ಸಿನಿಮೀಯ ಸ್ಟೈಲ್‌ನಲ್ಲಿ ಐಎಎಸ್ ಕೋಚಿಂಗ್‌ ಅಕಾಡೆಮಿ ನಿರ್ದೇಶಕಿ ಅಪಹರಣ: 1.89 ಕೋಟಿ ರೂ. ಸುಲಿಗೆ ಮಾಡಿ ಆಸ್ಪತ್ರೆ ಐಸಿಯುವಿನಲ್ಲಿ ಅಡಗಿದ್ದ ಆರೋಪಿ…!

ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಅತ್ಯಂತ ಭೀಕರ ಹಾಗೂ ಸಿನಿಮೀಯ ಮಾದರಿಯ ಹೈಪ್ರೊಫೈಲ್‌  ಅಪಹರಣ ಹಾಗೂ ಸುಲಿಗೆ ಪ್ರಕರಣವೊಂದು ನಡೆದಿದೆ. ದೆಹಲಿ ಮೂಲದ ಪ್ರಖ್ಯಾತ ‘ಶುಭ್ರಾ ರಂಜನ್ ಐಎಎಸ್ ಅಕಾಡೆಮಿ’ಯ ನಿರ್ದೇಶಕಿಯನ್ನು ಅಪಹರಿಸಿ, ನಾಲ್ಕು ಗಂಟೆಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡು, ಹಣೆ ಮೇಲೆ ಪಿಸ್ತೂಲ್ ಇಟ್ಟು ಬರೋಬ್ಬರಿ 1.89 ಕೋಟಿ ರೂಪಾಯಿಗಳನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ.
ವಿಪರ್ಯಾಸವೆಂದರೆ, ಈ ಮಾಸ್ಟರ್‌ಮೈಂಡ್ ಬೇರೆ ಯಾರೂ ಅಲ್ಲ, ಅದೇ ಅಕಾಡೆಮಿಯ ಭೋಪಾಲ್ ಫ್ರಾಂಚೈಸಿ ನಡೆಸುತ್ತಿದ್ದವನೇ ಈ ಕೃತ್ಯದ ಸಂಚು ರೂಪಿಸಿದ್ದಾನೆ ಎಂದು ಹೇಳಲಾಗಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಅಕಾಡೆಮಿಯ ಫ್ರಾಂಚೈಸಿ ನಡೆಸುತ್ತಿದ್ದ ಪ್ರಿಯಾಂಕ್ ಶರ್ಮಾ ಎಂಬಾತ ಶುಭ್ರಾ ರಂಜನ್ ಅವರನ್ನು ದೆಹಲಿಯಿಂದ ಭೋಪಾಲ್‌ಗೆ ಕರೆಸಿಕೊಂಡಿದ್ದ. ಹೊಸ ಕೇಂದ್ರದ ಉದ್ಘಾಟನೆ, ಸೆಮಿನಾರ್ ಮತ್ತು ಸಂಸ್ಥೆಯ ವಿಸ್ತರಣೆಯ ಬಗ್ಗೆ ಚರ್ಚಿಸೋಣ ಎಂದು ನಂಬಿಸಿ ಅವರನ್ನು ಆಹ್ವಾನಿಸಿದ್ದ. ಇದನ್ನು ನಂಬಿ ಭೋಪಾಲ್‌ಗೆ ಬಂದ ಶುಭ್ರಾ ರಂಜನ್ ನಗರದ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದರು.
ಬುಧವಾರ ಮಧ್ಯಾಹ್ನ 2 ರಿಂದ 3 ಗಂಟೆಯ ಸುಮಾರಿಗೆ ಶುಭ್ರಾ ಅವರನ್ನು  ಪ್ರಿಯಾಂಕ್ ಹೋಟೆಲ್‌ನಿಂದ ಪಿಕಪ್ ಮಾಡಿಕೊಂಡು ಬಾಗ್ಸೆವಾನಿಯಾ ಪ್ರದೇಶದ ಬಾಡಿಗೆ ಫ್ಲಾಟ್‌ವೊಂದಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಆಗಲೇ ಹೊಂಚು ಹಾಕಿ ಕುಳಿತಿದ್ದ ಸಶಸ್ತ್ರ ದುಷ್ಕರ್ಮಿಗಳು ನಿರ್ದೇಶಕಿ ಶುಭ್ರಾ ಮತ್ತು ಅವರ ಸಹಚರರನ್ನು ಕೂಡಿ ಹಾಕಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಚೀರಾಟ ಕೇಳಿಸದಂತೆ ‘ಸುಂದರಕಾಂಡ ಪಾರಾಯಣ’ದ ನಾಟಕ!
ಈ ಅಪರಾಧದ ಹಿಂದಿನ ಕ್ರೌರ್ಯ ಎಷ್ಟಿತ್ತೆಂದರೆ, ಶುಭ್ರಾ ರಂಜನ್ ಅವರು ಸಹಾಯಕ್ಕಾಗಿ ಕೂಗಾಡಿದರೆ ಯಾರಿಗೂ ಕೇಳಿಸಬಾರದು ಎಂಬ ಕಾರಣಕ್ಕೆ ಅದೇ ಫ್ಲಾಟ್‌ನಲ್ಲಿ ‘ಸುಂದರಕಾಂಡ ಪಾರಾಯಣ’ (ಧಾರ್ಮಿಕ ಪಠಣ) ಆಯೋಜಿಸಲಾಗಿತ್ತು. ಸುಂದರಕಾಂಡ ಪಾರಾಯಣದ ಹೆಸರಿನಲ್ಲಿ ಜೋರಾಗಿ ಮೈಕ್ ನಲ್ಲಿ ಪಠಣ ಮಾಡುವುದರ ಮೂಲಕ ಸಂತ್ರಸ್ತೆಯ ಕಿರುಚಾಟವು ಹೊರಗೆ ಹೋಗದಂತೆ ಆರೋಪಿಗಳು ಮುನ್ನೆಚ್ಚರಿಕೆ ವಹಿಸಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.
ಸುಲಿಗೆ ಮತ್ತು ಬೆದರಿಕೆ ವಿಡಿಯೋ
ಬಂದೂಕಿನ ಮೊನೆಯಲ್ಲಿ ಬೆದರಿಸಿ, ‘ಜನಕಶಿಲಾ ಸೊಸೈಟಿ’ ಮತ್ತು ‘ಆರ್.ಎಸ್ ಎಂಟರ್‌ಪ್ರೈಸಸ್’ ಖಾತೆಗಳಿಗೆ 1.89 ಕೋಟಿ ರೂ. ಹಣವನ್ನು ವರ್ಗಾಯಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಪೊಲೀಸರಿಗೆ ದೂರು ನೀಡದಂತೆ ಹೆದರಿಸಲು ಆರೋಪಿಗಳು ಒಂದು ವಿಡಿಯೋ ಚಿತ್ರೀಕರಿಸಿದ್ದಾರೆ. ಅದರಲ್ಲಿ ವ್ಯಕ್ತಿಯೊಬ್ಬನನ್ನು ಹಗ್ಗದಿಂದ ಕಟ್ಟಿ ಬಾಕ್ಸ್‌ನಲ್ಲಿ ಕೂಡಿಹಾಕಿದ ದೃಶ್ಯಗಳಿದ್ದು, “ದೂರು ನೀಡಿದರೆ ನಿಮ್ಮ ಸಹಚರರಿಗೂ ಇದೇ ಗತಿ ಉಂಟಾಗುತ್ತದೆ” ಎಂದು ಹೆದರಿಸಿ ಬ್ಲ್ಯಾಕ್‌ಮೇಲ್ ಮಾಡಲಾಗಿತ್ತು.
ಆಸ್ಪತ್ರೆಯ ಐಸಿಯುನಲ್ಲಿ ಅಡಗಿದ್ದ ಆರೋಪಿ!
ಹಣ ವರ್ಗಾವಣೆಯಾದ ನಂತರ ಸಂತ್ರಸ್ತೆಯನ್ನು ಬಿಡುಗಡೆ ಮಾಡಲಾಯಿತು. ಕೂಡಲೇ ದೆಹಲಿ ನಿವಾಸಿ ಸಂತೋಷಕುಮಾರ ಎಂಬವರು ಅವರು ನೀಡಿದ ದೂರಿನ ಆಧಾರದ ಮೇಲೆ ಭೋಪಾಲ್ ಕ್ರೈಂ ಬ್ರಾಂಚ್ ಆರೋಪಿಗಳ ಶೋಧ ಕಾರ್ಯಾಚರಣೆ ಆರಂಭಿಸಿತು.
ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾಸ್ಟರ್‌ಮೈಂಡ್ ಪ್ರಿಯಾಂಕ್ ಶರ್ಮಾ, ತನಗೆ ಅನಾರೋಗ್ಯವಾಗಿದೆ ಎಂದು ನಾಟಕವಾಡಿ ಭೋಪಾಲ್‌ನ ಏಮ್ಸ್‌ (AIIMS) ಆಸ್ಪತ್ರೆಯ ಐಸಿಯು (ICU)ಗೆ ದಾಖಲಾಗಿದ್ದ. ಅಷ್ಟೇ ಅಲ್ಲದೆ ವಿದೇಶಕ್ಕೆ ಪರಾರಿಯಾಗಲು ಏಜೆಂಟರ ಜೊತೆ ಸಂಪರ್ಕದಲ್ಲಿದ್ದ. ಆದರೆ ಮಾಹಿತಿ ಸಿಕ್ಕ ನಂತರ ಪೊಲೀಸರು ಆಸ್ಪತ್ರೆ ಮೇಲೆ ದಾಳಿ ನಡೆಸಿ, ವೈದ್ಯರ ಸಲಹೆ ಪಡೆದ ನಂತರ ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಖಚಿತಪಡಿಸಿಕೊಂಡ ನಂತರ ಬಂಧಿಸಿದ್ದಾರೆ. ಈ ವೇಳೆ ಆತನ ಪತ್ನಿ ಮತ್ತು ತಾಯಿ ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.
ಪ್ರಿಯಾಂಕ್ ಸೇರಿದಂತೆ ಒಟ್ಟು 6 ಜನರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನು ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.  ಕೃತ್ಯಕ್ಕೆ ಬಳಸಿದ ಪಿಸ್ತೂಲ್, ವಾಹನ ಮತ್ತು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಪ್ರಿಯಾಂಕ್ ನಿವೃತ್ತ ಬಿಎಚ್‌ಇಎಲ್ (BHEL) ಅಧಿಕಾರಿಯ ಮಗನಾಗಿದ್ದು, ಈ ಹಿಂದೆ ದೆಹಲಿಯಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ. ಪೊಲೀಸರ ಶೀಘ್ರ ಕಾರ್ಯಾಚರಣೆಯಿಂದಾಗಿ ಸುಲಿಗೆಯಾದ 1.89 ಕೋಟಿ ರೂ. ಇದ್ದ ಬ್ಯಾಂಕ್ ಖಾತೆಗಳನ್ನು ತಕ್ಷಣವೇ ಫ್ರೀಜ್ ಮಾಡಲಾಗಿದೆ. ಹಣವನ್ನು ಶುಭ್ರಾ ಅವರಿಗೆ ಹಿಂತಿರುಗಿಸುವ ಪ್ರಕ್ರಿಯೆ ನಡೆಯುತ್ತಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement