ಬೆಂಗಳೂರು : ಕನ್ನಡ ಸಿನೆಮಾ ಹಾಗೂ ಕಿರುತೆರೆಯ ಖ್ಯಾತ ನಟ, ನಿರ್ಮಾಪಕ, ಕಂಠದಾನ ಕಲಾವಿದ ದಿಲೀಪ ರಾಜ (48) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಾಯಕ ನಟ, ಪೋಷಕ ನಟ, ನಿರ್ಮಾಪಕ ಹೀಗೆ ವಿವಿಧ ರಂಗಗಳಲ್ಲಿ ಗುರುತಿಸಿಕೊಂಡಿದ್ದ ಅವರು ಸಿನೆಮಾ ಹಾಗೂ ಕಿರುತೆರೆ ಎರಡರಲ್ಲೂ ತೊಡಗಿಸಿಕೊಂಡಿದ್ದರು.
ರಾತ್ರಿ ಮಲಗಿದ್ದ ದಿಲೀಪರಾಜ ((Dilip Raj) ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರ ಪತ್ನಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ಅವರ ನಿಧನಕ್ಕೆ ಚಿತ್ರರಂಗದ ಅನೇಕ ಕಲಾವಿದರು ಸಂತಾಪ ಸೂಚಿಸಿದ್ದಾರೆ.
ದಿಲೀಪರಾಜ ಅವರು ನಟಿಸಿದ ಇತ್ತೀಚಿನ ʼಲವ್ ಮಾಕ್ಟೆಲ್ 3′ ಸಿನಿಮಾ ಹಿಟ್ ಆಗಿತ್ತು. ಅವರು 2005ರಲ್ಲಿ ತೆರೆಕಂಡ ʼಭಾಯ್ ಫ್ರೆಂಡ್ʼ ಚಿತ್ರದ ಮೂಲಕ ಕನ್ನಚಿತ್ರ ರಂಗ ಪ್ರವೇಶಿಸಿದರು. ಮೊದಲ ಚಿತ್ರದ ಮೂಲಕವೇ ಗಮನ ಸೆಳೆದರು. 2007ರಲ್ಲಿ ಪುನೀತರಾಜಕುಮಾರ-ಪಾರ್ವತಿ ಮೆನನ್ ನಟನೆಯ ʼಮಿಲನʼ ಚಿತ್ರದ ಖಳನಾಯಕ ಪಾತ್ರ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಬಳಿಕ ಅವರು ಅನೇಕ ಚಿತ್ರಗಳಲ್ಲಿ ಮುಖ್ಯ ಪಾತ್ರ ನಿರ್ವಹಿಸಿದರು. ʼ7 ಓ ಕ್ಲಾಕ್ʼ, ʼಕ್ಷಣ ಕ್ಷಣʼ, ʼಯು ಟರ್ನ್ʼ, ʼಅಂಬಿ ನಿಂಗ್ ವಯಸ್ಸಾಯ್ತೋʼ, ʼಕಿಸ್ಮತ್ʼ ಮುಂತಾದ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು.
ಜೀ ಕನ್ನಡದ ಜನಪ್ರಿಯ ಧಾರಾವಾಹಿ ʼಹಿಟ್ಲರ್ ಕಲ್ಯಾಣʼದಲ್ಲಿ ನಾಯಕನಾಗಿ ನಟಿಸಿ ವ್ಯಾಪಕ ಮನ್ನಣೆಯನ್ನು ಗಳಿಸಿದರು. ನಟನೆ ಮತ್ತು ನಿರ್ಮಾಣದ ಹೊರತಾಗಿ, ದಿಲೀಪ್ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಅಲ್ಲದೆ, ಪತ್ನಿ ಶ್ರೀವಿದ್ಯಾ ಅವರೊಂದಿಗೆ ಸೇರಿ ಧಾರಾವಾಹಿಗಳನ್ನು ನಿರ್ಮಿಸಿದ್ದಾರೆ. ಅವರು ನಿರ್ಮಿಸಿದ ಧಾರಾವಾಹಿಗಳೆಲ್ಲ ಹಿಟ್ ಆಗಿವೆ. ‘ಹಿಟ್ಲರ್ ಕಲ್ಯಾಣ’, ʼಪಾರು, ʼನಾ ನಿನ್ನ ಬಿಡಲಾರೆ. ʼಕೃಷ್ಣ ರುಕ್ಕುʼ, ʼವಿದ್ಯಾ ವಿನಾಯಕʼ ಮುಂತಾದ ಧಾರಾವಾಹಿಗಳು ಇವರ ನಿರ್ಮಾಣದಲ್ಲಿ ಮೂಡಿ ಬಂದಿವೆ.


ನಿಮ್ಮ ಕಾಮೆಂಟ್ ಬರೆಯಿರಿ