
ಪುಣೆ : ಪುಣೆಯ ಶಿರೂರು ತಾಲ್ಲೂಕಿನ ಜೋಶಿವಾಡಿಯಲ್ಲಿ ನಡೆದ ಘಟನೆಯೊಂದು ಮನುಷ್ಯನ ಅಸಹಾಯಕತೆ ಮತ್ತು ಅಷ್ಟೇ ವೇಗವಾಗಿ ಸ್ಪಂದಿಸುವ ಮಾನವೀಯತೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರ ನೆರವಿಗೆ ಧಾವಿಸಿದ ವೈದ್ಯೆ ಹಾಗೂ ಸಾರ್ವಜನಿಕರು ಈ ಮಹಿಳೆಗೆ ನಡುರಸ್ತೆಯಲ್ಲಿಯೇ ಹೆರಿಗೆ ಮಾಡಿಸಿದ್ದಾರೆ.
ಬೆಳ್ಳಂಬೆಳಗ್ಗೆ ಗರ್ಭಿಣಿಯೊಬ್ಬರಿಗೆ ತೀವ್ರವಾದ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಶಿರೂರು ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬದವರು ಮುಂದಾದರು. ಆದರೆ, ಆಸ್ಪತ್ರೆಗೆ ಅತ್ಯಂತ ಹತ್ತಿರವಿರುವಾಗಲೇ ನೋವು ಅಸಹನೀಯವಾಗಿ ಆಕೆ ಒಂದು ಹೆಜ್ಜೆಯೂ ಮುಂದೆ ಇಡಲಾರದ ಸ್ಥಿತಿಗೆ ತಲುಪಿದರು. ಅನಿವಾರ್ಯವಾಗಿ ಆಕೆ ನಡುರಸ್ತೆಯಲ್ಲೇ ಕುಳಿತುಬಿಟ್ಟರು. ಇದನ್ನು ಅಕ್ಕಪಕ್ಕದವರು ಹಾಗೂ ದಾರಿಹೋಕರು ಸಹಾಯಕ್ಕಾಗಿ ಧಾವಿಸಿ ಬಂದರು.

ಸಮಯದ ವಿರುದ್ಧ ಓಟ
ಪ್ರತಿ ಕ್ಷಣವೂ ತಾಯಿ ಮತ್ತು ಮಗುವಿನ ಜೀವಕ್ಕೆ ಅತ್ಯಂತ ನಿರ್ಣಾಯಕವಾಗಿತ್ತು. ಆಸ್ಪತ್ರೆ ಸಮೀಪವೇ ಇದ್ದರೂ ಆಕೆಯನ್ನು ಅಲ್ಲಿಗೆ ಕರೆದೊಯ್ಯುವುದು ಅಸಾಧ್ಯವಾಗಿತ್ತು. ಕೂಡಲೇ ಸ್ಥಳೀಯ ನಿವಾಸಿಗಳು ಪರಿಸ್ಥಿತಿಯನ್ನು ನಿಭಾಯಿಸಲು ಮುಂದಾದರು. ಆತಂಕದ ವಾತಾವರಣ ಮನೆಮಾಡಿದ್ದ ಆ ಕ್ಷಣದಲ್ಲಿ ಸ್ಥಳೀಯರು ಸಮೀಪದಲ್ಲೇ ಇದ್ದ ಡಾ. ಸುನಿತಾ ಪೋಟೆ ಅವರಿಗೆ ವಿಷಯ ಮುಟ್ಟಿಸಿದರು.
ಮಾಹಿತಿ ಸಿಗುತ್ತಿದ್ದಂತೆಯೇ ಕಿಂಚಿತ್ತೂ ವಿಳಂಬ ಮಾಡದೆಡಾ. ಸುನಿತಾ ಪೋಟೆ ಅವರು ಸ್ಥಳಕ್ಕೆ ದೌಡಾಯಿಸಿದರು. ಗರ್ಭಿಣಿಯ ಸ್ಥಿತಿಯನ್ನು ಪರಿಶೀಲಿಸಿದಾಗ, ಆಕೆಯನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸುವುದು ತಾಯಿ-ಮಗು ಇಬ್ಬರಿಗೂ ಅಪಾಯಕಾರಿ ಎಂದು ಅವರಿಗೆ ಮನವರಿಕೆಯಾಯಿತು. ಯಾವುದೇ ತಪ್ಪು ನಿರ್ಧಾರ ಅಥವಾ ವಿಳಂಬವು ಪ್ರಾಣಕ್ಕೆ ಕುತ್ತು ತರಬಲ್ಲ ಸಂದರ್ಭ ಅದಾಗಿತ್ತು.
ರಸ್ತೆಯನ್ನೇ ಹೆರಿಗೆ ಕೋಣೆಯನ್ನಾಗಿಸಿದ ಮಹಿಳೆಯರು
ಯಾವುದೇ ಸುಸಜ್ಜಿತ ವೈದ್ಯಕೀಯ ಉಪಕರಣಗಳಿಲ್ಲದಿದ್ದರೂ, ಡಾ. ಪೋಟೆ ಅವರು ಧೈರ್ಯದಿಂದ ರಸ್ತೆಯಲ್ಲೇ ಹೆರಿಗೆ ಮಾಡಿಸಲು ನಿರ್ಧರಿಸಿದರು. ತಮ್ಮ ಸುದೀರ್ಘ ಅನುಭವವನ್ನು ಬಳಸಿಕೊಂಡು ಅತ್ಯಂತ ಶಾಂತಚಿತ್ತದಿಂದ ಹೆರಿಗೆಯ ಪ್ರಕ್ರಿಯೆ ಆರಂಭಿಸಿದರು. ಸ್ಥಳೀಯ ನಿವಾಸಿಗಳು ಕೂಡ ತಮಗೆ ಸಾಧ್ಯವಾದ ರೀತಿಯಲ್ಲಿ ನೆರವು ನೀಡಿದರು. ತುರ್ತು ಹೆರಿಗೆಯ ಸಮಯದಲ್ಲಿ ಗೌಪ್ಯತೆ ಮತ್ತು ಘನತೆಯನ್ನು ಖಾತ್ರಿಪಡಿಸಿಕೊಳ್ಳಲು, ಗರ್ಭಿಣಿ ಸುತ್ತಲೂ ತಾತ್ಕಾಲಿಕ ಆವರಣವನ್ನು ರಚಿಸಲು ಮಹಿಳೆಯರು ಸುತ್ತುವರೆದು ತಮ್ಮ ಸೀರೆ ಹಾಗೂ ದುಪಟ್ಟಾವನ್ನೇ ಪರದೆಯಂತೆ ಹಿಡಿದು ಹೆರಿಗೆಗೆ ಸಹಾಯ ಮಾಡಿದರು. ಪುರುಷರು ವಾಹನಗಳ ಸಂಚಾರವನ್ನು ತಡೆದು ರಸ್ತೆಯಲ್ಲಿ ಹೆರಿಗೆಗೆ ದಾರಿ ಮಾಡಿಕೊಟ್ಟರು. ಅಲ್ಲಿ ಯಾರು ಯಾರಿಗೆ ಸಂಬಂಧಿಕರಲ್ಲದಿದ್ದರೂ, ತಾಯಿ ಮತ್ತು ಮಗುವನ್ನು ರಕ್ಷಿಸುವ ಏಕೈಕ ಉದ್ದೇಶದಿಂದ ಅವರೆಲ್ಲ ಒಂದುಗೂಡಿದ್ದರು.
ಮಗುವಿನ ಅಳು ತಂದ ನೆಮ್ಮದಿ
ಹಲವು ನಿಮಿಷಗಳ ಉದ್ವಿಗ್ನತೆಯ ನಂತರ, ನವಜಾತ ಶಿಶುವಿನ ಅಳು ಕೇಳಿಸಿತು. ಆ ಒಂದು ಸಣ್ಣ ಧ್ವನಿ ಅಲ್ಲಿದ್ದವರ ಆತಂಕವನ್ನೆಲ್ಲಾ ದೂರ ಮಾಡಿ ಮುಖದಲ್ಲಿ ಮಂದಹಾಸ ಮೂಡಿಸಿತು. ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದಾಗ ಕುಟುಂಬದವರು ಮತ್ತು ನೆರೆದಿದ್ದ ಸಾರ್ವಜನಿಕರು ನಿಟ್ಟುಸಿರು ಬಿಟ್ಟರು. ನಂತ ಆಂಬುಲೆನ್ಸ್ ಮೂಲಕ ತಾಯಿ-ಮಗುವನ್ನು ಆಸ್ಪತ್ರೆಗೆ ಕಳುಹಿಸಲಾಯಿತು
ಮಾನವೀಯತೆಗೆ ಸಂದ ಗೌರವ
ಡಾ. ಸುನಿತಾ ಪೋಟೆ ಅವರ ಸಮಯಪ್ರಜ್ಞೆ, ಧೈರ್ಯ ಮತ್ತು ಕರ್ತವ್ಯ ನಿಷ್ಠೆ ಈಗ ತಾಲ್ಲೂಕಿನಾದ್ಯಂತ ಚರ್ಚೆಯ ವಿಷಯವಾಗಿದೆ. ಒತ್ತಡದ ಪರಿಸ್ಥಿತಿಯಲ್ಲೂ ಪ್ರಾಣ ಉಳಿಸುವ ನಿರ್ಧಾರ ಕೈಗೊಂಡ ಅವರನ್ನು ಸ್ಥಳೀಯರು ಕೊಂಡಾಡಿದ್ದಾರೆ. ವೃತ್ತಿಧರ್ಮದೊಂದಿಗೆ ಮಾನವೀಯತೆ ಬೆರೆತರೆ ಅದ್ಭುತಗಳನ್ನೇ ಸೃಷ್ಟಿಸಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ