ಹಾರ್ಮುಜ್ ಬಳಿ ದಾಳಿ, ಖಾರ್ಗ್ ವಶಕ್ಕೆ ಯೋಜನೆ: ಇರಾನ್‌ ವಿರುದ್ಧ ಭೂ ಕಾರ್ಯಾಚರಣೆಗೆ ಅಮೆರಿಕ ಭಾರೀ ಸಿದ್ಧತೆ

ವಾಷಿಂಗ್ಟನ್‌ : ಮಧ್ಯಪ್ರಾಚ್ಯದಲ್ಲಿ ಯುದ್ಧವು ಐದನೇ ವಾರಕ್ಕೆ ಕಾಲಿಡುತ್ತಿರುವ ಬೆನ್ನಲ್ಲೇ, ಇರಾನ್ ವಿರುದ್ಧ ವಾರಗಳ ಕಾಲ ನಡೆಯಬಹುದಾದ ಭೂಸೇನಾ ಕಾರ್ಯಾಚರಣೆಗೆ ಅಮೆರಿಕದ ರಕ್ಷಣಾ ಇಲಾಖೆ ‘ಪೆಂಟಗನ್’ ಭಾರಿ ಸಿದ್ಧತೆ ನಡೆಸುತ್ತಿದೆ ಎಂದು ‘ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.
ವರದಿ ಪ್ರಕಾರ, ಇರಾನ್‌ನ ಪ್ರಮುಖ ತೈಲ ಕೇಂದ್ರವಾದ ಖಾರ್ಗ್ ದ್ವೀಪ (Kharg Island) ಮತ್ತು ಹಾರ್ಮುಜ್ ಜಲಸಂಧಿಯ ಸಮೀಪದ ಕರಾವಳಿ ಪ್ರದೇಶಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಲಾಗಿದೆ.
ಅಮೆರಿಕದ ಉನ್ನತ ಅಧಿಕಾರಿಗಳ ಮಾಹಿತಿಯ ಪ್ರಕಾರ, ಈ ಯೋಜನೆಯು ವಿಶೇಷ ಕಾರ್ಯಾಚರಣೆ ಪಡೆಗಳು (Special Ops) ಮತ್ತು ಸಾಂಪ್ರದಾಯಿಕ ಭೂ ಸೇನಾ ಪಡೆಗಳ ಮೂಲಕ ನಡೆಯುವ ದಾಳಿ ಮಾಡುವುದನ್ನು ಒಳಗೊಂಡಿದೆ.
ಖಾರ್ಗ್ ದ್ವೀಪದ ವಶಕ್ಕೆ ಮುಂದು
 ಇರಾನ್‌ನ ಶೇ. 90 ರಷ್ಟು ಕಚ್ಚಾ ತೈಲ ರಫ್ತು ಈ ದ್ವೀಪದ ಮೂಲಕವೇ ನಡೆಯುತ್ತದೆ. ಇದನ್ನು ವಶಪಡಿಸಿಕೊಳ್ಳುವ ಮೂಲಕ ಇರಾನ್ ಆಡಳಿತಕ್ಕೆ ಮುಖಭಂಗ ಉಂಟುಮಾಡುವುದು ಮತ್ತು ಮುಂದಿನ ಮಾತುಕತೆಗಳಲ್ಲಿ ಇದನ್ನು ಪ್ರಬಲ ‘ಬಾರ್ಗೇನಿಂಗ್ ಚಿಪ್’ ಆಗಿ ಬಳಸುವುದು ಅಮೆರಿಕದ ಉದ್ದೇಶವಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಮತ್ತು ಮಿಲಿಟರಿ ಹಡಗುಗಳನ್ನು ಟಾರ್ಗೆಟ್‌ ಮಾಡುವ ಇರಾನ್‌ನ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿ ನಾಶಪಡಿಸುವುದು ಈ ದಾಳಿಯ ಮುಖ್ಯ ಗುರಿಯಾಗಿದೆ.ಇದು ಇರಾನ್ ಮೇಲೆ ಪೂರ್ಣ ಪ್ರಮಾಣದ ಯುದ್ಧ ಅಥವಾ ಆಕ್ರಮಣವಾಗಿರುವುದಿಲ್ಲ, ಬದಲಿಗೆ ನಿರ್ದಿಷ್ಟ ಗುರಿಗಳ ಮೇಲೆ ನಡೆಸುವ ದಾಳಿಯಾಗಿರಲಿದೆ. ಆದರೆ, ಈ ಯೋಜನೆಗಳಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೂ ಅಂತಿಮ ಅನುಮೋದನೆ ನೀಡಿಲ್ಲ ಎಂದು ವರದಿ ತಿಳಿಸಿದೆ. ಪೆಂಟಗನ್ ಕೇವಲ ಆಯ್ಕೆಗಳನ್ನು ಸಿದ್ಧಪಡಿಸಿಟ್ಟಿದೆ ಅಷ್ಟೆ.
20 ವರ್ಷಗಳಲ್ಲೇ ಅತಿದೊಡ್ಡ ಸೇನಾ ಜಮಾವಣೆ
ಮಧ್ಯಪ್ರಾಚ್ಯದಲ್ಲಿ ಅಮೆರಿಕ ಕಳೆದ ಎರಡು ದಶಕಗಳಲ್ಲೇ ಅತಿದೊಡ್ಡ ಸೇನಾ ಬಲವನ್ನು ನಿಯೋಜಿಸಿದೆ. ಯುಎಸ್ಎಸ್ ಟ್ರಿಪೋಲಿ (USS Tripoli) ಎಂಬ ಜಪಾನ್ ಮೂಲದ ಈ ಬೃಹತ್ ಯುದ್ಧನೌಕೆಯು ಶುಕ್ರವಾರ ಮಧ್ಯಪ್ರಾಚ್ಯಕ್ಕೆ ತಲುಪಿದೆ. ಈ ನೌಕೆಯಲ್ಲಿ 3,500 ಮರೀನ್ ಸೈನಿಕರು, ಎಫ್-35 ಫೈಟರ್ ಜೆಟ್ಗಳು, ಸೀಹಾಕ್ ಹೆಲಿಕಾಪ್ಟರ್‌ಗಳು ಮತ್ತು ಆಸ್ಪ್ರೆ ವಿಮಾನಗಳಿವೆ.
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದಾಗಿನಿಂದ ಈ ಸಂಘರ್ಷ ಮುಂದುವರಿದಿದೆ.
ವರದಿಯ ಪ್ರಕಾರ, ಇರಾನ್‌ನ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದು ಸುಲಭ, ಆದರೆ ಅಲ್ಲಿ ಅಮೆರಿಕದ ಸೈನಿಕರನ್ನು ರಕ್ಷಿಸುವುದು ದೊಡ್ಡ ಸವಾಲಾಗಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು, “ಭೂಸೇನಾ ಪಡೆಗಳ ಅಗತ್ಯವಿಲ್ಲದೆಯೇ ನಾವು ನಮ್ಮ ಗುರಿಗಳನ್ನು ತಲುಪಬಲ್ಲೆವು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಟ್ರಂಪ್ ಅವರು ಇರಾನ್ ಜೊತೆಗಿನ ಮಾತುಕತೆಯಲ್ಲಿ ಪ್ರಗತಿಯಾಗಿದೆ ಎಂದು ಹೇಳಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಇರಾನ್ ಅಂತಹ ಯಾವುದೇ ಅಧಿಕೃತ ಮಾತುಕತೆಗಳನ್ನು ನಿರಾಕರಿಸಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement