ತೆಹ್ರಾನ್: ಇರಾನ್ನ ಸಾಂಸ್ಕೃತಿಕ ಮತ್ತು ರಾಜಕೀಯ ಸಂಪ್ರದಾಯಗಳಿಗೆ ತದ್ವಿರುದ್ಧವಾದ ಬೆಳವಣಿಗೆಯೊಂದರಲ್ಲಿ, ದೇಶದ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಸಂಸ್ಕಾರ ಇನ್ನೂ ನಡೆದಿಲ್ಲ. 86 ವರ್ಷದ ಖಮೇನಿ ಅವರು ಅಮೆರಿಕ ಮತ್ತು ಇಸ್ರೇಲ್ನ ಜಂಟಿ ವೈಮಾನಿಕ ದಾಳಿಯಲ್ಲಿ ಹತ್ಯೆಗೀಡಾಗಿ ಏಳು ವಾರಗಳೇ ಕಳೆದಿದ್ದರೂ, ಇರಾನಿನ ಆಡಳಿತವು ಅವರ ಸಮಾಧಿ ಸ್ಥಳವನ್ನು ಇನ್ನೂ ಅಂತಿಮಗೊಳಿಸಿಲ್ಲ. ಇರಾನಿಗೆ ಅವರ ಪಾರ್ಥಿವ ಶರೀರವನ್ನು ಮಣ್ಣು ಮಾಡಲು ಇರಾನ್ ಆಡಳಿತಕ್ಕೆ ಇನ್ನೂ ಸಾಧ್ಯವಾಗಿಲ್ಲ.
ಪ್ರಸ್ತುತ ಇರಾನ್ ಅನ್ನು ಮುನ್ನಡೆಸುತ್ತಿರುವ ಅಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ ನೇತೃತ್ವದ ಸರ್ಕಾರವು ಅಮೆರಿಕ ಮತ್ತು ಇಸ್ರೇಲ್ನಿಂದ ಯುದ್ಧದ ಭೀತಿಯನ್ನು ಎದುರಿಸುತ್ತಿದೆ. ಆದರೆ, ಭದ್ರತಾ ತಜ್ಞರ ಪ್ರಕಾರ, ಕೇವಲ ಯುದ್ಧದ ಕಾರ್ಯನಿರತತೆಯಲ್ಲ, ಬದಲಿಗೆ ಬಲವಾದ ‘ಭಯ’ ಈ ವಿಳಂಬಕ್ಕೆ ಮುಖ್ಯ ಕಾರಣವಾಗಿದೆ.
ಫೌಂಡೇಶನ್ ಫಾರ್ ದಿ ಡಿಫೆನ್ಸ್ ಆಫ್ ಡೆಮಾಕ್ರಸೀಸ್ನ ತಜ್ಞ ಬೆಹನಮ್ ತಾಲೆಬ್ಲು ಅವರು ‘ನ್ಯೂಯಾರ್ಕ್ ಪೋಸ್ಟ್’ಗೆ ನೀಡಿರುವ ಮಾಹಿತಿಯ ಪ್ರಕಾರ, “ಅಮೆರಿಕದ ಜೊತೆ ಅಸ್ಥಿರ ಕದನ ವಿರಾಮ ಏರ್ಪಟ್ಟಿದ್ದರೂ, ಮೊಜ್ತಬಾ ಖಮೇನಿ ಆಡಳಿತವು ಭಯದಿಂದ ಪಾರ್ಶ್ವವಾಯುವಿಗೆ ಒಳಗಾದಂತಿದೆ. ಅಮೆರಿಕದ ಜೊತೆಗಿನ ತಾತ್ಕಾಲಿಕ ಕದನ ವಿರಾಮದ ಹೊರತಾಗಿಯೂ ಅಯತೊಲ್ಲಾ ಅಲಿ ಖಮೇನಿ ಸ್ಮರಣಾರ್ಥ ಸಮಾವೇಶ ಅಥವಾ ಅಂತ್ಯಕ್ರಿಯೆ ನಡೆಸುವ ಸ್ಥಿತಿಯಲ್ಲಿ ಸರ್ಕಾರವಿಲ್ಲ.
1989ರ ಇತಿಹಾಸ ಮತ್ತು ಇಂದಿನ ವಾಸ್ತವ
1989ರಲ್ಲಿ ಇರಾನ್ನ ಇಸ್ಲಾಂಮಿಕ್ ಗಣರಾಜ್ಯದ ಸಂಸ್ಥಾಪಕ ನಾಯಕ ಅಯತೊಲ್ಲಾ ರುಹೊಲ್ಲಾ ಖೊಮೇನಿ ಅವರ ಅಂತ್ಯಕ್ರಿಯೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು. ಆದರೆ ಅಲಿ ಖಮೇನಿ ವಿಷಯದಲ್ಲಿ ಈಗ ಅಂತಹದ್ದನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯವಾಗಿದೆ ಎಂದು ವರದಿಗಳು ಹೇಳುತ್ತವೆ. ಇದಕ್ಕೆ ಪ್ರಮುಖ ಕಾರಣಗಳಲ್ಲಿ ಇಸ್ರೇಲ್ ದಾಳಿಯ ಭೀತಿಯೂ ಒಂದು. ಇಸ್ರೇಲ್ ಸತತವಾಗಿ ಇರಾನ್ ಮೇಲೆ ವಾರಗಟ್ಟಲೆ ಬಾಂಬ್ ದಾಳಿ ನಡೆಸುತ್ತಿದೆ. ಹಾಗೂ, ಅಂತ್ಯಕ್ರಿಯೆಯ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗಳು ಭುಗಿಲೇಳುವ ಆತಂಕವೂ ಇದೆ.
ಅಲ್ಲದೆ, ಇರಾನಿನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ತಮ್ಮ ತಂದೆಯ ನಿಧನದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಈಗ ಅವರ ತಂದೆಯ ಅಂತ್ಯಕ್ರಿಯೆ ನಡೆದರೆ ಅವರು ಜನರೆದುರು ಬರಬೇಕಾಗುತ್ತದೆ ಅಥವಾ ತಾವು ಭಾಗವಹಿಸದೇ ಇರುವುದಕ್ಕೆ ವಿವರಣೆ ನೀಡಬೇಕಾಗುತ್ತದೆ. ಆಡಳಿತವು 50 ದಿನಗಳ ಕಾಲ ಇಂಟರ್ನೆಟ್ ಸ್ಥಗಿತಗೊಳಿಸಿರುವುದು ಸತ್ಯ ಹೊರಬರಲು ಅವರು ಎಷ್ಟು ಹೆದರುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ” ಎಂದು ತಾಲೆಬ್ಲು ವಿಶ್ಲೇಷಿಸಿದ್ದಾರೆ.
ಇಸ್ರೇಲ್ ದಾಳಿಯಿಂದ ಸುರಕ್ಷಿತವಾಗಿರಲು ಇರಾನ್ ಸರ್ಕಾರವು ತನ್ನ ಈಶಾನ್ಯ ಭಾಗದ ನಗರವಾದ ಮಶಾದ್ ಅನ್ನು ಅಂತ್ಯಕ್ರಿಯೆಗಾಗಿ ಪರಿಶೀಲಿಸುತ್ತಿದೆ ಎನ್ನಲಾಗಿದೆ. ಇದು ಖಮೇನಿಯ ತವರು ನಗರವಾಗಿದ್ದು, ತುರ್ಕಮೆನಿಸ್ತಾನ್ ಗಡಿಯ ಸಮೀಪದಲ್ಲಿದೆ.
ಅಮೆರಿಕ ಮತ್ತು ಇಸ್ರೇಲ್ ದಾಳಿಗೆ ಪ್ರತಿಯಾಗಿ ಇರಾನ್ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿ ಮಾಡಿದೆ. ಅಷ್ಟೇ ಅಲ್ಲದೆ, ಜಾಗತಿಕ ಇಂಧನ ರಫ್ತಿಗೆ ಪ್ರಮುಖವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮುಚ್ಚಿದೆ. ಇದರಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ತೈಲ ಬೆಲೆಗಳು ಗಗನಕ್ಕೇರಿವೆ.
ಶಾಂತಿ ಮಾತುಕತೆ : ಟ್ರಂಪ್ ಎಚ್ಚರಿಕೆ
ಏಪ್ರಿಲ್ 8 ರಂದು ಕದನ ವಿರಾಮ ಘೋಷಿಸಲಾಗಿದ್ದರೂ, ಕಳೆದ ವಾರ ಇಸ್ಲಾಮಾಬಾದ್ನಲ್ಲಿ ನಡೆದ ಶಾಂತಿ ಮಾತುಕತೆಗಳು 20 ಗಂಟೆಗಳ ಸುದೀರ್ಘ ಚರ್ಚೆಯ ನಂತರವೂ ವಿಫಲವಾಗಿವೆ. “ಇರಾನ್ ತನ್ನ ಪರಮಾಣು ಮಹತ್ವಾಕಾಂಕ್ಷೆಯನ್ನು ಬಿಡದ ಕಾರಣ ಮಾತುಕತೆ ಮುರಿದುಬಿದ್ದಿದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇದೀಗ ಪಾಕಿಸ್ತಾನದಲ್ಲಿ ಎರಡನೇ ಸುತ್ತಿನ ಶಾಂತಿ ಮಾತುಕತೆ ಬಗ್ಗೆ ಟ್ರಂಪ್ ಹೇಳಿದ್ದಾರೆ. ಆದರೆ ಒಂದು ಕಠಿಣ ಎಚ್ಚರಿಕೆಯನ್ನೂ ನೀಡಿದ್ದಾರೆ: “ಒಂದು ವೇಳೆ ಇರಾನ್ ಒಪ್ಪಂದಕ್ಕೆ ಸಹಿ ಹಾಕದಿದ್ದರೆ, ನಾವು ಆ ದೇಶದ ಪ್ರತಿಯೊಂದು ವಿದ್ಯುತ್ ಸ್ಥಾವರ ಮತ್ತು ಸೇತುವೆಯನ್ನು ನಾಶಪಡಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ