ನವದೆಹಲಿ: ಭಾರತೀಯ ರಾಜಕೀಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಚುನಾಯಿತ ಸರ್ಕಾರವೊಂದರ ಮುಖ್ಯಸ್ಥರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.
ಈ ಮೂಲಕ ಪ್ರಧಾನಿ ಮೋದಿ ಸಿಕ್ಕಿಂ ಮುಖ್ಯಮಂತ್ರಿಯಾಗಿ 8,930 ದಿನಗಳ ಕಾಲ ಅಧಿಕಾರದಲ್ಲಿದ್ದ ಪವನಕುಮಾರ ಚಾಮ್ಲಿಂಗ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ದೇಶದ ಪ್ರಧಾನಮಂತ್ರಿಯಾಗಿ ಅವರ ಒಟ್ಟು ಅಧಿಕಾರಾವಧಿ ಈಗ 8,931 ದಿನಗಳನ್ನು ಪೂರೈಸಿದ್ದು, ಅವರು ನಾಯಕತ್ವದ ಪಾತ್ರದಲ್ಲಿ 25ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ದಶಕಗಳ ಕಾಲ ಸತತವಾಗಿ ಸಾರ್ವಜನಿಕ ಸೇವೆ ಮತ್ತು ಉನ್ನತ ಮಟ್ಟದ ರಾಜಕೀಯ ನಾಯಕತ್ವವನ್ನು ಪ್ರತಿಬಿಂಬಿಸುವ ಈ ಸಾಧನೆಯನ್ನು ಅಪರೂಪದ ಮತ್ತು ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.
ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಪ್ರಧಾನಿ ಮೋದಿ ಅವರು ಹಲವು ಗಮನಾರ್ಹ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರು ಗುಜರಾತ್‌ನಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿಯಾಗಿದ್ದಾರೆ ಹಾಗೂ ಸುದೀರ್ಘ ಅನುಭವ ಹೊಂದಿರುವ ಸ್ವಾತಂತ್ರ್ಯಾನಂತರ ಜನಿಸಿದ ಭಾರತದ ಮೊದಲ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ,
2014, 2019 ಮತ್ತು 2024ರ ಲೋಕಸಭಾ ಚುನಾವಣೆಗಳಲ್ಲಿ ಸತತ ಮೂರು ಬಾರಿ ಜಯಗಳಿಸುವ ಮೂಲಕ ತಮ್ಮ ರಾಜಕೀಯ ಚಾಣಾಕ್ಷತೆಯನ್ನು ಸಾಬೀತುಪಡಿಸಿದ್ದಾರೆ.
ನರೇಂದ್ರ ಮೋದಿ ಅವರು ಅಕ್ಟೋಬರ್ 7, 2001 ರಂದು ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು ಮತ್ತು ಮೇ 21, 2014 ರವರೆಗೆ ಆ ಹುದ್ದೆಯಲ್ಲಿದ್ದರು. ರಾಷ್ಟ್ರೀಯ ರಾಜಕಾರಣಕ್ಕೆ ಪ್ರವೇಶಿಸುವ ಮೊದಲು ಅವರು 13 ವರ್ಷಗಳಿಗೂ ಹೆಚ್ಚು ಕಾಲ ಗುಜರಾತ್ ಮುಖ್ಯಮಂತ್ರಿಯಾಗಿದ್ದರು.
ಮೇ 26, 2014 ರಂದು ಭಾರತದ 14ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅವರು, ಲೋಕಸಭೆಯಲ್ಲಿ ಪೂರ್ಣ ಬಹುಮತ ಪಡೆದ ಮೊದಲ ಕಾಂಗ್ರೆಸ್ಸೇತರ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಂತರ ಎರಡು ಪೂರ್ಣ ಅವಧಿಯನ್ನು ಪೂರೈಸಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಇತಿಹಾಸ ಸೃಷ್ಟಿಸಿದರು.
ಡಿಜಿಟಲ್ ಲೋಕದಲ್ಲೂ ಹವಾ
ಈ ರಾಜಕೀಯ ಮೈಲಿಗಲ್ಲಿನ ಜೊತೆಗೆ, ಪ್ರಧಾನಿ ಮೋದಿ ಅವರು ಈ ವರ್ಷ ಡಿಜಿಟಲ್ ಕ್ಷೇತ್ರದಲ್ಲಿ ಹಲವಾರು ಪ್ರಮುಖ ಸಾಧನೆಗಳನ್ನು ಮಾಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಅವರ ಯೂಟ್ಯೂಬ್ ಚಾನೆಲ್ 30 ಮಿಲಿಯನ್ ಚಂದಾದಾರರನ್ನು (Subscribers) ತಲುಪಿದ್ದು, ಜಾಗತಿಕವಾಗಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಾಯಕರಾಗಿ ಹೊರಹೊಮ್ಮಿದ್ದಾರೆ.
ಫೆಬ್ರವರಿಯಲ್ಲಿ ಮೋದಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಫಾಲೋವರ್ಸ್‌ಗಳನ್ನು ದಾಟಿದ ಮೊದಲ ವಿಶ್ವ ನಾಯಕ ಎನಿಸಿಕೊಂಡರು. ಪ್ರಸ್ತುತ ಅವರು 101 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.
ಎಕ್ಸ್ ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ ಪ್ರಧಾನಿ ಮೋದಿ ಅವರು 106.4 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ