ಅಮೆರಿಕ ದಾಳಿಯಲ್ಲಿ ಇರಾನಿನ ಅತಿ ಎತ್ತರದ ಸೇತುವೆ ಧ್ವಂಸ: ‘ಇನ್ನಷ್ಟು ದಾಳಿ’ ಎಂದು ಟ್ರಂಪ್ ಎಚ್ಚರಿಕೆ

ಇರಾನ್ ಅನ್ನು ಬಾಂಬ್ ದಾಳಿಯ ಮೂಲಕ “ಮತ್ತೆ ಶಿಲಾಯುಗಕ್ಕೆ” (Stone Age) ದೂಡುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ ಬೆನ್ನಲ್ಲೇ, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನಿನ ಅತಿ ಎತ್ತರದ ಸೇತುವೆ ಭಾಗಶಃ ಧ್ವಂಸಗೊಂಡಿದೆ. ಈ ದಾಳಿಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇರಾನ್ ರಾಜಧಾನಿ ಟೆಹ್ರಾನ್ ಮತ್ತು ಪಶ್ಚಿಮದ ನಗರವಾದ ಕರಾಜ್ ಅನ್ನು ಸಂಪರ್ಕಿಸಲು ನಿರ್ಮಿಸಲಾಗುತ್ತಿದ್ದ ಈ ಸೇತುವೆಯು 136 ಮೀಟರ್ ಎತ್ತರವಿದೆ. ಇದನ್ನು ಮಧ್ಯಪ್ರಾಚ್ಯದ ಎಂಜಿನಿಯರಿಂಗ್ ಅದ್ಭುತ ಎಂದು ಪರಿಗಣಿಸಲಾಗಿತ್ತು.

ಇರಾನ್‌ನ ಸರ್ಕಾರಿ ಸ್ವಾಮ್ಯದ ಟಿವಿ ವರದಿಯ ಪ್ರಕಾರ, “ಅಮೆರಿಕ-ಜೊಯನಿಸ್ಟ್ (ಇಸ್ರೇಲ್) ಶತ್ರುಗಳು ಕರಾಜ್‌ನಲ್ಲಿರುವ B1 ಸೇತುವೆಯ ಮೇಲೆ ದಾಳಿ ನಡೆಸಿದ್ದಾರೆ.” ಮೊದಲ ದಾಳಿಯಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದರು. ನಂತರ ಗಾಯಾಳುಗಳ ರಕ್ಷಣೆಗೆ ತುರ್ತು ತಂಡಗಳು ಧಾವಿಸಿದಾಗ ಎರಡನೇ ಬಾರಿ ದಾಳಿ ನಡೆಸಲಾಯಿತು ಎಂದು ವರದಿಯಾಗಿದೆ.
ದಾಳಿಯ ಸ್ಥಳದಿಂದ ದಟ್ಟವಾದ ಹೊಗೆ ಏಳುತ್ತಿರುವುದು ಮತ್ತು ಸೇತುವೆ ಕುಸಿಯುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
ದಾಳಿಯ ದೃಶ್ಯಗಳನ್ನು ತಮ್ಮ ‘ಟ್ರುತ್ ಸೋಶಿಯಲ್’ (Truth Social) ಖಾತೆಯಲ್ಲಿ ಹಂಚಿಕೊಂಡಿರುವ ಟ್ರಂಪ್, “ಇರಾನ್‌ನ ಅತಿದೊಡ್ಡ ಸೇತುವೆ ನೆಲಸಮವಾಗಿದೆ, ಇದು ಇನ್ನು ಮುಂದೆ ಎಂದಿಗೂ ಬಳಕೆಗೆ ಬರುವುದಿಲ್ಲ – ಮುಂದೆ ಇನ್ನೂ ದೊಡ್ಡದು ಬರಲಿದೆ!” ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಪರಿಸ್ಥಿತಿ ಕೈಮೀರುವ ಮೊದಲೇ ಇರಾನ್ ಒಪ್ಪಂದಕ್ಕೆ ಬರಬೇಕು ಎಂದು ಅವರು ಎಚ್ಚರಿಸಿದ್ದಾರೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

ಟ್ರಂಪ್‌ ಘೋಷಣೆ:
ಇದಕ್ಕೂ ಮೊದಲು ಅಮೆರಕವನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, “ಅಮೆರಿಕದ ಮಿಲಿಟರಿ ಕ್ರಮವು ಇರಾನ್‌ನ ಸೇನಾ ಶಕ್ತಿಯನ್ನು ನಾಶಪಡಿಸಿದೆ ಮತ್ತು ಶೀಘ್ರದಲ್ಲೇ ಈ ಕೆಲಸವನ್ನು ಪೂರ್ಣಗೊಳಿಸಲಾಗುವುದು” ಎಂದು ಅವರು ಹೇಳಿದ್ದಾರೆ.
ಮುಂದಿನ 2-3 ವಾರಗಳ ಕಾಲ ಇರಾನ್ ಮೇಲೆ ಅಮೆರಿಕ ಪಡೆಗಳು ಅತ್ಯಂತ ಕಠಿಣವಾಗಿ ದಾಳಿ ಮಾಡಲಿವೆ ಎಂದು ತಿಳಿಸಿದ ಅವರು, ಇರಾನ್‌ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡುವುದಾಗಿ ಪುನರುಚ್ಚರಿಸಿದ್ದಾರೆ. “ನಮ್ಮ ಶತ್ರುಗಳು ಸೋಲುತ್ತಿದ್ದಾರೆ ಮತ್ತು ಅಮೆರಿಕ ಹಿಂದೆಂದಿಗಿಂತಲೂ ದೊಡ್ಡ ಮಟ್ಟದಲ್ಲಿ ಜಯ ಸಾಧಿಸುತ್ತಿದೆ” ಎಂದು ಟ್ರಂಪ್ ಗುಡುಗಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement