ಹೊನ್ನಾವರ : ಲಯಬ್ರಹ್ಮರೆಂದೇ ಖ್ಯಾತರಾಗಿದ್ದ ಬಡಗುತಿಟ್ಟು ಯಕ್ಷಗಾನದ ಅಗ್ರಮಾನ್ಯ ಸಾಂಪ್ರದಾಯಿಕ ಭಾಗವತ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಡಿನಬಾಳದ ಕಪ್ಪೆಕೆರೆ ಸುಬ್ರಾಯ ಹೆಗಡೆ (79) ಬುಧವಾರ (ಮೇ 13) ನಿಧನರಾಗಿದ್ದಾರೆ.
ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. 1947೭ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಡಿನಬಾಳದಲ್ಲಿ ಗೋಪಿ ಮತ್ತು ಈಶ್ವರ ಹೆಗಡೆ ದಂಪತಿಗೆ ಜನಿಸಿದ ಇವರು ಯಕ್ಷಗಾನದ ಕುಟುಂಬದ ಹಿನ್ನೆಲೆಯಿರುವ ಕುಟುಂಬದಿಂದ ಬಂದವರು. ಇವರ ಸಹೋದರ ಕಪ್ಪೆಕೆರೆ ಮಹಾದೇವ ಹೆಗಡೆ ಅವರು ವೇಷಧಾರಿಯಾಗಿದ್ದರು.
ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ದೇವರು ಹೆಗಡೆ ಮುರೂರು ಮೊದಲಾದ ಶ್ರೇಷ್ಠ ಕಲಾವಿದರ ರಂಗದ ಒಡನಾಡಿಯಾಗಿದ್ದರು.
ಭಾಗವತಿಕೆಯಲ್ಲಿ ಕೆರೆಮನೆ ಮಹಾಬಲ ಹೆಗಡೆ ಹಾಗೂ ಗಣಪತಿ ಹೆಗಡೆಯವರ ಬಳಿ ಅಭ್ಯಾಸ ಮಾಡಿದ್ದರು. ಅಲ್ಲದೆ, ಮರವಂತೆ ನರಸಿಂಹ ದಾಸ, ಎಂ. ನಾರ್ಣಪ್ಪ ಉಪ್ಪೂರರಿಂದಲೂ ಪ್ರೇರಣೆ ಪಡೆದಿದ್ದರು. ಆರಂಭದಲ್ಲಿ ಯಕ್ಷಗಾನ ವೇಷವನ್ನೂ ಮಾಡಿದ್ದರು. ಗುಂಡಬಾಳ, ಕೆರೆಮನೆ ಮೇಳ ಇಡಗುಂಜಿ, ಅಮೃತೇಶ್ವರೀ, ಕಮಲಶಿಲೆ, ಸಾಲಿಗ್ರಾಮ, ಬಚ್ಚಗಾರು, ಪಂಚಲಿಂಗ ಮೊದಲಾದ ಮೇಳಗಳಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನ ಭಾಗವತರಾಗಿ ಕಲಾಸೇವೆ ಗೈದಿದ್ದರು. ಪ್ರಸಂಗ ಪುಸ್ತಕ ನೋಡದೆ ಭಾಗವತಿಕೆ ಮಾಡುವ ಸಾಮರ್ಥ್ಯ ಅವರಿಗಿತ್ತು. ಲಯಬದ್ದತೆ, ರಂಗ ನಿರ್ದೇಶನದಲ್ಲಿ ಅಪಾರ ಹಿಡಿತ ಹೊಂದಿದ್ದ ಅವರು ಯಕ್ಷಗಾನದ ಸಾಂಪ್ರದಾಯಿಕ ಹಾಡುಗಾರಿಕೆಯನ್ನು ಕಾಪಾಡಿಕೊಂಡು ಬಂದವರು.
ಹೊನ್ನಾವರದ ಹೊಸಾಕುಳಿಯಲ್ಲಿ ತಾಳಮದ್ದಲೆಗಾಗಿಯೇ ಸ್ಥಾಪನೆಗೊಂಡ ಕಲಾವರ್ಧಕ ಸಂಘದಲ್ಲಿ ನಾಲ್ಕು ದಶಕಗಳಿಂದ ಭಾಗವತರಾಗಿದ್ದರು. ಅದ್ಭುತ ತಾಳ, ಲಯ, ಸಿದ್ಧಿಯನ್ನು ಪಡೆದಿದ್ದ ಇವರು ಯಕ್ಷಗಾನದ ಮುಮ್ಮೇಳದ ಕಲಾವಿದರಿಗೆ ಅತ್ಯಂತ ಪ್ರಿಯ ಭಾಗವತರಾಗಿದ್ದರು.
ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಮಂಗಲ ಪ್ರಶಸ್ತಿ, ಯಕ್ಷಗಾನ ಕಲಾರಂಗ ಉಪ್ಪೂರು ನಾರ್ಣಪ್ಪರ ನೆನಪಿನ ಪ್ರಶಸ್ತಿ, ಯಕ್ಷಗಾನ ಕಲಾರಂಗದ ಸುವರ್ಣ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಇವರ ನಿಧನಕ್ಕೆ ಯಕ್ಷಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ