ್ರತಿಭಟನಾಕಾರರಿಗೆ ಚಿತ್ರಹಿಂಸೆ ನೀಡಿ ಬಲವಂತದ ಒಪ್ಪಿಗೆ ಪತ್ರ ಪಡೆದು, ಅತ್ಯಂತ ಅನ್ಯಾಯದ ವಿಚಾರಣೆಯ ಮೂಲಕ ಮರಣದಂಡನೆ ವಿಧಿಸಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವು ಕಾನೂನುಬದ್ಧ ಶಿಕ್ಷೆಗಳಲ್ಲ, ಬದಲಿಗೆ ರಾಜಕೀಯ ವಿರೋಧವನ್ನು ಹತ್ತಿಕ್ಕಲು ಮತ್ತು ಜನರಲ್ಲಿ ಭಯ ಸೃಷ್ಟಿಸಲು ಸರ್ಕಾರ ನಡೆಸುತ್ತಿರುವ ‘ನ್ಯಾಯಾಂಗ ಬಾಹಿರ ಕೊಲೆಗಳು ಎಂದು ನಾವು ಪರಿಗಣಿಸುತ್ತೇವೆ’ ಎಂದು ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇರಾನ್‌ನಲ್ಲಿ ಪ್ರತಿಭಟನಾಕಾರರ ಸರಣಿ ಗಲ್ಲು ಶಿಕ್ಷೆಗಳು ನಡೆಯುವ ಭೀತಿಯಿದೆ ಎಂದು ಅವರು ಎಚ್ಚರಿಸಿದ್ದಾರೆ.

ಇರಾನಿನ ಕ್ರೀಡಾಪಟು ಮತ್ತು ಕಾರ್ಯಕರ್ತ ನಿಮಾ ಫರ್ ಅವರು, “ಇದು ಸ್ಪಷ್ಟ ರಾಜಕೀಯ ಕೊಲೆ. ಸಮಾಜವನ್ನು ಭಯಭೀತಿಗೊಳಿಸಲು ಸರ್ಕಾರವು ಕ್ರೀಡಾಪಟುಗಳನ್ನೇ ಗುರಿಯಾಗಿಸಿಕೊಳ್ಳುತ್ತಿದೆ” ಎಂದು ಹೇಳಿದ್ದಾರೆ. ಇದು 2020ರಲ್ಲಿ ನಡೆದ ಕುಸ್ತಿಪಟು ನವೀದ್ ಅಫ್ಕರಿ ಅವರ ಗಲ್ಲು ಶಿಕ್ಷೆಯನ್ನು ನೆನಪಿಸುತ್ತಿದೆ ಎಂದಿದ್ದಾರೆ.
ಇರಾನ್ ಪ್ರತಿಭಟನಾಕಾರರು ಮತ್ತು ಕ್ರೀಡಾಪಟುಗಳ ಗಲ್ಲು ಶಿಕ್ಷೆಯನ್ನು ನಿಲ್ಲಿಸುವವರೆಗೂ ಆ ದೇಶವನ್ನು ಅಂತರಾಷ್ಟ್ರೀಯ ಕ್ರೀಡಾಕೂಟಗಳಿಂದ ನಿಷೇಧಿಸಬೇಕು ಎಂದು ಫರ್ ಒತ್ತಾಯಿಸಿದ್ದಾರೆ.
ಇರಾನ್ ಸರ್ಕಾರವು ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದು, ಮೂಲಭೂತ ಬದಲಾವಣೆ ಬಯಸುತ್ತಿರುವ ತನ್ನದೇ ಜನರ ವಿರುದ್ಧ ದಮನಕಾರಿ ಹಾದಿ ತುಳಿದಿದೆ. ಯುರೋಪಿಯನ್ ಯೂನಿಯನ್ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯವು ಈ ಕೂಡಲೇ ರಾಜತಾಂತ್ರಿಕ ಒತ್ತಡ ಹೇರಿ ಹೆಚ್ಚಿನ ಸಾವುನೋವುಗಳನ್ನು ತಡೆಯಬೇಕೆಂದು ಮಾನವ ಹಕ್ಕುಗಳ ಹೋರಾಟಗಾರರು ಮನವಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement