ಪಾಟ್ನಾ: ಬಿಹಾರದ ಸುದೀರ್ಘ ಅವಧಿಯ ಮುಖ್ಯಮಂತ್ರಿ ನಿತೀಶಕುಮಾರ ಸೋಮವಾರ (ಮಾರ್ಚ್ 30) ತಮ್ಮ ಬಿಹಾರ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ತಿಂಗಳ ಆರಂಭದಲ್ಲಿ ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಮಾರ್ಚ್ 16 ರಂದು ನಿತೀಶಕುಮಾರ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ನಿಯಮದಂತೆ ಮಾರ್ಚ್ 30ರೊಳಗೆ ರಾಜ್ಯ ಶಾಸಕಾಂಗದ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಾಗಿದ್ದರಿಂದ ಸೋಮವಾರ ಇಬ್ಬರೂ ನಾಯಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಕೇವಲ ಒಂದು ವಾರದ ಹಿಂದಷ್ಟೇ ನಿತೀಶಕುಮಾರ ಅವರು ಜನತಾ ದಳ (ಯುನೈಟೆಡ್) ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ನಿತೀಶಕುಮಾರ ಅವರ ರಾಜೀನಾಮೆ ಪತ್ರವನ್ನು ವಿಧಾನ ಪರಿಷತ್ ಸದಸ್ಯ ಸಂಜಯ ಗಾಂಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ವಿಜಯಕುಮಾರ ಚೌಧರಿ ಅವರು ವಿಧಾನ ಪರಿಷತ್ ಸಭಾಪತಿ ಅವಧೇಶ ನಾರಾಯಣ್ ಸಿಂಗ್ ಅವರಿಗೆ ಹಸ್ತಾಂತರಿಸಿದರು. ಸಭಾಪತಿ ಅವಧೇಶ ನಾರಾಯಣ ಸಿಂಗ್ ಅವರು ರಾಜೀನಾಮೆಯನ್ನು ಅಂಗೀಕರಿಸಿದರು.
ಮೈತ್ರಿ ರಾಜಕಾರಣದ ಚತುರ
ನಿತೀಶಕುಮಾರ ಅವರ ರಾಜಕೀಯ ಜೀವನವು ಮೈತ್ರಿ ರಾಜಕಾರಣದ ಒಂದು ಅದ್ಭುತ ಪಯಣವಾಗಿದೆ. 1985 ರಲ್ಲಿ ಶಾಸಕರಾಗಿ ಆರಂಭವಾದ ಅವರ ವೃತ್ತಿಜೀವನ, ನಂತರ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ, 2005 ರಲ್ಲಿ ಮೊದಲ ಬಾರಿಗೆ ಎನ್ಡಿಎ ಪರವಾಗಿ ಬಿಹಾರದ ಮುಖ್ಯಮಂತ್ರಿ ಆಗುವವರೆಗೆ ಬೆಳೆಯಿತು.
2013 ರಿಂದ ಈಚೆಗೆ ಅವರು ಬಿಜೆಪಿ ಮತ್ತು ಮಹಾಘಟಬಂಧನ್ (ಆರ್ ಜೆ ಡಿ ಮತ್ತು ಕಾಂಗ್ರೆಸ್ ಮೈತ್ರಿ) ನಡುವೆ ಹಲವು ಬಾರಿ ಮೈತ್ರಿ ಬದಲಿಸಿದರೂ ತಮ್ಮ ಪ್ರಭಾವವನ್ನು ಉಳಿಸಿಕೊಂಡಿದ್ದಾರೆ. 2025 ರ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಅವರು, ದಾಖಲೆಯ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಭಾರತದ ರಾಜಕೀಯ ಇತಿಹಾಸದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ