ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ ; ಆಸ್ಪತ್ರೆಗೆ ದಾಖಲು

ಮುಂಬೈ : ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ (92) ಅವರಿಗೆ ಶನಿವಾರ (ಏಪ್ರಿಲ್ 11) ಹೃದಯಾಘಾತವಾಗಿದ್ದು, ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,  ಸದ್ಯ ಅವರು ಆಸ್ಪತ್ರೆಯ ತುರ್ತು ವೈದ್ಯಕೀಯ ಸೇವೆಗಳ (EMS) ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಅವರ ಕುಟುಂಬ ಸದಸ್ಯರಿಂದಾಗಲಿ ಅಥವಾ ಆಸ್ಪತ್ರೆಯ ಆಡಳಿತ ಮಂಡಳಿಯಿಂದಾಗಲಿ ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ.
ಆಶಾ ಭೋಸ್ಲೆ ಅವರ ಆರೋಗ್ಯದ ಕುರಿತು ಮಾಹಿತಿ ನೀಡಿರುವ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯರಾದ ಡಾ. ಪ್ರತೀತ್ ಸಮದಾನಿ ಅವರು, ” ಆಶಾ ಭೋಸ್ಲೆ ಅವರಿಗೆ ಶನಿವಾರ ಹೃದಯಾಘಾತ ಸಂಭವಿಸಿದೆ. ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿದ್ದು, ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಸುಮಾರು 70 ವರ್ಷಗಳ ಸುದೀರ್ಘ ವೃತ್ತಿಜೀವನವನ್ನು ಹೊಂದಿರುವ ಆಶಾ ಭೋಸ್ಲೆ ಅವರು ಭಾರತೀಯ ಸಂಗೀತ ಲೋಕದ ಅತ್ಯಂತ ಬಹುಮುಖ ಪ್ರತಿಭೆಯ ಗಾಯಕಿ. ವಿವಿಧ ಭಾಷೆಗಳಲ್ಲಿ ಮತ್ತು ವಿವಿಧ ಪ್ರಕಾರಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಇವರು ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.
ಆರಂಭಿಕ ವೃತ್ತಿಜೀವನ: ಇವರು ತಮ್ಮ ಮೊದಲ ಹಾಡನ್ನು 1943 ರಲ್ಲಿ ‘ಮಾಝಾ ಬಾಲ್’ ಎಂಬ ಮರಾಠಿ ಚಿತ್ರಕ್ಕಾಗಿ ಹಾಡಿದರು. ಬಾಲಿವುಡ್‌ನಲ್ಲಿ 1948 ರ ‘ಚುನೇರಿಯಾ’ ಚಿತ್ರದ ‘ಸಾವನ್ ಆಯಾ’ ಹಾಡಿನ ಮೂಲಕ ಗುರುತಿಸಿಕೊಂಡರು. ಹಿಂದಿ ಸೇರಿದಂತೆ ಒಟ್ಟು 20 ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಹಾಡಿದ್ದಾರೆ. 2006 ರ ಹೊತ್ತಿಗಾಗಲೇ ತಾನು ಸುಮಾರು 12,000 ಹಾಡುಗಳನ್ನು ಹಾಡಿರುವುದಾಗಿ ಅವರು ತಿಳಿಸಿದ್ದರು.
7 ಫಿಲ್ಮ್ ಫೇರ್ ಪ್ರಶಸ್ತಿಗಳು (ಅತ್ಯುತ್ತಮ ಹಿನ್ನೆಲೆ ಗಾಯಕಿ ವಿಭಾಗದಲ್ಲಿ), ಜೀವಮಾನ ಸಾಧನೆ ಪ್ರಶಸ್ತಿ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (2000). ಪದ್ಮ ವಿಭೂಷಣ (2008) ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇವರು 2013 ರಲ್ಲಿ ‘ಮಾಯಿ’ ಎಂಬ ಮರಾಠಿ ಚಿತ್ರದ ಮೂಲಕ ನಟನೆಯಲ್ಲೂ ತೊಡಗಿಸಿಕೊಂಡಿದ್ದರು.

ಪ್ರಮುಖ ಸುದ್ದಿ :-   ವಿಡಿಯೋ | ನಾನು ಬದುಕಲ್ಲ ಎಂದು ಅನ್ಸಿತ್ತು..ಆದ್ರೆ ಪ್ರಯಾಣಿಕರ ಉಳಿಸಲು ಹೋರಾಡ್ಲೇಬೇಕಿತ್ತು’: ಫ್ಲೈದುಬೈ ದಾಳಿಯ ಭೀಕರ ಕ್ಷಣ ಬಿಚ್ಚಿಟ್ಟ ಪೈಲಟ್‌ ಸ್ಮಿತ್ ಮಚ್ಚಾರ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement