ವಾಷಿಂಗ್ಟನ್/ಇಸ್ಲಾಮಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ದಾಳಿಯನ್ನು ಸದ್ಯಕ್ಕೆ ತಡೆಹಿಡಿದಿದ್ದು, ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದ್ದಾರೆ. ಮಂಗಳವಾರ ಅಂತ್ಯಗೊಳ್ಳಬೇಕಿದ್ದ ಈ ಕದನ ವಿರಾಮವು, ಪಾಕಿಸ್ತಾನದ ಮನವಿಯ ಮೇರೆಗೆ ವಿಸ್ತರಣೆಯಾಗಿದೆ.
ಕೆಲವೇ ಗಂಟೆಗಳ ಹಿಂದೆ ಇರಾನ್ ಮೇಲೆ ಬೃಹತ್ ದಾಳಿಯ ಎಚ್ಚರಿಕೆ ನೀಡಿದ್ದ ಟ್ರಂಪ್, ನಂತರ ದಿಢೀರ್ ನಿರ್ಧಾರ ಬದಲಿಸಿ ಕದನ ವಿರಾಮ ವಿಸ್ತರಿಸಿದ್ದಾರೆ. ಇರಾನ್ ಸರ್ಕಾರದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿದ್ದು (Fractured Government), ಅವರು ಒಮ್ಮತದ ಶಾಂತಿ ಪ್ರಸ್ತಾವನೆಯೊಂದಿಗೆ ಬರಲು ಕಾಲಾವಕಾಶ ನೀಡಬೇಕೆಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇರಾನ್ ಬಂದರುಗಳ ದಿಗ್ಬಂಧನ ಮುಂದುವರಿಕೆ:
ದಾಳಿಯನ್ನು ತಡೆಹಿಡಿದಿದ್ದರೂ, ಇರಾನ್ ಬಂದರುಗಳ ಮೇಲಿನ ಅಮೆರಿಕದ ನೌಕಾ ದಿಗ್ಬಂಧನ ಮುಂದುವರಿಯಲಿದೆ. ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಇದನ್ನು “ಯುದ್ಧದ ನಡವಳಿಕೆ” ಎಂದು ಖಂಡಿಸಿದ್ದಾರೆ. ದಿಗ್ಬಂಧನ ತೆರವುಗೊಳಿಸದಿದ್ದರೆ ಬುಧವಾರ ನಡೆಯಲಿರುವ ಶಾಂತಿ ಮಾತುಕತೆಯಲ್ಲಿ ಭಾಗವಹಿಸುವ ಬಗ್ಗೆ ಇರಾನ್ ಅನುಮಾನ ವ್ಯಕ್ತಪಡಿಸಿದೆ.
ಫೆಬ್ರವರಿ 28 ರಿಂದ ನಡೆದ ದಾಳಿಗಳಲ್ಲಿ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವು ಪ್ರಮುಖ ನಾಯಕರು ಮೃತಪಟ್ಟಿದ್ದಾರೆ. ಖಮೇನಿ ಅವರ ಪುತ್ರ ಮೊಜ್ತಬಾ ಈಗ ಹೊಸ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇರಾನ್ ನಾಯಕತ್ವ ವಿಭಜನೆಯಾಗಿದೆ ಎಂದು ಟ್ರಂಪ್ ಹೇಳುತ್ತಿದ್ದರೂ, ಅಲ್ಲಿನ ವ್ಯವಸ್ಥೆಯು ಈಗಲೂ ಮೊಜ್ತಬಾ ಅವರ ನೇತೃತ್ವದಲ್ಲಿ ಒಗ್ಗಟ್ಟಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಶಾಂತಿ ಮಾತುಕತೆ ಯಾಕೆ ಮುಂದುವರಿಯುತ್ತಿಲ್ಲ..?
ಅಮೆರಿಕವು ಇರಾನ್ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣ ನಿಲ್ಲಿಸಬೇಕೆಂದು ಒತ್ತಾಯಿಸುತ್ತಿದೆ. ಆದರೆ, ಇರಾನ್ ತನ್ನ ಪರಮಾಣು ಹಕ್ಕುಗಳನ್ನು ಬಿಟ್ಟುಕೊಡಲು ಸಿದ್ಧವಿಲ್ಲ. ಅಮೆರಿಕದ ಈ ಕಠಿಣ ನಿಲುವು ಮತ್ತು ನೌಕಾ ದಿಗ್ಬಂಧನವು ಶಾಂತಿ ಮಾತುಕತೆಗೆ ದೊಡ್ಡ ತಡೆಯಾಗಿದೆ.
ಕದನ ವಿರಾಮ ವಿಸ್ತರಿಸಿದ್ದಕ್ಕಾಗಿ ಪ್ರಧಾನಿ ಶೆಹಬಾಜ್ ಷರೀಫ್ ಟ್ರಂಪ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇಸ್ಲಾಮಾಬಾದ್ನಲ್ಲಿ ನಡೆಯಲಿರುವ ಎರಡನೇ ಸುತ್ತಿನ ಮಾತುಕತೆಯ ಮೂಲಕ ಯುದ್ಧಕ್ಕೆ ಶಾಶ್ವತ ಪರಿಹಾರ ಸಿಗಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ