ಮೈಸೂರು: ತಾಯಿಯೊಬ್ಬಳು ತನ್ನ ಮಗನ ಅತಿಯಾದ ಕುಡಿತದ ಚಟ ಮತ್ತು ಆತ ನೀಡುತ್ತಿದ್ದ ನಿರಂತರ ಕಿರುಕುಳ ತಾಳಲಾರದೆ ಆತನನ್ನೇ ಸಾಯಿಸಿದ ಘಟನೆ ವರದಿಯಾಗಿದೆ. ಪೊಲೀಸರು ಈ ಭೀಕರ ಕೊಲೆ ಪ್ರಕರಣವನ್ನು ಭೇದಿಸಿದ್ದು, 61 ವರ್ಷದ ಮಂಜುಳ ಎಂಬಾಕೆಯನ್ನು ಬಂಧಿಸಿದ್ದಾರೆ.
ಕೇಸರೆಯ ಕುರಿಮಂಡಿ ನಿವಾಸಿ ರಮೇಶ (44) ಕೊಲೆಯಾದವ ಎಂದು ಗುರುತಿಸಲಾಗಿದೆ. ಏಪ್ರಿಲ್ 15ರಂದು ಚಾಮುಂಡಿ ಬೆಟ್ಟದ ತಪ್ಪಲಿನ ತಾವರೆಕಟ್ಟೆ ಸಮೀಪ ತಲೆ ಜಜ್ಜಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರಿಗೆ ಆರಂಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಪೊಲೀಸ್ ತನಿಖೆಯ ವೇಳೆ ಮಂಜುಳ ಅವರ ಕರುಣಾಜನಕ ಕಥೆ ಬೆಳಕಿಗೆ ಬಂದಿದೆ. ಮಂಜುಳ ಅವರಿಗೆ ಇಬ್ಬರು ಗಂಡು ಮಕ್ಕಳು. ಹಿರಿಯ ಮಗ ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದರೆ, ಎರಡನೇ ಮಗ ರಮೇಶ ಕೆಲಸಕ್ಕೆ ಹೋಗದೆ ಕುಡಿತಕ್ಕೆ ದಾಸನಾಗಿದ್ದ. ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿದ್ದ ತಾಯಿಯ ಬಳಿ ಕುಡಿಯಲು ಹಣಕ್ಕಾಗಿ ರಮೇಶ ನಿರಂತರವಾಗಿ ಜಗಳವಾಡುತ್ತಿದ್ದ. ಹಣ ನೀಡದಿದ್ದಾಗ ಆಕೆಗೆ ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
ವರ್ಷಗಳಿಂದ ಈ ನೋವನ್ನು ಅನುಭವಿಸುತ್ತಿದ್ದ ಮಂಜುಳ, ಏಪ್ರಿಲ್ 14ರಂದು ಬೆಳಿಗ್ಗೆ ರಮೇಶನನ್ನು ತಾವರೆಕಟ್ಟೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ದೊಣ್ಣೆಯಿಂದ ಹೊಡೆದು ನಂತರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಯಾವುದೇ ಸುಳಿವು ಇಲ್ಲದ ಈ ಪ್ರಕರಣವನ್ನು ಭೇದಿಸಲು ಮೈಸೂರು ಪೊಲೀಸರು ಸರಿಸುಮಾರು 200ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಜಾಲಾಡಿದ್ದಾರೆ. ರಮೇಶ ಧರಿಸಿದ್ದ ಶಾರ್ಟ್ಸ್ (Shorts) ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ಸಿಸಿಟಿವಿ ದೃಶ್ಯಾವಳಿಯಲ್ಲಿ ಅದೇ ರೀತಿಯ ಶರ್ಟ್ಸ್ ಧರಿಸಿದ್ದ ವ್ಯಕ್ತಿ ಆಟೋರಿಕ್ಷಾದಲ್ಲಿ ಹೋಗುತ್ತಿರುವುದು ಕಂಡುಬಂತು.
ಆರೋಪಿ ಮಂಜುಳ ಮತ್ತು ಮಗ ರಮೇಶ ಕೊಲೆ ನಡೆದ ಸ್ಥಳಕ್ಕೆ ತಲುಪಲು ಕೇಸರೆಯಿಂದ ಜಯದೇವ ಆಸ್ಪತ್ರೆ ವರೆಗೆ ಹಾಗೂ ಅಲ್ಲಿಂದ ಬೇರೆ ಬೇರೆ ಆಟೋಗಳಲ್ಲಿ ಒಟ್ಟು ಮೂರು ಬಾರಿ ಆಟೋ ಬದಲಿಸಿರುವುದು ಪತ್ತೆಯಾಯಿತು. ಅನುಮಾನದ ಮೇಲೆ ಮಂಜುಳ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅವರು ತಾವು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಮಂಜುಳ ಅವರನ್ನು ಪ್ರಸ್ತುತ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ