ತೆಹ್ರಾನ್/ವಾಷಿಂಗ್ಟನ್: ಫೆಬ್ರವರಿ 28ರಂದು ಯುದ್ಧ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಅಮೆರಿಕದ ಯುದ್ಧ ವಿಮಾನವೊಂದು ಇರಾನ್ ಭೂಭಾಗದೊಳಗೆ ಪತನಗೊಂಡಿದೆ ಎಂದು ವರದಿಯಾಗಿದೆ. ನೈಋತ್ಯ ಇರಾನ್‌ನಲ್ಲಿ ಅಮೆರಿಕದ ಫೈಟರ್ ಪೈಲಟ್ ವಿಮಾನದಿಂದ ಎಜೆಕ್ಟ್ (Eject) ಆಗಿದ್ದಾರೆ ಎಂದು ಇರಾನ್ ಮಾಧ್ಯಮಗಳನ್ನು ಉಲ್ಲೇಖಿಸಿ ಎಪಿ (AP) ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇರಾನ್‌ನ ಸ್ಥಳೀಯ ವಾಹಿನಿಯೊಂದು “ಅಮೆರಿಕದ ಪೈಲಟ್‌ಗಾಗಿ ಹುಡುಕಾಟ ಆರಂಭಿಸಲಾಗಿದೆ. ಕೊಹಗಿಲುಯೆಹ್ ಮತ್ತು ಬೋಯರ್-ಅಹ್ಮದ್ ಪ್ರಾಂತ್ಯದ ಗೌರವಾನ್ವಿತ ಜನರೇ, ನೀವು ಶತ್ರು ಪೈಲಟ್ ಅಥವಾ ಪೈಲಟ್‌ಗಳನ್ನು ಜೀವಂತವಾಗಿ ಹಿಡಿದು ಪೊಲೀಸರಿಗೆ ಅಥವಾ ಸೇನೆಗೆ ಒಪ್ಪಿಸಿದರೆ ನಿಮಗೆ ಭಾರಿ ಮೊತ್ತದ ಬಹುಮಾನ ನೀಡಲಾಗುವುದು ಎಂದು ಅಧಿಕೃತ ಪ್ರಕಟಣೆಯನ್ನು ಓದಿದೆ.
ಕೊಹ್ಗಿಲುಯೆ ಮತ್ತು ಬೋಯರ್-ಅಹ್ಮದ್ ಪ್ರಾಂತ್ಯವು 15,500 ಚದರ ಕಿಲೋಮೀಟರ್ (5,900 ಚದರ ಮೈಲುಗಳು) ಗಿಂತ ಹೆಚ್ಚು ವ್ಯಾಪಿಸಿರುವ ತೀವ್ರ ಗ್ರಾಮೀಣ ಮತ್ತು ಪರ್ವತ ಪ್ರದೇಶವಾಗಿದೆ. ನೆರೆಯ ಚಹರ್ಮಹಲ್ ಮತ್ತು ಬಖ್ತಿಯಾರಿ ಪ್ರಾಂತ್ಯದಲ್ಲಿ ಹುಡುಕುವಂತೆ ಇರಾನಿನ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚಿಸಿದ್ದಾರೆ.
ಇರಾನ್‌ನ ಸರ್ಕಾರಿ ಪ್ರಸಾರ ಸಂಸ್ಥೆ IRIB ಪ್ರಕಾರ, ನೂರಾರು ನಾಗರಿಕರು ತಮ್ಮ ಖಾಸಗಿ ಕಾರುಗಳಲ್ಲಿ ವಿಮಾನ ಪತನವಾದ ಸ್ಥಳದತ್ತ ಧಾವಿಸುತ್ತಿದ್ದಾರೆ. ಆದರೆ ಪೈಲಟ್ ಮೇಲೆ ಯಾವುದೇ ದೈಹಿಕ ದೌರ್ಜನ್ಯ ಎಸಗದಂತೆ ಸೇನೆ ಮನವಿ ಮಾಡಿದೆ.
F-35 ಮತ್ತು F-15 ವಿಮಾನಗಳನ್ನು ಹೊಡೆದುರುಳಿಸಿದ ಇರಾನ್?
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕೇಂದ್ರ ಇರಾನ್ ಮೇಲೆ ಹಾರುತ್ತಿದ್ದ ಅಮೆರಿಕದ ಅತ್ಯಾಧುನಿಕ F-35 ಸ್ಟೆಲ್ತ್ ಫೈಟರ್ ಅನ್ನು ಹೊಡೆದುರುಳಿಸಿರುವುದಾಗಿ ಪ್ರತಿಪಾದಿಸಿದೆ. ಇರಾನ್‌ನ ತಸ್ನಿಮ್ ಸುದ್ದಿ ಸಂಸ್ಥೆಯು ವಿಮಾನದ ಅವಶೇಷಗಳೆಂದು ಹೇಳಲಾದ ಚಿತ್ರಗಳನ್ನು ಪ್ರಕಟಿಸಿದ್ದು, ಪೈಲಟ್ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಹೇಳಿದೆ.
ಅಲ್ಲದೆ, ಬ್ರಿಟನ್‌ನಿಂದ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕದ F-15E ಸ್ಟ್ರೈಕ್ ಈಗಲ್ ವಿಮಾನವನ್ನೂ ಹೊಡೆದುರುಳಿಸಲಾಗಿದೆ ಎಂದು ಇರಾನ್ ಹೇಳಿಕೊಂಡಿದೆ. ಯುದ್ಧ ಆರಂಭವಾದಾಗಿನಿಂದ ಇರಾನ್ ಈ ರೀತಿ ಹೇಳಿಕೊಂಡಿರುವುದು ಇದು ಮೂರನೇ ಬಾರಿ.
ಅಮೆರಿಕದ ಪ್ರತಿಕ್ರಿಯೆ ಏನು?
ಈ ಹಿಂದಿನ ಇರಾನ್ ಹೇಳಿಕೊಂಡಿದ್ದನ್ನು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಸುಳ್ಳು ಎಂದು ತಳ್ಳಿಹಾಕಿತ್ತು. “ನಮ್ಮ ಎಲ್ಲಾ ವಿಮಾನಗಳು ಸುರಕ್ಷಿತವಾಗಿವೆ, ಇರಾನ್ ಸತತವಾಗಿ ಸುಳ್ಳು ಸುದ್ದಿ ಹರಡುತ್ತಿದೆ” ಎಂದು ಈ ಹಿಂದೆ ಅಮೆರಿಕ ಹೇಳಿತ್ತು. ಆದರೆ, ಪ್ರಸ್ತುತ ಘಟನೆಯ ಬಗ್ಗೆ ಪೆಂಟಗನ್ ಅಥವಾ ವೈಟ್ ಹೌಸ್ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅಮೆರಿಕದ ಅಧಿಕಾರಿಯೊಬ್ಬರು ರಾಯಿಟರ್ಸ್‌ಗೆ ನೀಡಿರುವ ಮಾಹಿತಿಯ ಪ್ರಕಾರ, ಪತನಗೊಂಡ ವಿಮಾನದ ಸಿಬ್ಬಂದಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಭೀಕರ ಸ್ವರೂಪ ಪಡೆದ ಯುದ್ಧ
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಸಂಘಟಿತ ದಾಳಿ ನಡೆಸಿದ ನಂತರ ಈ ಸಂಘರ್ಷ ಆರಂಭವಾಗಿತ್ತು. ಇಂದಿಗೆ ಯುದ್ಧ 35ನೇ ದಿನಕ್ಕೆ ಕಾಲಿಟ್ಟಿದ್ದು, ಭಾರಿ ಸಾವುನೋವು ಸಂಭವಿಸಿದೆ. ಇರಾನಿನಲ್ಲಿ 1,900ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಇಸ್ರೇಲಿನಲ್ಲಿ 19 ಜನರು ಸಾವಿಗೀಡಾಗಿದ್ದಾರೆ. ಅಮೆರಿಕ ಸೇನೆಯ13 ಯೋಧರ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಇಸ್ರೇಲ್ ಹಾಗೂ ಅಮೆರಿಕ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಇಡೀ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ