ದೇಶದಲ್ಲಿ ಎಲ್‌ಪಿಜಿ ಕೊರತೆ ಇಲ್ಲ, ಆದ್ರೆ ಸೃಷ್ಟಿಲಾಗುತ್ತಿದೆ : ಕಾಂಗ್ರೆಸ್‌ ನಿಲುವಿಗೆ ವಿರುದ್ಧದ ಹೇಳಿಕೆ ನೀಡಿದ ಹಿರಿಯ ನಾಯಕ ಕಮಲನಾಥ !

ಛಿಂದ್ವಾರ/ ನವದೆಹಲಿ : ದೇಶದಲ್ಲಿ ಎಲ್‌ಪಿಜಿ ಮತ್ತು ಅನಿಲ ಕೊರತೆಯ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ನಡುವೆಯೇ ಭಿನ್ನಾಭಿಪ್ರಾಯಗಳು ಮೂಡಿವೆ. ಒಂದೆಡೆ ಹಿರಿಯ ನಾಯಕ ಕಮಲನಾಥ ಅವರು ದೇಶದಲ್ಲಿ ಎಲ್‌ಪಿಜಿ ಮತ್ತು ಅನಿಲ ಕೊರತೆಯ ವರದಿಗಳನ್ನು ತಳ್ಳಿಹಾಕಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಸಂಸದರು ಸಂಸತ್ತಿನಲ್ಲಿ ಈ ವಿಷಯವಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕಮಲನಾಥ ಗುರುವಾರ ಛಿಂದ್ವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾಸ್ ಮತ್ತು ಎಲ್‌ಪಿಜಿ ಕೊರತೆಯ ವರದಿಗಳನ್ನು ತಳ್ಳಿಹಾಕಿದ್ದಾರೆ. “ದೇಶದಲ್ಲಿ ಅಂತಹ ಯಾವುದೇ ಕೊರತೆಯಿಲ್ಲ. ಕೊರತೆಯಿದೆ ಎಂಬ ವಾತಾವರಣವನ್ನು ಅನಗತ್ಯವಾಗಿ ಸೃಷ್ಟಿಸಲಾಗುತ್ತಿದೆ,” ಎಂದು ಅವರು ಹೇಳಿದ್ದಾರೆ.
ಅವರ ಈ ಹೇಳಿಕೆಯು ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತೈಲ ಹಾಗೂ ಎಲ್‌ಪಿಜಿ ಪೂರೈಕೆ ವ್ಯತ್ಯಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಪಕ್ಷದ ಅಧಿಕೃತ ನಿಲುವಿಗೆ ವಿರುದ್ಧವಾಗಿರುವುದು ಕುತೂಹಲ ಮೂಡಿಸಿದೆ.

ತೆಲಂಗಾಣ ಕಾಂಗ್ರೆಸ್ ಟೀಕೆ
ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂವಹನ ಮುಖ್ಯಸ್ಥ ಸಾಮಾ ರಾಮಮೋಹನ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಕರೆದಿದ್ದ ಸರ್ವಪಕ್ಷ ಸಭೆಗೆ ಪ್ರಧಾನಿ ಗೈರಾಗಿರುವುದನ್ನು ಅವರು ಟೀಕಿಸಿದ್ದಾರೆ.
ಎಲ್‌ಪಿಜಿ ಲಭ್ಯತೆಯ ಮೇಲೆ ಈ ಬಿಕ್ಕಟ್ಟು ಬೀರಬಹುದಾದ ಪರಿಣಾಮಗಳ ಬಗ್ಗೆ ಚರ್ಚಿಸುವ ಬದಲು, ಬಿಜೆಪಿ ನಾಯಕರು ಕೇವಲ ಚುನಾವಣಾ ರಾಜಕೀಯದಲ್ಲಿ ನಿರತರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಎಲ್‌ಪಿಜಿ ಸಮಸ್ಯೆ
ಶುಕ್ರವಾರ ಲೋಕಸಭೆಯ ‘ಶೂನ್ಯ ವೇಳೆ’ಯಲ್ಲಿ ಕಾಂಗ್ರೆಸ್ ಸಂಸದ ವಿಜಯ ವಸಂತ ಅವರು ಎಲ್‌ಪಿಜಿ ಮತ್ತು ಇಂಧನ ಕೊರತೆಯ ವಿಷಯವನ್ನು ಪ್ರಸ್ತಾಪಿಸಿ, ಇದು ಕೇಂದ್ರ ಸರ್ಕಾರದ “ನಿಷ್ಕ್ರಿಯತೆ” ಎಂದು ಕಟುವಾಗಿ ಟೀಕಿಸಿದರು.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ಎಲ್‌ಪಿಜಿ ಸಿಲಿಂಡರ್, ಡೀಸೆಲ್ ಮತ್ತು ಪೆಟ್ರೋಲ್ ತೀವ್ರ ಕೊರತೆಯಿಂದಾಗಿ ದೇಶದ ಜನಜೀವನ ಸ್ಥಗಿತಗೊಂಡಿದೆ. ಆಸ್ಪತ್ರೆಗಳು ಅಗತ್ಯ ಸೇವೆ ನೀಡಲು ಪರದಾಡುತ್ತಿವೆ, ಕಾಲೇಜು ಕ್ಯಾಂಟೀನ್ ಮತ್ತು ಹೋಟೆಲ್‌ಗಳು ಮುಚ್ಚುತ್ತಿವೆ. ಸಾಮಾನ್ಯ ಜನರು ಅಡುಗೆ ಮಾಡಲು ಮತ್ತು ವಾಹನಗಳಿಗೆ ಇಂಧನ ತುಂಬಿಸಲು ಕಷ್ಟಪಡುತ್ತಿದ್ದಾರೆ. ಎಲ್‌ಪಿಜಿಗಾಗಿ ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಕೇಂದ್ರ ಸರ್ಕಾರದ ತಪ್ಪು ನಿರ್ವಹಣೆಯೇ ಈ ಬಿಕ್ಕಟ್ಟಿಗೆ ಕಾರಣ. ಕೂಡಲೇ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಮತ್ತು ಅಡೆತಡೆಯಿಲ್ಲದ ಪೂರೈಕೆಯನ್ನು ಖಚಿತಪಡಿಸಬೇಕು,” ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಶ್ಚಿಮ ಏಷ್ಯಾದ ಉದ್ವಿಗ್ನತೆಯಿಂದಾಗಿ ತೈಲ ಹಾಗೂ ಎಲ್‌ಪಿಜಿ ಪೂರೈಕೆಯ ಮೇಲೆ ಒತ್ತಡ ಉಂಟಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷವು ರಾಷ್ಟ್ರಮಟ್ಟದಲ್ಲಿ ಪ್ರತಿಭಟಿಸುತ್ತಿದ್ದರೆ, ಅದೇ ಪಕ್ಷದ ಕಮಲನಾಥ ಅವರಂತಹ ಹಿರಿಯ ನಾಯಕರು ಇದನ್ನು “ಕೇವಲ ಸೃಷ್ಟಿಸಿದ ವಾತಾವರಣ” ಎಂದು ಹೇಳಿರುವುದು ಪಕ್ಷದೊಳಗೆ ಚರ್ಚೆಗೆ ಗ್ರಾಸವಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement