ವಿಡಿಯೋ | ಮ್ಯಾರಥಾನ್‌ ಓಟದ ಸ್ಪರ್ಧೆಯಲ್ಲಿ ಮಾನವ ಕ್ರೀಡಾಪಟುಗಳನ್ನೇ ಹಿಂದಿಕ್ಕಿ ದಾಖಲೆ ಬರೆದ ರೋಬೋಟ್‌ಗಳು…!

ಬೀಜಿಂಗ್: ತಂತ್ರಜ್ಞಾನ ಲೋಕದಲ್ಲಿ ಹೊಸ ಮೈಲಿಗಲ್ಲೊಂದು ಸ್ಥಾಪನೆಯಾಗಿದೆ. ಭಾನುವಾರ ನಡೆದ ‘ಬೀಜಿಂಗ್ ಇ-ಟೌನ್ ಹ್ಯೂಮನಾಯ್ಡ್ ರೋಬೋಟ್ ಹಾಫ್ ಮ್ಯಾರಥಾನ್’ನಲ್ಲಿ ಮಾನವರೂಪಿ ರೋಬೋಟ್‌ಗಳು ಮಾನವ ಅಥ್ಲೀಟ್‌ಗಳನ್ನು ಹಿಂದಿಕ್ಕುವ ಮೂಲಕ ಹೊಸ ಇತಿಹಾಸ ಬರೆದಿವೆ. ಇದೇ ಮೊದಲ ಬಾರಿಗೆ ಮ್ಯಾರಥಾನ್‌ ಓಟದ ಸ್ಪರ್ಧೆಯಲ್ಲಿ ಮಾನವರೂಪಿ ರೋಬೋಟ್‌ಗಳು ಮನುಷ್ಯರಿಗಿಂತ ವೇಗವಾಗಿ ಓಡಿ ಗುರಿ ತಲುಪಿ ಬೆರಗುಗೊಳಿಸಿವೆ.
ಚೀನಾದ ಪ್ರಖ್ಯಾತ ಟೆಕ್ ಸಂಸ್ಥೆ ‘ಆನರ್’ (Honor) ಅಭಿವೃದ್ಧಿಪಡಿಸಿದ ‘ಲೈಟ್ನಿಂಗ್’ ಹೆಸರಿನ ರೋಬೋಟ್, 21.1 ಕಿ.ಮೀ ದೂರದ ಓಟವನ್ನು ಕೇವಲ 50 ನಿಮಿಷ 26 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದೆ. ಇದು ಜಾಕೋಬ್ ಕಿಪ್ಲಿಮೊ ಅವರ ಹೆಸರಿನಲ್ಲಿರುವ ಹಾಫ್ ಮ್ಯಾರಥಾನ್ ವಿಶ್ವದಾಖಲೆಯನ್ನು (57:20) ಸುಮಾರು 7 ನಿಮಿಷಗಳಷ್ಟು ಕಡಿಮೆ ಸಮಯದಲ್ಲಿ ಓಡಡುವ ಮೂಲಕ ಹೊಸ ದಾಖಲೆ ಸ್ಥಾಪಿಸಿದೆ. ಕಳೆದ ವರ್ಷ ಇದೇ ಸ್ಪರ್ಧೆಯಲ್ಲಿ ರೋಬೋಟ್‌ಗಳು ನಿಗದಿತ ಗುರಿ ತಲುಪಲು 2 ಗಂಟೆ 40 ನಿಮಿಷ ತಗೆದುಕೊಂಡಿದ್ದವು. ಅದಕ್ಕೆ ಹೋಲಿಸಿದರೆ ಈ ಬಾರಿ ಅದ್ಭುತ ಸುಧಾರಣೆ ಕಂಡುಬಂದಿದ್ದು, ಅದು ಈ ಅಂತರವನ್ನು ಕೇವಲ 50 ನಿಮಿಷ 26 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದೆ.

ಈ ಮ್ಯಾರಥಾನ್‌ನಲ್ಲಿ ಸುಮಾರು 12,000 ಮಾನವ ಓಟಗಾರರ ಜೊತೆಗೆ 100ಕ್ಕೂ ಹೆಚ್ಚು ಮಾನವರೂಪಿ ರೋಬೋಟ್‌ಗಳು ಭಾಗವಹಿಸಿದ್ದವು. ಸುರಕ್ಷತೆಯ ದೃಷ್ಟಿಯಿಂದ ಮಾನವರು ಮತ್ತು ಯಂತ್ರಗಳ ನಡುವೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು.
ಸ್ಪರ್ಧೆಯ ಮೊದಲ ಮೂರೂ ಸ್ಥಾನಗಳನ್ನು ‘ಆನರ್’ ಸಂಸ್ಥೆಯ ರೋಬೋಟ್‌ಗಳೇ ಬಾಚಿಕೊಂಡಿವೆ. ಎರಡನೇ ಮತ್ತು ಮೂರನೇ ಸ್ಥಾನ ಪಡೆದ ರೋಬೋಟ್‌ಗಳು ಕ್ರಮವಾಗಿ 51 ಮತ್ತು 53 ನಿಮಿಷಗಳಲ್ಲಿ ಓಟ ಮುಗಿಸಿವೆ. ಅಂದರೆ ಈ ರೋಬೋಟ್‌ಗಳು ಸಹ ಮನುಷ್ಯರಿಗಿಂತ ವೇಗವಾಗಿ ಓಡಿವೆ.
2025ರಲ್ಲಿ ನಡೆದ ಮೊದಲ ರೇಸ್‌ನಲ್ಲಿ ಎಲ್ಲವನ್ನೂ ರಿಮೋಟ್ ಮೂಲಕ ನಿಯಂತ್ರಿಸಲಾಗಿತ್ತು. ಆದರೆ ಈ ಬಾರಿ ಶೇ. 40ರಷ್ಟು ರೋಬೋಟ್‌ಗಳು ತಮ್ಮಲ್ಲಿನ ಸೆನ್ಸಾರ್ ಮತ್ತು ಕೃತಕ ಬುದ್ಧಿಮತ್ತೆ (AI) ಬಳಸಿಕೊಂಡು ಸ್ವತಂತ್ರವಾಗಿ ಓಡಿವೆ.

ಪ್ರಮುಖ ಸುದ್ದಿ :-   ಕೇರಳಕ್ಕೆ ಮುಂಗಾರು ಪ್ರವೇಶ: 8 ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಣೆ

ತಾಂತ್ರಿಕ ವಿಶೇಷತೆಗಳೇನು?
ಇಂಜಿನಿಯರ್ ಡು ಕ್ಸಿಯೋಡಿ ಅವರ ಪ್ರಕಾರ, ಈ ರೋಬೋಟ್‌ಗಳನ್ನು ಗಣ್ಯ ಅಥ್ಲೀಟ್‌ಗಳ ಶೈಲಿಯಲ್ಲೇ ವಿನ್ಯಾಸಗೊಳಿಸಲಾಗಿದೆ.
ಇವುಗಳ ಕಾಲುಗಳು 90 ರಿಂದ 95 ಸೆಂಟಿಮೀಟರ್ ಉದ್ದವಿದ್ದು, ಮನುಷ್ಯರ ಓಟದ ವೇಗವನ್ನು ನಕಲು ಮಾಡುತ್ತವೆ.
ವೇಗವಾಗಿ ಓಡುವಾಗ ಉಂಟಾಗುವ ಶಾಖವನ್ನು ತಣಿಸಲು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸುವ ಅತ್ಯಾಧುನಿಕ ‘ಲಿಕ್ವಿಡ್ ಕೂಲಿಂಗ್’ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗಿದೆ.
“ಕೇವಲ ವೇಗವಾಗಿ ಓಡುವುದು ನಮ್ಮ ಗುರಿಯಲ್ಲ, ಈ ಮೂಲಕ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಕೈಗಾರಿಕಾ ಕ್ಷೇತ್ರಗಳಲ್ಲಿ ಮತ್ತು ಯಂತ್ರಗಳ ದೃಢತೆಯನ್ನು ಹೆಚ್ಚಿಸಲು ಬಳಸಬಹುದು,” ಎಂದು ಡು ಕ್ಸಿಯೋಡಿ ತಿಳಿಸಿದ್ದಾರೆ.

ಕುತೂಹಲಕಾರಿ ಸಂಗತಿಗಳು…
ವಿಶೇಷವೆಂದರೆ, ಆನರ್ ಸಂಸ್ಥೆಯ ಮತ್ತೊಂದು ರೋಬೋಟ್ ಕೇವಲ 48 ನಿಮಿಷ 19 ಸೆಕೆಂಡುಗಳಲ್ಲಿ ಓಟ ಮುಗಿಸಿ ಅತ್ಯಂತ ವೇಗದ ದಾಖಲೆ ಬರೆದರೂ ಅದಕ್ಕೆ ಪ್ರಥಮ ಸ್ಥಾನ ನೀಡಲಾಗಿಲ್ಲ. ಏಕೆಂದರೆ ಸ್ಪರ್ಧೆಯ ನಿಯಮದಂತೆ ‘ಸ್ವತಂತ್ರವಾಗಿ (Autonomous)’ ಓಡುವ ಸಾಮರ್ಥ್ಯಕ್ಕೆ ಆದ್ಯತೆ ನೀಡಲಾಗಿತ್ತು. ಇದಲ್ಲದೆ, ಮ್ಯಾರಥಾನ್‌ನಲ್ಲಿ ಒಂದು ರೋಬೋಟ್ ‘ಟ್ರಾಫಿಕ್ ಮಾರ್ಷಲ್’ ಆಗಿ ಕೆಲಸ ಮಾಡಿ, ಧ್ವನಿ ಮತ್ತು ಸಂಜ್ಞೆಗಳ ಮೂಲಕ ಓಟಗಾರರಿಗೆ ದಾರಿ ತೋರಿಸಿದ್ದು ವಿಶೇಷವಾಗಿತ್ತು.
ಆದರೆ, ರೇಸ್ ಸಂಪೂರ್ಣ ಸುಗಮವಾಗಿರಲಿಲ್ಲ. ಕೆಲವು ರೋಬೋಟ್‌ಗಳು ಆರಂಭದಲ್ಲೇ ಎಡವಿ ಬಿದ್ದವು, ಇನ್ನು ಕೆಲವು ದಾರಿ ತಪ್ಪಿ ಬ್ಯಾರಿಕೇಡ್‌ಗಳಿಗೆ ಡಿಕ್ಕಿ ಹೊಡೆದವು.

ಪ್ರಮುಖ ಸುದ್ದಿ :-   ಬಂಗಾಳ ರಾಜಕೀಯದಲ್ಲಿ ಸುನಾಮಿ ; ದೀದಿಗೆ ಬಿಗ್ ಶಾಕ್ : ಟಿಂಎಂಸಿ ಶಾಸಕರ ಬೆಂಬಲದಿಂದಲೇ ವಿಧಾನಸಭೆ ವಿಪಕ್ಷದ ನಾಯಕನಾದ ಉಚ್ಚಾಟಿತ ಶಾಸಕ..!

ಭವಿಷ್ಯದ ದೃಷ್ಟಿಕೋನ ಮತ್ತು ಸವಾಲುಗಳು:
ಈ ಯಶಸ್ಸು ರೋಬೋಟಿಕ್ಸ್ ಕ್ಷೇತ್ರದಲ್ಲಿ ಚೀನಾದ ಪ್ರಾಬಲ್ಯವನ್ನು ಎತ್ತಿ ತೋರಿಸಿದೆ. ಅಗಿಬಾಟ್, ಯುನಿಟ್ರೀ ಮತ್ತು ಯುಬಿಟೆಕ್ ಅಂತಹ ಚೀನೀ ಕಂಪನಿಗಳು ಜಾಗತಿಕವಾಗಿ ಅತಿ ಹೆಚ್ಚು ಮಾನವರೂಪಿ ರೋಬೋಟ್‌ಗಳನ್ನು ಮಾರಾಟ ಮಾಡುತ್ತಿವೆ. ಅಮೆರಿಕದೊಂದಿಗಿನ ತಾಂತ್ರಿಕ ಪೈಪೋಟಿಯಲ್ಲಿ ಚೀನಾ ಈ ಕ್ಷೇತ್ರಕ್ಕೆ ಭಾರಿ ಹಣ ಹೂಡಿಕೆ ಮಾಡುತ್ತಿದೆ.
ಆದಾಗ್ಯೂ, ತಜ್ಞರ ಪ್ರಕಾರ ಓಟದ ವೇಗವು ಕೈಗಾರಿಕಾ ಸಾಮರ್ಥ್ಯಕ್ಕೆ ಸಮನಲ್ಲ. ಸಂಕೀರ್ಣವಾದ ಕೆಲಸಗಳನ್ನು ಮಾಡಲು, ನಿರ್ಧಾರ ತೆಗೆದುಕೊಳ್ಳಲು ಮತ್ತು ನಿಖರತೆಯನ್ನು ಸಾಧಿಸಲು ಮನುಷ್ಯರು ಇಂದಿಗೂ ಯಂತ್ರಗಳಿಗಿಂತ ಮುಂದಿದ್ದಾರೆ. ಆದರೆ, ಈ ಮ್ಯಾರಥಾನ್ ಭವಿಷ್ಯದ AI ಯುಗದ ಮುನ್ಸೂಚನೆಯನ್ನು ನೀಡಿದೆ ಎಂಬುದರಲ್ಲಿ ಸಂಶಯವಿಲ್ಲ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement