ಜೇನು ತೆಗೆಯಲು ಹೋಗಿ ಬಂಡೆಯ ಸಂದಿನಲ್ಲಿ ಸಿಲುಕಿದ ಬಾಲಕನ ತಲೆ : ಅಲ್ಲಿಯೇ ಇತ್ತು ದೊಡ್ಡ ವಿಷಪೂರಿತ ಹಾವು !

ನಯಾಗಢ (ಒಡಿಶಾ): ಜೇನುತುಪ್ಪ ಸಂಗ್ರಹಿಸಲು ಹೋಗಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ಬಂಡೆಯ ಸಂದಿನಲ್ಲಿ ಸಿಲುಕಿಕೊಂಡು ಹೊರಬರಲಾರದೆ ಒದ್ದಾಡಿದ ಘಟನೆ ಓಡಿಶಾದ ನಯಾಗಢ್ ಜಿಲ್ಲೆಯಲ್ಲಿ ನಡೆದಿದೆ. ವಿಶೇಷವೆಂದರೆ, ಬಾಲಕನ ತಲೆ ಸಿಲುಕಿದ್ದ ಅದೇ ಬಂಡೆಯ ಸಂದಿಯಲ್ಲಿ ವಿಷಪೂರಿತ ದೊಡ್ಡ ಹಾವೊಂದು ಕುಳಿತಿದ್ದು, ಬಾಲಕ ಅದರಿಂದ ಪವಾಡಸದೃಶವಾಗಿ ಪಾರಾಗಿದ್ದಾನೆ. ಬುಧವಾರ ನಡೆದ ಸುಮಾರು 8 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಅಗ್ನಿಶಾಮಕ ದಳ ಮತ್ತು ಪೊಲೀಸರು ಬಾಲಕನನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಜಿಲ್ಲೆಯ ‘ಶಿಬಾ ಪ್ರಧಾನ’ ಎಂಬ ಬಾಲಕ ತನ್ನ ಚಿಕ್ಕಪ್ಪನೊಂದಿಗೆ ಕಣಿಪಾಡ ಅರಣ್ಯಕ್ಕೆ ಜೇನುತುಪ್ಪ ಸಂಗ್ರಹಿಸಲು ತೆರಳಿದ್ದ. ಕಾಡಿನಲ್ಲಿ ದೊಡ್ಡ ಬಂಡೆಯೊಂದರ ಸಂದಿನಲ್ಲಿ ಜೇನುಗೂಡು ಇರುವುದನ್ನು ಗಮನಿಸಿದ ಶಿಬಾ, ಅದನ್ನು ತೆಗೆಯಲು ಮುಂದಾಗಿದ್ದಾನೆ. ಬಂಡೆಯ ಆಳದಲ್ಲಿದ್ದ ಜೇನುಗೂಡಿಗೆ ಕೈಹಾಕುವಾಗ, ಆತನ ತಲೆ ಬಂಡೆಯ ಇಕ್ಕಟ್ಟಾದ ಸಂದಿನಲ್ಲಿ ಸಿಲುಕಿಕೊಂಡಿದೆ.

ಶಿಬಾನನ್ನು ಹೊರತೆಗೆಯಲು ಆತನ ಚಿಕ್ಕಪ್ಪ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೂಡಲೇ ಅವರು ಗ್ರಾಮಸ್ಥರಿಗೆ ಮತ್ತು ಕುಟುಂಬದವರಿಗೆ ಮಾಹಿತಿ ನೀಡಿದರು. ನಂತರ ಸ್ಥಳಕ್ಕೆ ಓಡಗಾಂವ್ ಮತ್ತು ನಯಾಗಢ್‌ನಿಂದ ಅಗ್ನಿಶಾಮಕ ದಳದ ಎರಡು ತಂಡಗಳು ಹಾಗೂ ಸ್ಥಳೀಯ ಪೊಲೀಸರು ಆಗಮಿಸಿದರು.
ರಕ್ಷಣಾ ಕಾರ್ಯ ಆರಂಭವಾದಾಗ ರಕ್ಷಣಾ ತಂಡಕ್ಕೆ ದೊಡ್ಡ ಸವಾಲೊಂದು ಎದುರಾಯಿತು. ಬಾಲಕನ ತಲೆ ಸಿಲುಕಿದ್ದ ಅದೇ ಕಲ್ಲಿನ ಸಂದಿನಲ್ಲಿ ದೊಡ್ಡದೊಂದು ವಿಷಪೂರಿತ ಹಾವು ಇರುವುದು ಪತ್ತೆಯಾಯಿತು. ಅದು ಈತನನ್ನೇ ನೋಡುತ್ತಿತ್ತು. ಇದು ರಕ್ಷಣಾ ಸಿಬ್ಬಂದಿ ಹಾಗೂ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿತ್ತು.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

8 ಗಂಟೆಗಳ ಕಾಲ ನಡೆದ ಹರಸಾಹಸ
ಬಾಲಕ ಗಾಬರಿಯಾಗದಂತೆ ಅಗ್ನಿಶಾಮಕ ಸಿಬ್ಬಂದಿ ಸತತವಾಗಿ ಧೈರ್ಯ ತುಂಬಿದರು. ಹಾವಿನಿಂದ ಬಾಲಕನಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿ, ಆಧುನಿಕ ಉಪಕರಣಗಳನ್ನು ಬಳಸಿ ಬಂಡೆಯನ್ನು ಜಾಗರೂಕತೆಯಿಂದ ಸರಿಸಲಾಯಿತು. ಸತತ 8 ಗಂಟೆಗಳ ಕಾಲ ನಡೆದ ಈ ರೋಚಕ ಕಾರ್ಯಾಚರಣೆಯ ನಂತರ ಶಿಬಾನನ್ನು ಸುರಕ್ಷಿತವಾಗಿ ಹೊರತರಲಾಯಿತು.
ರಕ್ಷಣೆಯ ನಂತರ ಬಾಲಕನಿಗೆ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಲಾಯಿತು. ಅದೃಷ್ಟವಶಾತ್ ಬಾಲಕನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಸದ್ಯ ಶಿಬಾನನ್ನು ಆತನ ಪೋಷಕರಿಗೆ ಒಪ್ಪಿಸಲಾಗಿದ್ದು, ಸಕಾಲದಲ್ಲಿ ಸ್ಪಂದಿಸಿದ ಅಗ್ನಿಶಾಮಕ ದಳದ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement