ಮಾಸ್ಕೋ: ಇರಾನ್ ವಿರುದ್ಧದ ಅಮೆರಿಕದ ಸೇನಾ ತಂತ್ರಗಳು ನಿರೀಕ್ಷಿತ ಯಶಸ್ಸು ಕಾಣದಿರಲು ರಷ್ಯಾದ ಅತ್ಯಾಧುನಿಕ ತಂತ್ರಜ್ಞಾನವೇ ಕಾರಣ ಎಂದುವರದಿಯೊಂದು ಹೇಳಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಪಡೆಗಳನ್ನು ಗುರಿಯಾಗಿಸಲು ರಷ್ಯಾ ಈಗ ‘ಜಾಮ್’ ಮಾಡಲು ಅಸಾಧ್ಯವಾದ (Unjammable) ಅತ್ಯಾಧುನಿಕ ಡ್ರೋನ್‌ಗಳನ್ನು ಇರಾನ್‌ಗೆ ಒದಗಿಸಲು ಮುಂದಾಗಿದೆ ಎಂದು ಆ ವರದಿ ತಿಳಿಸಿದೆ.
ರಷ್ಯಾದ ಸೇನಾ ಗುಪ್ತಚರ ಸಂಸ್ಥೆಯಾದ ‘ಜಿಆರ್‌ಯು’ (GRU) ಸಿದ್ಧಪಡಿಸಿರುವ ಹತ್ತು ಪುಟಗಳ ಗೌಪ್ಯ ದಾಖಲೆಯು ವ್ಲಾದಿಮಿರ್ ಪುತಿನ್ ಸರ್ಕಾರದ ಗುಪ್ತ ಯೋಜನೆಯನ್ನು ಬಹಿರಂಗಪಡಿಸಿದೆ. ‘ದಿ ಎಕನಾಮಿಸ್ಟ್’ ವರದಿಯ ಪ್ರಕಾರ, ರಷ್ಯಾವು ಇರಾನ್‌ಗೆ ಉಕ್ರೇನ್ ಯುದ್ಧದಲ್ಲಿ ಯಶಸ್ವಿಯಾಗಿ ಬಳಸಲಾದ 5,000 ಶಾರ್ಟ್ ರೇಂಜ್ ಫೈಬರ್-ಆಪ್ಟಿಕ್ ಡ್ರೋನ್ಗಳನ್ನು ನೀಡಲು ಒಪ್ಪಂದ ಮಾಡಿಕೊಂಡಿದೆ. ಇದರೊಂದಿಗೆ ಅಜ್ಞಾತ ಸಂಖ್ಯೆಯ ದೀರ್ಘ ವ್ಯಾಪ್ತಿಯ ಸ್ಯಾಟಲೈಟ್ ಚಾಲಿತ ಡ್ರೋನ್‌ಗಳನ್ನು ಸಹ ಇರಾನ್‌ಗೆ ಹಸ್ತಾಂತರಿಸಲು ರಷ್ಯಾ ಯೋಜಿಸಿದೆ.
ತರಬೇತಿ ಮತ್ತು ತಾಂತ್ರಿಕ ಬೆಂಬಲ:
ಕೇವಲ ಡ್ರೋನ್‌ಗಳ ಪೂರೈಕೆಯಷ್ಟೇ ಅಲ್ಲದೆ, ಈ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಅಮೆರಿಕನ್ ಪಡೆಗಳ ವಿರುದ್ಧ ಹೇಗೆ ಪರಿಣಾಮಕಾರಿಯಾಗಿ ಬಳಸಬೇಕು ಎಂಬ ಬಗ್ಗೆ ವೃತ್ತಿಪರ ತರಬೇತಿಯನ್ನು ನೀಡಲು ರಷ್ಯಾ ಸಿದ್ಧತೆ ನಡೆಸಿದೆ. ಈ ಮೊದಲು ಮಧ್ಯಪ್ರಾಚ್ಯದಲ್ಲಿ ಇರಾನ್ ಡ್ರೋನ್‌ಗಳು ಅಮೆರಿಕನ್ ಪಡೆಗಳನ್ನು ನಿಖರವಾಗಿ ಗುರಿಯಾಗಿಸಲು ರಷ್ಯಾ ಗುಪ್ತಚರ ಮಾಹಿತಿ ನೀಡಿತ್ತು ಎಂಬ ಸಂಶಯವಿತ್ತು. ಆದರೆ, ಈಗ ಬೃಹತ್ ಪ್ರಮಾಣದಲ್ಲಿ ಮಾರಕ ಶಸ್ತ್ರಾಸ್ತ್ರಗಳನ್ನೇ ಪೂರೈಸುತ್ತಿದೆ ಎನ್ನಲಾಗಿದೆ.
ವರದಿಯಾಗಿರುವ 10 ಪುಟಗಳ ಈ ಪ್ರಸ್ತಾವನೆಯಲ್ಲಿ ಆರು ನಕ್ಷೆಗಳು ಮತ್ತು ರೇಖಾಚಿತ್ರಗಳಿದ್ದು, ಇರಾನ್ ಕರಾವಳಿಯ ದ್ವೀಪಗಳ ಪ್ರದೇಶವನ್ನು ಅದರಲ್ಲಿ ಉಲ್ಲೇಖಿಸಲಾಗಿದೆ. ಅಮೆರಿಕ ಮತ್ತು ಅದರ ಮಿತ್ರಪಡೆಗಳಿಗೆ ಭಾರಿ ಹಾನಿ ಉಂಟುಮಾಡುವ ಸಾಮರ್ಥ್ಯವಿರುವ ಈ ನವೀನ ಶಸ್ತ್ರಾಸ್ತ್ರಗಳು ಇರಾನ್ ಸೇನೆಯ ಬಲವನ್ನು ಹೆಚ್ಚಿಸಲಿವೆ.
ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದ ಆರಂಭಿಕ ಹಂತದಲ್ಲಿ ಅಮೆರಿಕದ ಭೂಸೇನೆ ಇರಾನ್ ಮೇಲೆ ದಾಳಿ ಮಾಡಬಹುದು ಅಥವಾ ಖಾರ್ಗ್ ದ್ವೀಪದ ತೈಲ ಘಟಕಗಳನ್ನು ವಶಪಡಿಸಿಕೊಳ್ಳಬಹುದು ಎಂಬ ಭೀತಿಯಿತ್ತು. ಈ ಸಂದರ್ಭದಲ್ಲೇ ರಷ್ಯಾವು ಇರಾನ್‌ಗೆ ನೆರವಾಗಲು ಬೃಹತ್ ಯೋಜನೆಯೊಂದನ್ನು ಸಿದ್ಧಪಡಿಸಿತ್ತು ಎಂದು ‘ದಿ ಎಕನಾಮಿಸ್ಟ್’ ವರದಿ ಮಾಡಿದೆ.
ʼಜಾಮ್ʼ ಮಾಡಲು ಸಾಧ್ಯವಾಗದ ‘ವೈರ್’ ಡ್ರೋನ್‌ಗಳ ರಹಸ್ಯ
ರಷ್ಯಾ ಒದಗಿಸಲು ಮುಂದಾಗಿರುವ ‘ಫೈಬರ್ ಆಪ್ಟಿಕ್’ ಡ್ರೋನ್‌ಗಳು ಯುದ್ಧಭೂಮಿಯಲ್ಲಿ ಅತ್ಯಂತ ಭಯಾನಕವಾಗಿವೆ. ಇವುಗಳನ್ನು ರೇಡಿಯೋ ತರಂಗಗಳ ಬದಲಿಗೆ ತೆಳುವಾದ ವೈರ್‌ಗಳ ಮೂಲಕ ನಿಯಂತ್ರಿಸಲಾಗುತ್ತದೆ. ಹೀಗಾಗಿ, ಶತ್ರು ಸೈನ್ಯವು ಇವುಗಳ ಸಿಗ್ನಲ್ ಅನ್ನು ‘ಜಾಮ್’ ಮಾಡಲು ಅಥವಾ ಆಪರೇಟರ್ ಇರುವ ಸ್ಥಳವನ್ನು ಪತ್ತೆಹಚ್ಚಲು ಸಾಧ್ಯವಿಲ್ಲ. 40 ಕಿಲೋಮೀಟರ್ ದೂರದವರೆಗೂ ಅತ್ಯಂತ ನಿಖರವಾಗಿ ದಾಳಿ ಮಾಡುವ ಸಾಮರ್ಥ್ಯ ಇವುಗಳಿಗಿದೆ. ಇತ್ತೀಚೆಗೆ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಸಂಘಟನೆಯು ಇಸ್ರೇಲ್ ವಿರುದ್ಧ ಇಂತಹದ್ದೇ ಡ್ರೋನ್‌ಗಳನ್ನು ಬಳಸಿರುವುದು ಈ ವರದಿಗೆ ಪುಷ್ಟಿ ನೀಡಿದೆ.
ಉಕ್ರೇನ್ ಯುದ್ಧದಲ್ಲಿ ರಷ್ಯಾ ಬಳಸುತ್ತಿದ್ದ ‘ಸ್ಟಾರ್‌ಲಿಂಕ್’ ಆಧಾರಿತ ಸ್ಯಾಟಲೈಟ್ ಗೈಡೆಡ್ ಡ್ರೋನ್‌ಗಳನ್ನು ಈಗ ಇರಾನ್‌ಗೆ ವರ್ಗಾಯಿಸಲು ರಷ್ಯಾ ಯೋಜಿಸಿದೆ. ಈ ಹಿಂದೆ ಎಲೋನ್ ಮಸ್ಕ್ ಅವರು ಉಕ್ರೇನ್‌ನಲ್ಲಿ ರಷ್ಯಾಕ್ಕೆ ಸ್ಟಾರ್‌ಲಿಂಕ್ ಸೇವೆ ನಿರಾಕರಿಸಿದ್ದರು. ಆದರೆ, ಮಧ್ಯಪ್ರಾಚ್ಯದಲ್ಲಿ ಇಂತಹ ಯಾವುದೇ ನಿರ್ಬಂಧಗಳಿಲ್ಲ.
ಇರಾನ್ ವಿದ್ಯಾರ್ಥಿಗಳಿಗೆ ತರಬೇತಿ:
ರಷ್ಯಾದ ಈ ಯೋಜನೆಯು ಕೇವಲ ಶಸ್ತ್ರಾಸ್ತ್ರ ಪೂರೈಕೆಗೆ ಸೀಮಿತವಾಗಿಲ್ಲ. ರಷ್ಯಾದ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 10,000 ಇರಾನ್ ವಿದ್ಯಾರ್ಥಿಗಳನ್ನು ಡ್ರೋನ್ ಆಪರೇಟರ್‌ಗಳನ್ನಾಗಿ ನೇಮಿಸಿಕೊಳ್ಳಲು ರಷ್ಯಾ ಉದ್ದೇಶಿಸಿದೆ. ಇದರೊಂದಿಗೆ ರಷ್ಯನ್ ಮತ್ತು ಪರ್ಷಿಯನ್ ಎರಡೂ ಭಾಷೆ ಮಾತನಾಡುವ ತಜಿಕಿಸ್ತಾನ್ ಪ್ರಜೆಗಳನ್ನು ಹಾಗೂ ಸಿರಿಯಾದ ಅಲವೈಟ್ ಅಲ್ಪಸಂಖ್ಯಾತರನ್ನು ಈ ಕಾರ್ಯಾಚರಣೆಗೆ ಬಳಸಿಕೊಳ್ಳುವ ಆಲೋಚನೆ ರಷ್ಯಾದ್ದಾಗಿದೆ.
ರಷ್ಯಾದ ಗುಪ್ತಚರ ತಜ್ಞ ಕ್ರಿಸ್ಟೋ ಗ್ರೋಜೆವ್ ಅವರ ಪ್ರಕಾರ, ರಷ್ಯಾದ ಸೇನಾ ಗುಪ್ತಚರ ಸಂಸ್ಥೆ (GRU) ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಇರಾನ್‌ಗೆ ಸಾಧ್ಯವಿರುವ ಎಲ್ಲಾ ರೀತಿಯ ತಾಂತ್ರಿಕ ಬೆಂಬಲ ನೀಡಲು ಮುಂದಾಗಿದೆ. ಮಾರ್ಚ್ ತಿಂಗಳಿನಿಂದಲೇ ರಷ್ಯಾವು ತನ್ನ ಶಹೀದ್ ಡ್ರೋನ್‌ಗಳ ಸುಧಾರಿತ ಆವೃತ್ತಿಗಳನ್ನು ಇರಾನ್‌ಗೆ ಕಳುಹಿಸಲು ಸಿದ್ಧತೆ ನಡೆಸಿರುವುದು ಪಾಶ್ಚಿಮಾತ್ಯ ದೇಶಗಳ ನಿದ್ದೆಗೆಡಿಸಿದೆ.
ಒಟ್ಟಾರೆಯಾಗಿ, ರಷ್ಯಾದ ಈ ‘ಫೈಬರ್ ಆಪ್ಟಿಕ್’ ಮತ್ತು ‘ಸ್ಟಾರ್‌ಲಿಂಕ್’ ತಂತ್ರಜ್ಞಾನಗಳು ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಸೇನಾ ಪ್ರಾಬಲ್ಯಕ್ಕೆ ಚಾಲೆಂಜ್ ನೀಡುತ್ತಿವೆ.


ನಿಮ್ಮ ಕಾಮೆಂಟ್ ಬರೆಯಿರಿ