ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ ಉಂಟಾಗಿದ್ದು, ಎಐಎಡಿಎಂಕೆ (AIADMK) ಪಕ್ಷದ ಒಳಗಿನ ಬಿಕ್ಕಟ್ಟು ಮಂಗಳವಾರ ತಾರಕಕ್ಕೇರಿದೆ. ಪಕ್ಷದ ಹಿರಿಯ ನಾಯಕ ಸಿ.ವಿ. ಷಣ್ಮುಗಂ ಅವರು ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ನಟ ವಿಜಯ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ.
ಬಂಡಾಯ ಶಾಸಕರೊಂದಿಗೆ ಸಮಾಲೋಚನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ವಿ. ಷಣ್ಮುಗಂ, “ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ, ಡಿಎಂಕೆ (DMK) ಸಹಾಯದೊಂದಿಗೆ ಮುಖ್ಯಮಂತ್ರಿಯಾಗಲು ಎಡಪ್ಪಾಡಿ ಕೆ. ಪಳನಿಸ್ವಾಮಿ ಸಂಚು ನಡೆಸುತ್ತಿದ್ದಾರೆ,” ಎಂದು ಆರೋಪಿಸಿದರು.
“ನಮ್ಮ ಸಭೆಗಳಲ್ಲಿ ಡಿಎಂಕೆ ಬೆಂಬಲದೊಂದಿಗೆ ಇಪಿಎಸ್ ಅವರನ್ನು ಮುಖ್ಯಮಂತ್ರಿ ಮಾಡಲಾಗುವುದು ಎಂದು ನಮಗೆ ತಿಳಿಸಲಾಯಿತು. ಈ ನಿರ್ಧಾರವನ್ನು ಒಪ್ಪಿಕೊಳ್ಳುವಂತೆ ನಮಗೆ ಒತ್ತಡ ಹೇರಲಾಯಿತು. ಆದರೆ ಎಂ.ಜಿ.ಆರ್ ಮತ್ತು ಜಯಲಲಿತಾ ಅವರು ಡಿಎಂಕೆ ವಿರುದ್ಧವೇ ಈ ಪಕ್ಷವನ್ನು ಕಟ್ಟಿದ್ದರು. ಡಿಎಂಕೆ ಜೊತೆ ಕೈಜೋಡಿಸುವುದು ಪಕ್ಷದ ಸಿದ್ಧಾಂತಕ್ಕೆ ಮಾಡುವ ದ್ರೋಹ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಿಜಯ ಸರ್ಕಾರಕ್ಕೆ ‘ರೆಬೆಲ್’ ಶಾಸಕರ ಸಾಥ್
ತಮಿಳುನಾಡು ಚುನಾವಣಾ ಫಲಿತಾಂಶವನ್ನು ಗೌರವಿಸುವುದಾಗಿ ತಿಳಿಸಿದ ಷಣ್ಮುಗಂ ಬಣ, ವಿಜಯ ಅವರ ಟಿವಿಕೆ ಪಕ್ಷಕ್ಕೆ ಜನಾದೇಶ ಸಿಕ್ಕಿದೆ ಎಂದು ಒಪ್ಪಿಕೊಂಡಿದೆ. ಸಭೆಯಲ್ಲಿ ಕೆಲವು ಪ್ರಮುಖ ತೀರ್ಮಾನಗಳನ್ನು ಕೈಗೊಂಡಿದೆ.
ವಿಜಯ ನೇತೃತ್ವದ ಸರ್ಕಾರ ರಚನೆಗೆ ಬಂಡಾಯ ಶಾಸಕರು ಸಂಪೂರ್ಣ ಬೆಂಬಲ ನೀಡಲಿದ್ದಾರೆ.
ಪಳನಿಸ್ವಾಮಿ ಬದಲು ಹಿರಿಯ ನಾಯಕ ಎಸ್.ಪಿ. ವೇಲುಮಣಿ ಅವರನ್ನು ಎಐಎಡಿಎಂಕೆ ಶಾಸಕಾಂಗ ಪಕ್ಷದ ನೂತನ ನಾಯಕನನ್ನಾಗಿ ನೇಮಿಸಲು ನಿರ್ಣಯ ಕೈಗೊಳ್ಳಲಾಗಿದೆ.
ಡಿಎಂಕೆ ಒಳಗೊಂಡ ಯಾವುದೇ ಮೈತ್ರಿಕೂಟದ ಭಾಗವಾಗಿ ಎಐಎಡಿಎಂಕೆ ಇರುವುದಿಲ್ಲ ಎಂದು ಷಣ್ಮುಗಂ ಸ್ಪಷ್ಟಪಡಿಸಿದ್ದಾರೆ.
ಪಕ್ಷ ಒಡೆಯುವುದಿಲ್ಲ: ವೇಲುಮಣಿ ಸ್ಪಷ್ಟನೆ
ಈ ಬೆಳವಣಿಗೆಗಳ ನಡುವೆ ಮಾತನಾಡಿದ ಎಸ್.ಪಿ. ವೇಲುಮಣಿ, “ನಾವು ಎಐಎಡಿಎಂಕೆಯನ್ನು ಒಡೆಯಲು ಬಯಸುವುದಿಲ್ಲ, ಪಕ್ಷ ಎಂದಿಗೂ ಇಬ್ಭಾಗ ಆಗುವುದಿಲ್ಲ. ನಮ್ಮ ಗುರಿ ಪಕ್ಷವನ್ನು ಪುನಶ್ಚೇತನಗೊಳಿಸುವುದೇ ಹೊರತು ವಿನಾಶ ಮಾಡುವುದಲ್ಲ,” ಎಂದು ಪಕ್ಷದ ಏಕತೆಯನ್ನು ಕಾಪಾಡುವ ಮಾತುಗಳನ್ನಾಡಿದ್ದಾರೆ.
ರಾಜಕೀಯ ಮೈತ್ರಿಗೆ ಮುಂದಾದ ವಿಜಯ
ಇತ್ತ ವಿಜಯ ಅವರು ತಮ್ಮ ಸರ್ಕಾರದ ಬಲವರ್ಧನೆಗೆ ಮುಂದಾಗಿದ್ದು, ಇಂದು, ಮಂಗಳವಾರ ವಿಸಿಕೆ (VCK) ಮುಖ್ಯಸ್ಥ ತೋಳ್ ತಿರುಮಾವಳವನ್, ಕಾಂಗ್ರೆಸ್ ನಾಯಕರು ಮತ್ತು ಸಿ.ವಿ. ಷಣ್ಮುಗಂ ನೇತೃತ್ವದ ಬಂಡಾಯ ಬಣವನ್ನು ಭೇಟಿಯಾಗಲಿದ್ದಾರೆ. ಈ ಭೇಟಿಯು ತಮಿಳುನಾಡು ರಾಜಕೀಯದಲ್ಲಿ ಹೊಸ ಮೈತ್ರಿಕೂಟದ ಮುನ್ಸೂಚನೆ ನೀಡಿದೆ.
ಸದ್ಯ ಎಐಎಡಿಎಂಕೆ ಶಾಸಕರು ಎರಡು ಬಣಗಳಾಗಿ ವಿಭಜನೆಯಾಗಿದ್ದು, ಈ ಸಂಘರ್ಷ ಶೀಘ್ರದಲ್ಲೇ ವಿಧಾನಸಭೆಯ ಅಂಗಳದಲ್ಲಿಯೂ ಪ್ರತಿಧ್ವನಿಸುವ ಸಾಧ್ಯತೆಯಿದೆ.


ನಿಮ್ಮ ಕಾಮೆಂಟ್ ಬರೆಯಿರಿ