ವಿಡಿಯೋ..| 3 ತಿಂಗಳ ಮಗುವನ್ನು 2 ತಾಸು ಒತ್ತೆ ಇರಿಸಿಕೊಂಡ ಮಂಗ : ಇದರ ಹಿಂದಿನ ಕಾರಣ ತಿಳಿದರೆ ಕಣ್ಣಾಲಿಗಳು ಒದ್ದೆಯಾಗುತ್ತವೆ…!

ಮನೆಯೊಳಗೆ ಇದ್ದ ಹಸುಗೂಸು, ಒಳಗೆ ನುಗ್ಗಿದ ಕೋತಿಯ ಕಪಿಮುಷ್ಠಿಯಲ್ಲಿ ಸಿಲುಕಿದರೆ ಹೇಗಿರುತ್ತದೆ? ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದ ಈ ಘಟನೆ ಕೇವಲ ಸುದ್ದಿಯಲ್ಲ, ಅದು ಆಶ್ಚರ್ಯಚಕಿತಗೊಳಿಸುವ ಮತ್ತು ಆತಂಕಕ್ಕೀಡು ಮಾಡುವ ಘಟನೆಯೊಂದು ನಡೆದಿದೆ. ಮಂಗವೊಂದು ಮನೆಯೊಳಗೆ ನುಗ್ಗಿ ಕೇವಲ ಮೂರು ತಿಂಗಳ ಹಸುಗೂಸಿನ ಬಳಿ ಸುಮಾರು ಎರಡು ಗಂಟೆಗಳ ಕಾಲ ಕಾಲ ಕಳೆದಿದ್ದು, ಇಡೀ ನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಅದು ಮುಜಾಫರ್‌ನಗರದ ಒಂದು ಸಾಧಾರಣ ಮನೆ. ಮನೆಯವರು ತಮ್ಮ ದೈನಂದಿನ ಕೆಲಸಗಳಲ್ಲಿ ನಿರತರಾಗಿದ್ದರು. ಮನೆಯ ಒಂದು ಕೋಣೆಯಲ್ಲಿ ಮೂರು ತಿಂಗಳ ಮಗು ಮಲಗಿತ್ತು. ಈ ಸಂದರ್ಭದಲ್ಲಿ ಮನೆಯ ಮೇಲ್ಛಾವಣಿಯ ಮೂಲಕ ಗುಪ್ತವಾಗಿ ಪ್ರವೇಶಿಸಿದ ಮಂಗವೊಂದು ಮಗು ಮಲಗಿದ್ದ ಕೋಣೆಗೆ ಬಂದಿದೆ. ಅಚ್ಚರಿಯೆಂದರೆ, ಮಗುವಿನ ಮೇಲೆ ದಾಳಿ ಮಾಡುವ ಬದಲು ಆ ಮಂಗವು ಮಗುವಿನ ಪಕ್ಕದಲ್ಲೇ ಕುಳಿತುಕೊಂಡಿತು. ಮಗುವನ್ನು ಅತ್ಯಂತ ಮೃದುವಾಗಿ ಸ್ಪರ್ಶಿಸುತ್ತಾ, ಯಾವುದೋ ಒಂದು ರೀತಿಯ ಮಮತೆಯನ್ನು ತೋರಿಸತೊಡಗಿತು.

ಮಗುವಿದ್ದ ಕೊಣೆಯಿಂದ ಶಬ್ದ ಬರುತ್ತಿರುವುದನ್ನು ಗಮನಿಸಿದ ತಾಯಿ ಓಡಿ ಬಂದಾಗ ಕಂಡ ದೃಶ್ಯಕ್ಕೆ ಅವಳು ಕ್ಷಣಕಾಲ ಸ್ತಬ್ಧಳಾದಳು. ತನ್ನ ಹಸುಗೂಸಿನ ಪಕ್ಕದಲ್ಲೇ ಮಂಗ ಕುಳಿತಿರುವುದನ್ನು ಕಂಡು ಆಕೆ ಕಿರುಚಿಕೊಂಡಳು. ತಕ್ಷಣವೇ ಅಕ್ಕಪಕ್ಕದವರು ಸಹ ಮನೆಯ ಮುಂದೆ ಜಮಾಯಿಸಿದರು. ಆದರೆ, ಯಾರೂ ಆ ಕೋಣೆಯೊಳಗೆ ಹೋಗುವ ಸಾಹಸ ಮಾಡಲಿಲ್ಲ. ಏಕೆಂದರೆ, ಸಣ್ಣ ತಪ್ಪು ನಡೆದರೂ ಮಗುವಿನ ಪ್ರಾಣಪಕ್ಷಿ ಹಾರಿಹೋಗುವ ಭೀತಿ ಎದುರಾಗಿತ್ತು.
ಹೀಗಾಗಿ ಮಂಗವನ್ನು ಓಡಿಸಲು ಕೋಲುಗಳನ್ನು ತೋರಿಸಿದರು, ಇನ್ನು ಕೆಲವರು ಮಗುವಿನಿಂದ ದೂರ ಹೋಗಲಿ ಎಂಬ ಉದ್ದೇಶದಿಂದ ಅದಕ್ಕೆ ತಿನ್ನಲು ಆಹಾರವನ್ನೂ ನೀಡಿದರು. ಹಣ್ಣು-ಹಂಪಲುಗಳನ್ನು ಎಸೆದು ಮಗುವಿನಿಂದ ದೂರ ಸೆಳೆಯಲು ಪ್ರಯತ್ನಿಸಿದರು. ಆದರೆ ಆ ವಾನರ ಯಾವುದಕ್ಕೂ ಜಗ್ಗಲಿಲ್ಲ. ಮಗುವಿನ ಮೇಲೆ ಕೈ ಇಡುತ್ತಾ, ಮೃದುವಾಗಿ ಸ್ಪರ್ಶಿಸುತ್ತಾ ಯಾರಾದರೂ ಹತ್ತಿರ ಬರಲು ಪ್ರಯತ್ನಿಸಿದರೆ ಗರ್ಜಿಸುತ್ತಿತ್ತು. ಏನೇ ಮಾಡಿದರೂ ಅದು ಮಗುವಿನ ಬಳಿಯಿಂದ ಕದಲಲೇ ಇಲ್ಲ. ಎರಡು ಗಂಟೆಗಳ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ವಿಶಿಷ್ಟ ರಕ್ಷಣಾ ಕಾರ್ಯಾಚರಣೆ:
ಸ್ಥಿತಿಯ ಗಂಭೀರತೆಯನ್ನು ಅರಿತ ಪ್ರಾಣಿ ಸಂರಕ್ಷಕ ಸನ್ನಿ ಚೋಪ್ರಾ ಮತ್ತು ಅವರ ತಂಡ ಸ್ಥಳಕ್ಕೆ ಧಾವಿಸಿತು. ಬಲಪ್ರಯೋಗ ಮಾಡಿದರೆ ಮಗುವಿಗೆ ಅಪಾಯವಾಗಬಹುದು ಎಂದು ಅರಿತ ಅವರು ಅತ್ಯಂತ ಶಾಂತ ರೀತಿಯಲ್ಲಿ ಕಾರ್ಯಾಚರಣೆ ನಡೆಸಲು ನಿರ್ಧರಿಸಿದರು. ಹಲವು ಪ್ರಯತ್ನಗಳು ವಿಫಲವಾದಾಗ ಅವರು ಒಂದು ಹೊಸ ಉಪಾಯ ಮಾಡಿದರು. “ಪ್ರಾಣಿಗಳಿಗೂ ಕುತೂಹಲವಿರುತ್ತದೆ” ಎಂಬ ಸತ್ಯವನ್ನು ಬಳಸಿಕೊಂಡ ಅವರು, ಮಂಗದ ಗಮನವನ್ನು ಬೇರೆಡೆಗೆ ಸೆಳೆಯಲು ಮೊಬೈಲ್‌ನಲ್ಲಿ ವನ್ಯಜೀವಿಗಳ (Wildlife) ವಿಡಿಯೋಗಳನ್ನು ಪ್ರದರ್ಶಿಸಿದರು. ವಿಡಿಯೋ ನೋಡುವ ಆತುರದಲ್ಲಿ ಕೋತಿಯ ಗಮನ ಕ್ಷಣಕಾಲ ಬೇರೆಡೆಗೆ ಹರಿಯಿತು. ಡಿಜಿಟಲ್ ಪರದೆಯ ಮೋಡಿಗೆ ಒಳಗಾದ ಕೋತಿಯ ಗಮನ ಕೇವಲ 10 ಸೆಕೆಂಡ್ ಬೇರೆಡೆಗೆ ಮೊಬೈಲ್‌ ಕಡೆಗೆ ಹರಿಯಿತು. ಅದೇ ಕ್ಷಣದಲ್ಲಿ ಮಿಂಚಿನ ವೇಗದಲ್ಲಿ ನುಗ್ಗಿದ ರಕ್ಷಣಾ ತಂಡ ಮಗುವನ್ನು ಎತ್ತಿಕೊಂಡು ಹೊರಬಂದಿತು.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಆ ಘಟನೆಯ ಹಿಂದಿನ ಕರುಣಾಜನಕ ಸತ್ಯ:
ಈ ಎಲ್ಲ ನಾಟಕೀಯ ಬೆಳವಣಿಗೆಗಳ ನಂತರ ಒಂದು ಮಹತ್ವದ ವಿಷಯ ಬೆಳಕಿಗೆ ಬಂದಿದೆ. ಘಟನೆಯ ನಂತರ ತಿಳಿದುಬಂದ ಸತ್ಯ ಇಡೀ ಊರನ್ನೇ ಭಾವುಕಗೊಳಿಸಿತು.ಆ ಕೋತಿಯು ಕೆಲವು ದಿನಗಳ ಹಿಂದೆಯಷ್ಟೇ ತನ್ನ ಮರಿಯನ್ನು ಕಳೆದುಕೊಂಡಿತ್ತು ಎನ್ನಲಾಗಿದೆ. ಬಹುಶಃ ಆ ದುಃಖದಲ್ಲಿದ್ದ ಕೋತಿಯು ಈ ಹಸುಗೂಸನ್ನು ತನ್ನದೇ ಮರಿ ಎಂದು ಭಾವಿಸಿರಬಹುದು ಅಥವಾ ಮಗುವಿನಲ್ಲಿ ತನ್ನ ಮರಿಯನ್ನು ಕಂಡಿರಬಹುದು ಎಂಬ ಚರ್ಚೆಗಳು ನಡೆದಿವೆ. ಆ ಕೋತಿಯು ಇತ್ತೀಚೆಗಷ್ಟೇ ತನ್ನ ಮರಿಯನ್ನು ಕಳೆದುಕೊಂಡಿತ್ತು.
ನಮಗೆ ಅಪಾಯವೆಂದು ಕಂಡ ಘಟನೆಯ ಹಿಂದೆ ಒಮ್ಮೊಮ್ಮೆ ನಮಗೆ ಅರ್ಥವಾಗದ ಮೌನ ನೋವು ಅಥವಾ ಕಥೆಯೂ ಇರಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಸದ್ಯ ಮಗು ಸುರಕ್ಷಿತವಾಗಿದ್ದು, ಕುಟುಂಬದವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

5 / 5. 3

ನಿಮ್ಮ ಕಾಮೆಂಟ್ ಬರೆಯಿರಿ

advertisement