ತೆಹ್ರಾನ್: ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಹಣದುಬ್ಬರದಿಂದ ಕಂಗಾಲಾಗಿರುವ ಇರಾನ್ ಸರ್ಕಾರ, ಇದೀಗ ದೇಶದ ಇತಿಹಾಸದಲ್ಲೇ ಅತ್ಯಂತ ಗರಿಷ್ಠ ಮುಖಬೆಲೆಯ 10 ಮಿಲಿಯನ್ (1 ಕೋಟಿ) ರಿಯಾಲ್ ನೋಟನ್ನು ಚಲಾವಣೆಗೆ ತಂದಿದೆ. ಆದರೆ, ಆಶ್ಚರ್ಯದ ಸಂಗತಿಯೆಂದರೆ ಈ ಬೃಹತ್ ಮೊತ್ತದ ನೋಟಿನ ಅಂತಾರಾಷ್ಟ್ರೀಯ ಮೌಲ್ಯ ಕೇವಲ ಅಂದಾಜು 650 ರೂಪಾಯಿ (7 ಡಾಲರ್) ಮಾತ್ರ…! ಇದು ಇರಾನ್ ಕರೆನ್ಸಿಯ ಮೌಲ್ಯ ಎಷ್ಟು ಕೆಳಮಟ್ಟಕ್ಕೆ ಕುಸಿದಿದೆ ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ.
ಇರಾನ್‌ನ ರಿಯಾಲ್ ಕರೆನ್ಸಿ ಜಾಗತಿಕ ಮಾರುಕಟ್ಟೆಯಲ್ಲಿ ನಿರಂತರವಾಗಿ ಕುಸಿಯುತ್ತಿದೆ. ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಸಂಘರ್ಷ ಹಾಗೂ ನಿರಂತರ ಆರ್ಥಿಕ ನಿರ್ಬಂಧಗಳು ದೇಶದ ಆರ್ಥಿಕ ಬೆನ್ನೆಲುಬನ್ನು ಮುರಿದಿವೆ. ಗಗನಕ್ಕೇರುತ್ತಿರುವ ಬೆಲೆ ಏರಿಕೆಯಿಂದಾಗಿ, ಸಾಮಾನ್ಯ ಜನರು ಸಣ್ಣಪುಟ್ಟ ವಸ್ತುಗಳನ್ನು ಖರೀದಿಸಲು ಕೂಡ ಕಂತೆ ಕಂತೆ ನೋಟುಗಳನ್ನು ಹಿಡಿದುಕೊಂಡು ಹೋಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಇದನ್ನು ತಗ್ಗಿಸಲು ಮತ್ತು ನಗದು ಚಲಾವಣೆಯನ್ನು ಸುಲಭಗೊಳಿಸಲು ಸರ್ಕಾರ ಈ ದೊಡ್ಡ ಮೊತ್ತದ ನೋಟನ್ನು ಬಿಡುಗಡೆ ಮಾಡಿದೆ.
ನಗದು ಹಣ ಪಡೆಯಲು ಮುಗಿಬೀಳುವ ಜನರು
ದೇಶದಲ್ಲಿ ಆರ್ಥಿಕ ಅನಿಶ್ಚಿತತೆ ಮನೆಮಾಡಿರುವುದರಿಂದ ಜನರು ಡಿಜಿಟಲ್ ಪಾವತಿ ಅಥವಾ ಬ್ಯಾಂಕ್ ಠೇವಣಿಗಳಿಗಿಂತ ನಗದು (Physical Cash) ನೋಟುಗಳನ್ನೇ ಹೊಂದಲು ಬಯಸುತ್ತಿದ್ದಾರೆ.
ಯುದ್ಧ ಅಥವಾ ಸಂಘರ್ಷದ ಸಂದರ್ಭದಲ್ಲಿ ಬ್ಯಾಂಕಿಂಗ್ ಸರ್ವರ್‌ಗಳು ಸ್ಥಗಿತಗೊಳ್ಳಬಹುದು ಅಥವಾ ಡಿಜಿಟಲ್ ಪಾವತಿ ನಿಲ್ಲಬಹುದು ಎಂಬ ಆತಂಕ ಜನರಲ್ಲಿ ಮೂಡಿದೆ. ಈ ಕಾರಣಕ್ಕೆ ನೋಟುಗಳನ್ನೇ ಇಟ್ಟುಕೊಳ್ಳಲು ಬಯಸುತ್ತಿದ್ದಾರೆ.
ನಗದು ವಿಥ್‌ಡ್ರಾ (ತೆಗೆಯುವುದು) ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಎಟಿಎಂ ಮತ್ತು ಬ್ಯಾಂಕುಗಳ ಮುಂದೆ ಜನಸಾಮಾನ್ಯರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವಂತಾಗಿದೆ.
ಹಣದುಬ್ಬರದ ಕರಾಳ ರೂಪ
ಕಾಗದದ ಮೇಲೆ 10 ಮಿಲಿಯನ್ ರಿಯಾಲ್ ಎಂಬ ಅಂಕಿ ದೊಡ್ಡದಾಗಿ ಕಂಡರೂ, ಮಾರುಕಟ್ಟೆಯಲ್ಲಿ ಅದರ ಖರೀದಿ ಸಾಮರ್ಥ್ಯ ಮಾತ್ರ ಶೂನ್ಯಕ್ಕೆ ಹತ್ತಿರವಾಗುತ್ತಿದೆ. ಹಣದುಬ್ಬರವು ಸಾಮಾನ್ಯ ಜನರ ಉಳಿತಾಯವನ್ನು ನುಂಗಿ ಹಾಕುತ್ತಿದೆ. ಮೂಲಭೂತ ಅವಶ್ಯಕತೆಗಳಾದ ಆಹಾರ ಮತ್ತು ಇಂಧನದ ಬೆಲೆಗಳು ದಿನದಿಂದ ದಿನಕ್ಕೆ ಏರುತ್ತಿರುವುದರಿಂದ, ಜನರ ಜೀವನಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ.
ಇರಾನ್ ಕಳೆದ ಹಲವು ವರ್ಷಗಳಿಂದ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಎದುರಿಸುತ್ತಿದೆ. ಜಾಗತಿಕ ಹಣಕಾಸು ವ್ಯವಸ್ಥೆಯಿಂದ ಇರಾನ್ ಅನ್ನು ಹೊರಗಿಟ್ಟಿರುವುದು ಮತ್ತು ದೇಶೀಯ ಆರ್ಥಿಕ ನೀತಿಗಳ ವೈಫಲ್ಯ ಈ ಬಿಕ್ಕಟ್ಟಿಗೆ ಪ್ರಮುಖ ಕಾರಣ. ಇತ್ತೀಚಿನ ಪ್ರಾದೇಶಿಕ ಸಂಘರ್ಷಗಳು ಉರಿಯುವ ಗಾಯಕ್ಕೆ ಉಪ್ಪು ಸವರಿದಂತಾಗಿದ್ದು, ಅದರ ರಿಯಾಲ್ ಕರೆನ್ಸಿಯನ್ನು ಮತ್ತಷ್ಟು ದುರ್ಬಲಗೊಳಿಸಿದೆ.
ಆರ್ಥಿಕ ತಜ್ಞರ ಪ್ರಕಾರ, ಇಷ್ಟು ದೊಡ್ಡ ಮೊತ್ತದ ನೋಟುಗಳನ್ನು ಬಿಡುಗಡೆ ಮಾಡುವುದು ದೇಶ ಎದುರಿಸುತ್ತಿರುವ ‘ಆರ್ಥಿಕ ದುಸ್ಥಿತಿಯ ಸಂಕೇತ’. ಇದು ತಾತ್ಕಾಲಿಕವಾಗಿ ವ್ಯವಹಾರಗಳಿಗೆ ಅನುಕೂಲ ಮಾಡಿಕೊಟ್ಟರೂ, ದೇಶದ ಆರ್ಥಿಕ ಸ್ಥಿರತೆಗೆ ಇರುವ ಸವಾಲುಗಳನ್ನು ಮತ್ತು ಹಣದುಬ್ಬರದ ತೀವ್ರತೆಯನ್ನು ಜಗತ್ತಿಗೆ ಸಾರುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ