ನವದೆಹಲಿ: ಕ್ಷುಲ್ಲಕ ಕಾರಣಕ್ಕಾಗಿ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ದೆಹಲಿ ಪೊಲೀಸ್ ಪೇದೆಯೊಬ್ಬ ಫುಡ್ ಡೆಲಿವರಿ ಏಜೆಂಟ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಭಾನುವಾರ ದ್ವಾರಕಾದಲ್ಲಿ ನಡೆದಿದೆ. ಈ ಘಟನೆಯಲ್ಲಿ ಮೃತನ ಸ್ನೇಹಿತನಿಗೂ ಗಂಭೀರ ಗಾಯಗಳಾಗಿವೆ.
ದ್ವಾರಕಾದ ಜಾಫರ್ಪುರ ಕಲನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ದಿನಗೂಲಿ ಕಾರ್ಮಿಕರಾದ ರೂಪೇಶ ಎಂಬವರು ತಮ್ಮ ಮಗನ ಎರಡನೇ ವರ್ಷದ ಜನ್ಮದಿನದ ಸಂಭ್ರಮಕ್ಕಾಗಿ ಪಾರ್ಟಿ ಆಯೋಜಿಸಿದ್ದರು. ಸುಮಾರು 20 ಮಂದಿ ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಕೇಕ್ ಕತ್ತರಿಸುವ ಕಾರ್ಯಕ್ರಮ ಮುಗಿದ ನಂತರ ಅತಿಥಿಗಳು ಮನೆಗೆ ಮರಳುತ್ತಿದ್ದರು.
ತಡರಾತ್ರಿ ಸುಮಾರು 2.00 ಗಂಟೆಯ ಸುಮಾರಿಗೆ, ಕೆಲವರು ಕ್ಯಾಬ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಆರು ಮಂದಿ ದ್ವಿಚಕ್ರ ವಾಹನದ ಮೇಲೆ ಕುಳಿತು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಹತ್ತಿರದಲ್ಲೇ ಬಾಡಿಗೆಗೆ ವಾಸವಿದ್ದ ದೆಹಲಿ ಪೊಲೀಸ್ ಕಾನ್ಸ್ಟೇಬಲ್ ನೀರಜ ಎಂಬುವವರು ಅಲ್ಲಿಗೆ ಬಂದು, ಅತ್ಯಂತ ಕ್ಷುಲ್ಲಕ ವಿಷಯಕ್ಕೆ ಜಗಳ ಆರಂಭಿಸಿದ್ದಾರೆ ಎನ್ನಲಾಗಿದೆ.
ಜಗಳ ತಾರಕಕ್ಕೇರಿದಾಗ, ನೀರಜ ಇದ್ದಕ್ಕಿದ್ದಂತೆ ತನ್ನ ಬಳಿಯಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾರೆ. ಈ ವೇಳೆ ಬೈಕ್ ಮೇಲೆ ಕುಳಿತಿದ್ದ ಫುಡ್ ಡೆಲಿವರಿ ಏಜೆಂಟ್ ಪಾಂಡವಕುಮಾರ ಅವರ ಎದೆಗೆ ಗುಂಡು ತಗುಲಿದೆ. ಪಾಂಡವ ಅವರ ದೇಹವನ್ನು ಸೀಳಿಕೊಂಡು ಹೋದ ಗುಂಡು, ಅವರ ಹಿಂದೆ ಕುಳಿತಿದ್ದ ಕೃಷ್ಣ ಎಂಬುವವರ ಹೊಟ್ಟೆಗೆ ತಗುಲಿದೆ.
ಕೂಡಲೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪಾಂಡವಕುಮಾರ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಕೃಷ್ಣ ಅವರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿ ನೀರಜ ಹರಿಯಾಣದ ರೋಹ್ಟಕ್ ಮೂಲದವನಾಗಿದ್ದು, ದೆಹಲಿ ಪೊಲೀಸರ ಸ್ಪೆಷಲ್ ಸೆಲ್ ಯುನಿಟ್‌ನಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾನೆ. ಕಳೆದ 15 ವರ್ಷಗಳಿಂದ ರಾವ್ತಾ ಗ್ರಾಮದಲ್ಲಿ ಒಬ್ಬನೇ ವಾಸವಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿ ನೀರಜನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿದಿದೆ.


ನಿಮ್ಮ ಕಾಮೆಂಟ್ ಬರೆಯಿರಿ