ಮಧ್ಯಪ್ರಾಚ್ಯದ ಯುದ್ಧ ಐದನೇ ವಾರಕ್ಕೆ ಕಾಲಿಡುತ್ತಿದ್ದಂತೆ, ಜಾಗತಿಕ ವ್ಯಾಪಾರದ ಜೀವನಾಡಿ ಎನಿಸಿಕೊಂಡಿರುವ ‘ಹಾರ್ಮುಜ್ ಜಲಸಂಧಿ’ (Strait of Hormuz) ಈಗ ನಾವಿಕರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಇರಾನ್‌ನ ದಿಗ್ಬಂಧನ ಮತ್ತು ದಾಳಿ ಬೆದರಿಕೆಗಳ ನಡುವೆ ಸುಮಾರು 2,000 ಹಡಗುಗಳು ಮತ್ತು 20,000 ನಾವಿಕರು ಸಮುದ್ರದ ಮಧ್ಯೆ ಸಿಲುಕಿಕೊಂಡಿದ್ದು, ಆತಂಕದಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗಿದೆ.
ಸಮುದ್ರದ ಮಧ್ಯೆ ಸಿಲುಕಿರುವ ಹಡಗುಗಳಲ್ಲಿ ಆಹಾರ ಮತ್ತು ಕುಡಿಯುವ ನೀರಿನ ದಾಸ್ತಾನು ಮುಗಿಯುತ್ತಾ ಬಂದಿದೆ. ಅಂತಾರಾಷ್ಟ್ರೀಯ ಸಾರಿಗೆ ಕಾರ್ಮಿಕರ ಒಕ್ಕೂಟಕ್ಕೆ (ITF) ನಾವಿಕರಿಂದ ನಿರಂತರವಾಗಿ ತುರ್ತು ಸಂದೇಶಗಳು ಬರುತ್ತಿವೆ. “ನಮಗೆ ಬದುಕಲು ತಕ್ಷಣ ಆಹಾರ ಮತ್ತು ನೀರು ಬೇಕು” ಎಂದು ನಾವಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
“ನಾವಿಕರು ತೀವ್ರ ಭೀತಿಯಲ್ಲಿದ್ದಾರೆ. ಮಧ್ಯರಾತ್ರಿಯಲ್ಲೂ ನಮಗೆ ಕರೆಗಳು ಬರುತ್ತಿವೆ. ಇಂಟರ್ನೆಟ್ ಸಿಕ್ಕ ಕೂಡಲೇ ಅವರು ನಮ್ಮನ್ನು ಸಂಪರ್ಕಿಸಿ, ‘ಇಲ್ಲಿ ಬಾಂಬ್ ದಾಳಿ ನಡೆಯುತ್ತಿದೆ, ಹೇಗಾದರೂ ಮಾಡಿ ನಮ್ಮನ್ನು ಇಲ್ಲಿಂದ ಕರೆದೊಯ್ಯಿರಿ’ ಎಂದು ಬೇಡಿಕೊಳ್ಳುತ್ತಿದ್ದಾರೆ,” ಎಂದು ಐಟಿಎಫ್ ಸಂಯೋಜಕ ಮೊಹಮ್ಮದ್ ಅರಾಚೆಡಿ ತಿಳಿಸಿದ್ದಾರೆ.
ಯುದ್ಧ ಪೀಡಿತ ಪ್ರದೇಶವೆಂದು ಘೋಷಣೆಯಾದ ನಂತರ, ನಿಯಮದ ಪ್ರಕಾರ ನಾವಿಕರಿಗೆ ಕಂಪನಿಯ ವೆಚ್ಚದಲ್ಲೇ ತಾಯ್ನಾಡಿಗೆ ಮರಳುವ ಹಕ್ಕು ಮತ್ತು ದುಪ್ಪಟ್ಟು ಸಂಬಳ ನೀಡಬೇಕು. ಆದರೆ, ಅನೇಕ ಹಡಗು ಮಾಲೀಕರು ಈ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ನಾವಿಕರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರೂ, ಹಡಗು ಕಾರ್ಯಾಚರಣೆ ಮುಂದುವರಿಸುವಂತೆ ಅವರನ್ನು ಒತ್ತಾಯಿಸಲಾಗುತ್ತಿದೆ ಎಂದು ವರದಿಯಾಗಿದೆ.
ದುರಂತವೆಂದರೆ, ಅನೇಕ ನಾವಿಕರು ಪ್ರಾಣದ ಹಂಗು ತೊರೆದು ಹಡಗಿನಲ್ಲೇ ಉಳಿಯಲು ನಿರ್ಧರಿಸಿದ್ದಾರೆ. ಇದಕ್ಕೆ ಕಾರಣ ಬಡತನ. ದಿನಕ್ಕೆ $16 (ಸುಮಾರು 1,300 ರೂ.) ಸಂಬಳಕ್ಕೆ ದುಡಿಯುವ ನಾವಿಕರು, ಯುದ್ಧದ ಕಾರಣದಿಂದ ಸಿಗುವ ಹೆಚ್ಚಿನ ವೇತನ $32 (ಸುಮಾರು ೨೬೦೦ ರೂ.) ಆಸೆಗೆ ಬಿದ್ದು ಅಪಾಯಕಾರಿ ಪರಿಸ್ಥಿತಿಯಲ್ಲೇ ಮುಂದುವರಿಯುತ್ತಿದ್ದಾರೆ. ಸೂಕ್ತ ಕಾರ್ಮಿಕ ಒಪ್ಪಂದಗಳಿಲ್ಲದ ಕಾರಣ ಇವರಿಗೆ ಯಾವುದೇ ಭದ್ರತೆಯೂ ಇಲ್ಲದಂತಾಗಿದೆ.
ಹಡಗು ಉದ್ಯಮದ ಸಂಕೀರ್ಣ ಜಾಲ
ಒಂದು ಹಡಗು ಒಂದು ದೇಶದ ಮಾಲೀಕತ್ವ ಹೊಂದಿದ್ದರೆ, ಇನ್ನೊಂದು ದೇಶದಲ್ಲಿ ನೋಂದಣಿಯಾಗಿರುತ್ತದೆ ಮತ್ತು ಮಗದೊಂದು ದೇಶದಿಂದ ನಿರ್ವಹಿಸಲ್ಪಡುತ್ತದೆ. ಈ ಸಂಕೀರ್ಣ ಜಾಲದಿಂದಾಗಿ, ಇಂತಹ ಬಿಕ್ಕಟ್ಟಿನ ಸಮಯದಲ್ಲಿ ನಾವಿಕರ ಜವಾಬ್ದಾರಿ ಹೊರುವವರು ಯಾರು ಎಂಬ ಪ್ರಶ್ನೆ ಕಾಡುತ್ತದೆ. ಈ ಎಲ್ಲ ದೇಶಗಳು ಮತ್ತು ಹಡಗು ಮಾಲೀಕರು ಒಟ್ಟಾಗಿ ಸಹಕರಿಸದ ಹೊರತು ನಾವಿಕರ ಸುರಕ್ಷತೆ ಎಂಬುದು ಸುಲಭವಲ್ಲ.
ಈಗಾಗಲೇ ಈ ಸಂಘರ್ಷದಲ್ಲಿ 10 ನಾವಿಕರು ಮೃತಪಟ್ಟಿದ್ದಾರೆ ಎಂದು ಅಂತಾರಾಷ್ಟ್ರೀಯ ಕಡಲ ಸಂಸ್ಥೆ (IMO) ದೃಢಪಡಿಸಿದೆ.
ವಿಶ್ವದ ಒಟ್ಟು ತೈಲ ಮತ್ತು ಅನಿಲ ಪೂರೈಕೆಯ ಐದನೇ ಒಂದು ಭಾಗ ಹಾರ್ಮುಜ್ ಜಲಸಂಧಿ ಮೂಲಕವೇ ಸಾಗುತ್ತದೆ. ಜಲಸಂಧಿಯನ್ನು ದಾಟಲು ಪ್ರಯತ್ನಿಸುವ ಹಡಗುಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಬೆದರಿಕೆ ಹಾಕಿದೆ. ಇರಾನ್‌ನ ಈ ದಿಗ್ಬಂಧನವು ಭಾರತ ಮತ್ತು ಚೀನಾದಂತಹ ಏಷ್ಯಾದ ಮಾರುಕಟ್ಟೆಗಳಲ್ಲಿ ಇಂಧನದ ಲಭ್ಯತೆ ಬಗ್ಗೆ ಆತಂಕ ಮೂಡಿಸಿದೆ. ಅಲ್ಲದೆ, ಈ ದಿಗ್ಬಂಧನದಿಂದಾಗಿ ಜಾಗತಿಕವಾಗಿ ಸರಕುಗಳ ಬೆಲೆ ಏರಿಕೆಯಾಗುತ್ತಿದ್ದು, ಹಣದುಬ್ಬರ ಹೆಚ್ಚುತ್ತಿದೆ.
ಫೆಬ್ರವರಿ 28ರಂದು ಇಸ್ರೇಲ್ ಜೊತೆಗೂಡಿ ಅಮೆರಿಕವು ಇರಾನ್ ಮೇಲೆ ದಾಳಿ ನಡೆಸಿದ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಇಡೀ ವಿಶ್ವ ಈಗ ಪರ್ಷಿಯನ್ ಕೊಲ್ಲಿಯತ್ತ ಆತಂಕದಿಂದ ನೋಡುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ