ವಿಡಿಯೋ…| ಸರ್ಕಸ್ ಪ್ರದರ್ಶನ ವೇಳೆ ಸೇಫ್ಟಿ ನೆಟ್ ದಾಟಿ ಪ್ರೇಕ್ಷಕರತ್ತ ನುಗ್ಗಿದ ಹುಲಿ

ದಕ್ಷಿಣ ರಷ್ಯಾದ ರೋಸ್ಟೋವ್-ಆನ್-ಡಾನ್ ನಗರದಲ್ಲಿ ನಡೆದ ಸರ್ಕಸ್ ಪ್ರದರ್ಶನದ ವೇಳೆ ಸೇಫ್ಟಿ ನೆಟ್ ಕುಸಿದುಬಿದ್ದ ನಂತರ ಹುಲಿಯೊಂದು ಪ್ರೇಕ್ಷಕರತ್ತ ನುಗ್ಗಿದ ಆಘಾತಕಾರಿ ಘಟನೆ ಕಳೆದ ಭಾನುವಾರ ನಡೆದಿದೆ.
‘ದ ಮಾಸ್ಕೋ ಟೈಮ್ಸ್’ ವರದಿಯ ಪ್ರಕಾರ, ಮೂರು ಹುಲಿಗಳು ಮತ್ತು ಇಬ್ಬರು ತರಬೇತುದಾರರಿದ್ದ ಪ್ರದರ್ಶನದ ವೇಳೆ ಈ ಅವಘಡ ಸಂಭವಿಸಿದೆ. ಪ್ರಾಣಿಗಳು ಮತ್ತು ಪ್ರೇಕ್ಷಕರ ನಡುವೆ ಇದ್ದ ಸೇಫ್ಟಿ ನೆಟ್ ದಿಢೀರ್ ಕುಸಿದ ಪರಿಣಾಮ, ಒಂದು ಹುಲಿ ನೇರವಾಗಿ ಪ್ರೇಕ್ಷಕರು ಕುಳಿತಿದ್ದ ಗ್ಯಾಲರಿಯತ್ತ ಜಿಗಿದಿದೆ. ಈ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪ್ರೇಕ್ಷಕರು ದಿಕ್ಕಾಪಾಲಾಗಿ ಓಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಹುಲಿ ಪ್ರೇಕ್ಷಕರ ಸಾಲಿನಲ್ಲಿ ಓಡಾಡುತ್ತಿದ್ದರೂ, ತರಬೇತುದಾರರು ತಕ್ಷಣ ಕಾರ್ಯಪ್ರವೃತ್ತರಾಗಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಧ್ವನಿವರ್ಧಕದ ಮೂಲಕ ಪ್ರೇಕ್ಷಕರಿಗೆ ಸಮಾಧಾನವಾಗಿರುವಂತೆ ಸೂಚನೆ ನೀಡಲಾಯಿತು. ಅಂತಿಮವಾಗಿ ಹುಲಿಯನ್ನು ಸುರಕ್ಷಿತವಾಗಿ ಪಂಜರಕ್ಕೆ ಸಾಗಿಸಲಾಗಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸರ್ಕಸ್ ನಿರ್ದೇಶಕ ನಿಕೋಲಾಯ್ ಡೋವ್ಗಾಲುಕ್ ಮಾತನಾಡಿ, “ಇವು ತರಬೇತಿ ಪಡೆದ ಹುಲಿಗಳಾಗಿದ್ದವು. ಪ್ರೇಕ್ಷಕರಿಗೆ ನೂರಕ್ಕೆ ನೂರರಷ್ಟು ಅಪಾಯವಿರಲಿಲ್ಲ ಎಂದು ಹೇಳಲಾಗದು, ಆದರೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ” ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

ಸೇಫ್ಟಿ ನೆಟ್ ಕುಸಿದು ಬೀಳಲು ಯಾಂತ್ರಿಕ ದೋಷ ಮತ್ತು ಮಾನವ ಸಹಜ ತಪ್ಪು ಈ ಘಟನೆಗೆ ಕಾರಣ ಎಂದು ಅವರು ಒಪ್ಪಿಕೊಂಡಿದ್ದಾರೆ.
ಈ ಗಂಭೀರ ಭದ್ರತಾ ಲೋಪವನ್ನು ರಷ್ಯಾ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ರಷ್ಯಾದ ತನಿಖಾ ಸಮಿತಿಯು ಈ ಬಗ್ಗೆ ಕ್ರಿಮಿನಲ್ ತನಿಖೆಯನ್ನು ಪ್ರಾರಂಭಿಸಿದ್ದು, ಸಾರ್ವಜನಿಕರ ಸುರಕ್ಷತೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement