ವೀಡಿಯೊ | ಈದ್ ಹಬ್ಬದ ದಿನವೇ ಜೆರುಸಲೇಂ ಮೇಲೆ ಇರಾನ್ ದಾಳಿ: ಅಲ್-ಅಕ್ಸಾ ಮಸೀದಿ ಸಮೀಪವೇ ಬಿದ್ದ ಕ್ಷಿಪಣಿ

ಜೆರುಸಲೇಂ: ಈದ್ ಉಲ್-ಫಿತರ್ ಹಬ್ಬದ ಸಂಭ್ರಮದ ನಡುವೆಯೇ ಇರಾನ್ ಉಡಾಯಿಸಿದ ಕ್ಷಿಪಣಿಯೊಂದು ಜೆರುಸಲೇಂನ ಪವಿತ್ರ ಅಲ್-ಅಕ್ಸಾ ಮಸೀದಿಯಿಂದ ಕೇವಲ ನೂರಾರು ಮೀಟರ್ ದೂರದಲ್ಲಿ ಬಂದು ಬಿದ್ದಿದೆ. ಭದ್ರತಾ ಕಾರಣಗಳಿಂದಾಗಿ ಕಳೆದ 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಳೆಯ ನಗರದ (Old City) ಪ್ರವೇಶವನ್ನು ನಿರ್ಬಂಧಿಸಲಾಗಿದ್ದರಿಂದ, ನೂರಾರು ಮುಸ್ಲಿಮರು ದ್ವಾರಗಳ ಹೊರಗಡೆಯೇ ಈದ್ ಪ್ರಾರ್ಥನೆ ಸಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಯಹೂದಿಗಳಿಗೆ ಅತ್ಯಂತ ಪವಿತ್ರವೆನಿಸಿದ ಸ್ಥಳಗಳ ಸಮೀಪವೇ ಇರಾನ್ ಕ್ಷಿಪಣಿ ಬಿದ್ದಿದೆ ಎಂದು ಇಸ್ರೇಲ್ ಶನಿವಾರ ಖಚಿತಪಡಿಸಿದೆ. “ಇದು ಇರಾನ್ ಆಡಳಿತದ ಅಸಲಿ ಮುಖ,” ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ ಟೀಕಿಸಿದೆ.

ಶುಕ್ರವಾರ ಸಂಭವಿಸಿದ ಈ ಕ್ಷಿಪಣಿ ಸ್ಫೋಟದಿಂದಾಗಿ ಇಸ್ರೇಲಿನ ಜೆರುಸಲೇಂನ ಹಳೆಯ ನಗರದ ಗುಡ್ಡಗಾಡು ಪ್ರದೇಶದಲ್ಲಿ ದೊಡ್ಡ ಹೊಂಡ ನಿರ್ಮಾಣವಾಗಿದ್ದು, ರಸ್ತೆಯುದ್ದಕ್ಕೂ ಅವಶೇಷಗಳು ಚೆಲ್ಲಾಪಿಲ್ಲಿಯಾಗಿವೆ.
“ಇರಾನ್ ಆಡಳಿತವು ನಾಗರಿಕ ಪ್ರದೇಶ ಅಥವಾ ಪವಿತ್ರ ತಾಣಗಳನ್ನು ನೋಡದೆ ವಿವೇಚನಾರಹಿತವಾಗಿ ದಾಳಿ ನಡೆಸುತ್ತಿದೆ. ಇಸ್ರೇಲ್ ಅನ್ನು ನಾಶಪಡಿಸುವುದೇ ಅವರ ಗುರಿ ಎಂಬುದು ಇದರಿಂದ ಸಾಬೀತಾಗಿದೆ,” ಎಂದು ಇಸ್ರೇಲ್ ಸೇನೆ ಹೇಳಿಕೆ ನೀಡಿದೆ.
ಇರಾನ್ ಜೊತೆಗಿನ ಯುದ್ಧದ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳನ್ನು ನೀಡಿ ಇಸ್ರೇಲ್ ಅಲ್-ಅಕ್ಸಾ ಮಸೀದಿಯ ಪ್ರವೇಶವನ್ನು ಬಂದ್ ಮಾಡಿತ್ತು. ಇದರಿಂದಾಗಿ ಭಕ್ತರು ರಸ್ತೆಯಲ್ಲೇ ಪ್ರಾರ್ಥನೆ ಮಾಡಬೇಕಾಯಿತು. “ಇಂದು ಅಲ್-ಅಕ್ಸಾ ಮಸೀದಿಯನ್ನು ನಮ್ಮಿಂದ ಕಸಿದುಕೊಳ್ಳಲಾಗಿದೆ. ಇದು ಅತ್ಯಂತ ನೋವಿನ ರಂಜಾನ್,” ಎಂದು ಸ್ಥಳೀಯ ನಿವಾಸಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

60 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲು:
ಫೆಬ್ರವರಿ 28 ರಿಂದ ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದಾಗಿನಿಂದ, ಜೆರುಸಲೇಂನ ಮೂರು ಪ್ರಮುಖ ಧಾರ್ಮಿಕ ತಾಣಗಳಾದ ಅಲ್-ಅಕ್ಸಾ ಮಸೀದಿ (ಮುಸ್ಲಿಂ), ಚರ್ಚ್ ಆಫ್ ದಿ ಹೋಲಿ ಸೆಪಲ್ಚರ್ (ಕ್ರಿಶ್ಚಿಯನ್) ಮತ್ತು ವೆಸ್ಟರ್ನ್ ವಾಲ್ (ಯಹೂದಿ) ಅನ್ನು ಮುಚ್ಚಲಾಗಿದೆ. 1967ರ ನಂತರ ಇದೇ ಮೊದಲ ಬಾರಿಗೆ ರಂಜಾನ್‌ನ ಕೊನೆಯ ಹತ್ತು ದಿನಗಳು ಮತ್ತು ಈದ್ ದಿನದಂದು ಅಲ್-ಅಕ್ಸಾವನ್ನು ಮುಚ್ಚಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement