ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಕಚೇರಿ ಖಾಲಿ ಮಾಡುವಂತೆ ಕಾಂಗ್ರೆಸ್ಸಿಗೆ ಸರ್ಕಾರದ ಸೂಚನೆ

ನವದೆಹಲಿ: ಕಳೆದ 48 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ದೆಹಲಿಯ ’24, ಅಕ್ಬರ್ ರಸ್ತೆ’ ಬಂಗಲೆಯನ್ನು ಶನಿವಾರದೊಳಗೆ ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂದು ವರದಿಗಳು ತಿಳಿಸಿವೆ. ಈ ಬೆಳವಣಿಗೆಯು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ.
ಕಳೆದ ವರ್ಷವಷ್ಟೇ ಕಾಂಗ್ರೆಸ್ ಪಕ್ಷವು ಕೋಟ್ಲಾ ಮಾರ್ಗದಲ್ಲಿರುವ ತನ್ನ ನೂತನ ಪ್ರಧಾನ ಕಚೇರಿ  ‘ಇಂದಿರಾ ಭವನ’ವನ್ನು ಉದ್ಘಾಟಿಸಿತ್ತು. ಆದರೂ, ಹಳೆಯ ಅಕ್ಬರ್ ರಸ್ತೆ ಕಚೇರಿಯಿಂದ ಪಕ್ಷದ ಚಟುವಟಿಕೆಗಳು ಇನ್ನೂ ಮುಂದುವರಿಯುತ್ತಿವೆ. ಇದರ ಜೊತೆಗೆ ರೈಸಿನಾ ರಸ್ತೆಯಲ್ಲಿರುವ ಭಾರತೀಯ ಯುವ ಕಾಂಗ್ರೆಸ್ (IYC) ಕಚೇರಿಯನ್ನೂ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ವಿಚಾರವಾಗಿ ಕಾಂಗ್ರೆಸ್ ಕಾನೂನು ಹೋರಾಟ ನಡೆಸಲು ಚಿಂತನೆ ನಡೆಸುತ್ತಿದೆ.
ಅಕ್ಬರ್ ರಸ್ತೆಯ ಈ ಬಂಗಲೆಗೂ ಕಾಂಗ್ರೆಸ್ಸಿಗೂ ಭಾವನಾತ್ಮಕ ಸಂಬಂಧವಿದೆ. 1977ರ ಚುನಾವಣಾ ಸೋಲಿನ ನಂತರ ಕಾಂಗ್ರೆಸ್ ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಚೇತರಿಸಿಕೊಂಡಿದ್ದು ಇದೇ ಕಚೇರಿಯಿಂದ. ರಾಜೀವ್ ಗಾಂಧಿ, ಪಿ.ವಿ. ನರಸಿಂಹ ರಾವ್ ಮತ್ತು ಡಾ. ಮನ್ಮೋಹನ ಸಿಂಗ್ ಅವರ ಪ್ರಧಾನಿ ಅವಧಿಯಲ್ಲಿಯೂ ಇದು ಪಕ್ಷದ ಕೇಂದ್ರ ಕಚೇರಿಯಾಗಿತ್ತು.
“ನೂತನ ಕಚೇರಿ ಉದ್ಘಾಟನೆಯಾದರೂ, ಅಕ್ಬರ್ ರಸ್ತೆ ಕಚೇರಿಯೊಂದಿಗೆ ನಮ್ಮ ಭಾವನಾತ್ಮಕ ನಂಟು ಸದಾ ಇರಲಿದೆ” ಎಂದು ಸೋನಿಯಾ ಗಾಂಧಿ ಅವರು ಈ ಹಿಂದೆ ಹೇಳಿದ್ದರು. ಈಗ ಸರ್ಕಾರ ನೀಡಿದ ಗಡುವಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement