ಭಾರತಕ್ಕೂ ತಟ್ಟಿದ ಮಧ್ಯಪ್ರಾಚ್ಯ ಸಂಘರ್ಷದ ಬಿಸಿ : ದೇಶಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಯುದ್ಧ ಹಾಗೂ ಉದ್ವಿಗ್ನ ಪರಿಸ್ಥಿತಿ ಪರಿಣಾಮ ಇದೀಗ ಭಾರತಕ್ಕೂ ತಟ್ಟಿದ್ದು, ದೇಶದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಈ ದರ ಏರಿಕೆಗಳು ಇಂದಿನಿಂದಲೇ ಜಾರಿಯಾಗಿವೆ. ನಾಲ್ಕು ವರ್ಷಗಳ ಬಳಿಕ ಸರ್ಕಾರಿ ತೈಲ ಕಂಪನಿಗಳು ಇಂಧನ ದರ ಹೆಚ್ಚಿಸಿವೆ. ಶುಕ್ರವಾರದ ಪರಿಷ್ಕರಣೆಯ ನಂತರ ದೇಶದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ₹94.77 ರಿಂದ ₹97.77 ಕ್ಕೆ ಏರಿಕೆಯಾಗಿದೆ. ಡೀಸೆಲ್ ದರ ₹87.67 ರಿಂದ ₹90.67 ಕ್ಕೆ ತಲುಪಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಲೀಟರ್‌ಗೆ 3.29 ರೂ. ಹೆಚ್ಚಳವಾಗಿ 108.74 ರೂ.ಗೆ ಮಾರಾಟವಾಗುತ್ತಿದೆ. ಡೀಸೆಲ್ ಲೀಟರ್‌ಗೆ 3.11 ರೂ.ಗಳಷ್ಟು ಏರಿಕೆಯಾಗಿ 95.13 ರೂ.ಗೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 3.14 ರೂ. ಏರಿಕೆಯಾಗಿ 106.68 ರೂ.ಗೆ ತಲುಪಿದೆ, ಡೀಸೆಲ್ ಬೆಲೆ ಈಗ ಲೀಟರ್‌ಗೆ 3.11 ರೂ. ಏರಿಕೆಯಾಗಿ 93.14 ರೂ.ಗೆ ತಲುಪಿದೆ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 2.83 ರೂ. ಏರಿಕೆಯಾಗಿ 103.67 ರೂ.ಗೆ ತಲುಪಿದೆ ಮತ್ತು ಡೀಸೆಲ್ ದರ ಲೀಟರ್‌ಗೆ 2.86 ರೂ. ಏರಿಕೆಯಾಗಿ 95.25 ರೂ.ಗೆ ತಲುಪಿದೆ.
ಬೆಂಗಳೂರಿನಲ್ಲಿ ಗುರುವಾರ 102.96 ರೂ ಇದ್ದ ಪೆಟ್ರೋಲ್​ ಬೆಲೆ ಶುಕ್ರವಾರ 106.17ರೂ.ಗೆ ಏರಿಕೆ ಆಗಿದೆ. ಅದೇ ಡೀಸೆಲ್​ ಬೆಲೆ ಪ್ರತಿ ಲೀಟರ್​ ಗೆ 90.99 ಇದ್ದ ಬೆಲೆ ಇಂದು 94.10 ರೂಪಾಯಿಗೆ ಏರಿಕೆ ಆಗಿದೆ. ಸಿಎನ್‌ಜಿ ಬೆಲೆಯನ್ನು 2 ರೂಪಾಯಿ ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್​​ಗೆ 3.27 ರೂಪಾಯಿ ಏರಿಕೆಯಾಗಿದ್ದು, ಡಿಸೇಲ್ ಬೆಲೆ ಲೀಟರ್​​ಗೆ 3.12 ರೂಪಾಯಿ ಏರಿಕೆಯಾಗಿದೆ.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

ಬೆಲೆ ಏರಿಕೆಗೆ ಪ್ರಮುಖ ಕಾರಣಗಳು
ಇರಾನ್‌-ಅಮೆರಿಕ ಯುದ್ಧದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಏರುಪೇರಾಗಿದೆ. ಭಾರತ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಬೆಲೆ ಫೆಬ್ರವರಿಯಲ್ಲಿ ಬ್ಯಾರೆಲ್‌ಗೆ 69 ಡಾಲರ್ ಇತ್ತು. ಆದರೆ ಯುದ್ಧದ ಕಾರಣದಿಂದಾಗಿ ಇದು ಈಗ 113-114 ಡಾಲರ್‌ಗೆ ತಲುಪಿದೆ.
ಕಳೆದ 11 ವಾರಗಳಿಂದ ಬೆಲೆ ಏರಿಕೆ ಮಾಡದೆ ಸ್ಥಿರತೆ ಕಾಯ್ದುಕೊಂಡಿದ್ದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು (IOC, BPCL, HPCL), ಭಾರೀ ನಷ್ಟವನ್ನು ಅನುಭವಿಸುತ್ತಿದ್ದವು. ಆರ್ಥಿಕ ಹೊರೆ ತಡೆಯಲಾರದೆ ಈಗ ಬೆಲೆ ಏರಿಕೆಯ ಭಾಗಶಃ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಿವೆ.
2022ರ ಏಪ್ರಿಲ್‌ನಿಂದ ತೈಲ ಕಂಪನಿಗಳು ದೈನಂದಿನ ಬೆಲೆ ಪರಿಷ್ಕರಣೆಯನ್ನು ಸ್ಥಗಿತಗೊಳಿಸಿದ್ದವು. ಆದರೆ, ಈಗ ಜಾಗತಿಕ ಮಾರುಕಟ್ಟೆಯ ಒತ್ತಡಕ್ಕೆ ಮಣಿದು ದರ ಏರಿಕೆ ಮಾಡಲಾಗಿದೆ. ತಜ್ಞರ ಪ್ರಕಾರ, ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 105 ಡಾಲರ್ ದಾಟಿರುವುದರಿಂದ ಮುಂದಿನ ದಿನಗಳಲ್ಲಿ ಇಂಧನ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement