ತಮಿಳುನಾಡು ವಿಧಾನಸಭೆ ಚುನಾವಣೆ: ಎಐಎಡಿಎಂಕೆ-ಬಿಜೆಪಿ, ಇತರ ಪಕ್ಷಗಳ ಸೀಟು ಹಂಚಿಕೆ ಅಂತಿಮ

ಚೆನ್ನೈ: ತಮಿಳುನಾಡಿನ 234 ಸದಸ್ಯ ಬಲದ ವಿಧಾನಸಭೆ ಚುನಾವಣೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (NDA) ಸೋಮವಾರ ತನ್ನ ಸೀಟು ಹಂಚಿಕೆಯನ್ನು ಅಧಿಕೃತವಾಗಿ ಅಂತಿಮಗೊಳಿಸಿದೆ. ಚೆನ್ನೈನಲ್ಲಿರುವ ಎಐಎಡಿಎಂಕೆ (AIADMK) ಕೇಂದ್ರ ಕಚೇರಿಯಲ್ಲಿ ನಡೆದ ಪ್ರಮುಖ ಸಭೆಯಲ್ಲಿ ಸೀಟು ಹಂಚಿಕೆ ಒಪ್ಪಂದಕ್ಕೆ ಬರಲಾಗಿದೆ.
ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಲ್ಲಿ ಎಐಎಡಿಎಂಕೆ (AIADMK) 170ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಪಡೆದಿರುವ ಬಿಜೆಪಿಗೆ 27 ಕ್ಷೇತ್ರಗಳನ್ನು ನೀಡಲಾಗಿದೆ. (2021ರಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು).
ಪಿಎಂಕೆ (PMK): ಅನ್ಬುಮಣಿ ರಾಮದಾಸ್ ನೇತೃತ್ವದ ಪಕ್ಷಕ್ಕೆ 18 ಸ್ಥಾನಗಳು, ಟಿಟಿವಿ ದಿನಕರನ್ ನೇತೃತ್ವದ ಎಎಂಎಂಕೆ(AMMK) ಪಕ್ಷಕ್ಕೆ 11 ಸ್ಥಾನಗಳನ್ನು ನೀಡಲಾಗಿದೆ. ಜಿ.ಕೆ. ವಾಸನ್ ಅವರ ತಮಿಳು ಮಾನಿಲ ಕಾಂಗ್ರೆಸ್, ಐಜೆಕೆ, ಪುರಚ್ಚಿ ಭಾರತಂ ಕಚ್ಚಿ ಸೇರಿದಂತೆ ಉಳಿದ ಸಣ್ಣ ಪಕ್ಷಗಳ ಸ್ಥಾನಗಳ ಕುರಿತು ಶೀಘ್ರದಲ್ಲೇ ಸ್ಪಷ್ಟ ಚಿತ್ರಣ ಸಿಗಲಿದ್ದು, ಈ ಪಕ್ಷಗಳು ಎಐಎಡಿಎಂಕೆ ಅಥವಾ ಬಿಜೆಪಿ ಚಿಹ್ನೆಯಡಿಯಲ್ಲೇ ಸ್ಪರ್ಧಿಸುವ ಸಾಧ್ಯತೆಯಿದೆ.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಬಿಜೆಪಿ ಚುನಾವಣಾ ಉಸ್ತುವಾರಿ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಸಮ್ಮುಖದಲ್ಲಿ ಸೀಟು ಹಂಚಿಕೆ ಒಪ್ಪಂದಕ್ಕೆ ಬರಲಾಗಿದೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಹಾಗೂ ಮೈತ್ರಿಕೂಟದ ಇತರ ಪ್ರಮುಖ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಪಿಯೂಷ್ ಗೋಯಲ್, “ನಾವೆಲ್ಲರೂ ಒಂದು ಕುಟುಂಬದಂತೆ ಇದ್ದೇವೆ. ನಮಗೆ ನೀಡಲಾದ 27 ಸ್ಥಾನಗಳ ಬಗ್ಗೆ ತೃಪ್ತಿಯಿದೆ. ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಡಿಸಿಎಂ ಉದಯನಿಧಿ ಸ್ಟಾಲಿನ್ ಆಡಳಿತದಿಂದ ಜನರು ಬೇಸತ್ತಿದ್ದಾರೆ. ರಾಜ್ಯದ ಸಂಸ್ಕೃತಿಗೆ ಧಕ್ಕೆ ತಂದಿರುವ ಡಿಎಂಕೆ ವಿರುದ್ಧ ನಾವು ಜಯಭೇರಿ ಬಾರಿಸಿ ಸರ್ಕಾರ ರಚಿಸುತ್ತೇವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಮುಖ ಸುದ್ದಿ :-   ಕ್ರಿಕೆಟ್ ದಂತಕತೆ ಸರ್ ಗ್ಯಾರಿ ಸೋಬರ್ಸ್ ನಿಧನ

ಕಳೆದ ಬಾರಿಯ (2021) ಬಲಾಬಲ:
ಎಐಎಡಿಎಂ ಕಳೆದ ಬಾರಿ 179 ಸ್ಥಾನಗಳಲ್ಲಿ ಸ್ಪರ್ಧಿಸಿ 66ರಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಸ್ವಂತ ಬಲದ ಮೇಲೆ ಸ್ಪಷ್ಟ ಬಹುಮತ ಪಡೆಯುವ ಉದ್ದೇಶದಿಂದ ಹೆಚ್ಚಿನ ಸ್ಥಾನಗಳನ್ನು ತನ್ನಲ್ಲೇ ಉಳಿಸಿಕೊಂಡಿದೆ. ಬಿಜೆಪಿ 2021ರಲ್ಲಿ 20 ಸ್ಥಾನಗಳಲ್ಲಿ ಸ್ಪರ್ಧಿಸಿ ಕೊಯಮತ್ತೂರು ದಕ್ಷಿಣ, ತಿರುನಲ್ವೇಲಿ, ನಾಗರ್‌ಕೋಯಿಲ್ ಮತ್ತು ಮೊದಕುರಿಚಿಯಲ್ಲಿ ಗೆದ್ದು 4 ಸ್ಥಾನಗಳನ್ನು ಗಳಿಸಿತ್ತು. ಈ ಬಾರಿ 30 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದರೂ 27 ಸ್ಥಾನಗಳಿಗೆ ಒಪ್ಪಿಗೆ ಸೂಚಿಸಿದೆ.
ತಮಿಳುನಾಡಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿ ಫಲಿತಾಂಶದ ಜೊತೆಗೆ ತಮಿಳುನಾಡು ಚುನಾವಣಾ ಫಲಿತಾಂಶವು ಮೇ 4 ರಂದು ಪ್ರಕಟವಾಗಲಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement